ಮೀಸಲಾತಿ ಬಗೆಗಿನ ಸುಪ್ರೀಂ ತೀರ್ಪು ಮರುಪರಿಶೀಲನೆಯಾಗಲಿ: ನ್ಯಾ.ನಾಗಮೋಹನ್‌ ದಾಸ್

Update: 2020-02-25 16:24 GMT

ಬೆಂಗಳೂರು, ಫೆ.25: ಮೀಸಲಾತಿ ಮೂಲಭೂತ ಹಕ್ಕು ಅಲ್ಲ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಮರುಪರಿಶೀಲನೆ ಮಾಡಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಆಗ್ರಹಿಸಿದ್ದಾರೆ.

ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವ ಕುರಿತು ವರದಿ ಸಂಬಂಧ ಎಸ್ಸಿ-ಎಸ್ಟಿ ಸಮುದಾಯಗಳ ಅಹವಾಲು ಸ್ವೀಕಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಂವಿಧಾನದಲ್ಲಿ ಎಲ್ಲರಿಗೂ ಮೀಸಲಾತಿ ಕಲ್ಪಿಸಲಾಗಿದೆ. ಅಲ್ಲದೆ, ಅದನ್ನು ಎಲ್ಲರ ಹಕ್ಕೂ ಎಂದೂ ಹೇಳಲಾಗಿದೆ. ಆದರೆ, ಇತ್ತೀಚಿಗೆ ಸುಪ್ರೀಂಕೋರ್ಟ್ ಸರಕಾರಿ ಉದ್ಯೋಗ, ಭಡ್ತಿಯಲ್ಲಿ ಮೀಸಲಾತಿ ಸೌಲಭ್ಯ ಮೂಲಭೂತ ಹಕ್ಕು ಅಲ್ಲ. ಮೀಸಲಾತಿ ನೀಡುವ ಹಕ್ಕು ರಾಜ್ಯಗಳಿಗಿದೆ ಎಂದು ಹೇಳಿರುವುದು ಆತಂಕಕಾರಿ ಸಂಗತಿ ಎಂದರು.

ಮೀಸಲಾತಿ ಸಾಮಾಜಿಕ ನ್ಯಾಯದ ಸಣ್ಣ ಭಾಗವಾಗಿದೆ. ಇದನ್ನು ಜಾರಿಗೊಳಿಸಲು ಸಂವಿಧಾನದಲ್ಲಿ ಅವಕಾಶ ಇದೆ. ಹಾಗಾಗಿ, ಸರಕಾರವೂ ಈ ಬಗ್ಗೆ ಜವಾಬ್ದಾರಿಯಾಗಿದೆ. ದಲಿತ ಮತ್ತು ಶೋಷಿತ ಸಮುದಾಯ ಪಡೆದುಕೊಳ್ಳುವುದು ಹಕ್ಕು. ಆದರೆ, ಇದು ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ಹೇಳುವುದು ಸರಿಯಲ್ಲ ಎಂದು ನಾಗಮೋಹನ್‌ ದಾಸ್ ಹೇಳಿದರು.

ನ್ಯಾಯಾಲಯದ ತೀರ್ಪುಗಳಿಗೆ ಗೌರವ ನೀಡಬೇಕಾಗಿದೆ. ಆದರೆ, ಆ ತೀರ್ಪುಗಳನ್ನು ವಿಮರ್ಶೆ ಮಾಡುವಂತಹ ಹಕ್ಕು ನಮ್ಮ ಸಂವಿಧಾನ ಕಲ್ಪಿಸಿಕೊಟ್ಟಿದೆ. ಆ ಮೂಲಕ ಕಾನೂನು ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಇಂದಿನ ಯುವ ಸಮುದಾಯದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ವಿರೋಧಿ ಭಾವನೆಯನ್ನು ಸೃಷ್ಟಿಸಲಾಗಿದೆ. ಅಂಬೇಡ್ಕರ್ ಹತ್ತು ವರ್ಷಗಳಷ್ಟೇ ಮೀಸಲಾತಿ ನೀಡಿ ಎಂದಿದ್ದರು. ಆದರೆ, ಇನ್ನೂ ಯಾಕೆ ಮೀಸಲಾತಿ ಬೇಕು ಎನ್ನುತ್ತಿದ್ದಾರೆ ಎಂಬ ಪ್ರಶ್ನೆಗಳನ್ನು ಕೇಳುವವರಿದ್ದಾರೆ. ಆದರೆ, ಇಂದಿನ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮೀಸಲಾತಿ ಅತ್ಯಗತ್ಯವಾಗಿದೆ ಎಂದರು.

ಮೀಸಲಾತಿ ಕುರಿತು, ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳು ಈ ಕಡೆಗೆ ಯೋಚಿಸಬೇಕು. ಮೀಸಲಾತಿ ಪ್ರಮಾಣ ಹೆಚ್ಚಿಸುವ ಕುರಿತು ಹೆಚ್ಚಿನ ಚರ್ಚೆ, ಸಮಾಲೋಚನೆ ನಡೆಸಲು ಆಯೋಗ ಮುಕ್ತ ಅವಕಾಶ ನೀಡಲಿದೆ. ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಲು ಸಾಧ್ಯವಾಗದವರು ಬೆಂಗಳೂರಿನ ಆಯೋಗದ ಕಚೇರಿಗೆ ಬಂದು ತಮ್ಮ ಅಹವಾಲು ಸಲ್ಲಿಕೆಗೂ ಅವಕಾಶ ನೀಡಲಾಗುವುದು ಎಂದು ನಾಗಮೋಹನ್ ದಾಸ್ ತಿಳಿಸಿದರು.

ವಕೀಲ ಅನಂತ್ ನಾಯ್ಕ ಮಾತನಾಡಿ, ಮೀಸಲಾತಿಗೆ ಸಂಬಂಧಿಸಿದಂತೆ ಸುಮಾರು 37 ಸಭೆಗಳು ನಡೆದಿವೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಭೆಗಳು ನಡೆಯಲಿದ್ದು, ಮುಂದಿನ ದಿನಗಳಲ್ಲಿ ಸರಕಾರಕ್ಕೆ ಉತ್ತಮ ವರದಿ ಸಲ್ಲಿಕೆಯಾಗಲಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಪೆದ್ದಪ್ಪಯ್ಯ, ಪ್ರೊ.ಚಂದ್ರಶೇಖರ್, ರಾಜಶೇಖರಮೂರ್ತಿ, ಸಂಧ್ಯಾರೆಡ್ಡಿ ಸೇರಿದಂತೆ ಹಲವರಿದ್ದರು.

ಬೌದ್ಧ, ಇಸ್ಲಾಂ, ಕ್ರೈಸ್ತ ಮತ್ತು ಹಿಂದೂ ಧರ್ಮಕ್ಕೆ ಮತಾಂತರಗೊಂಡವರೂ ಎಸ್ಸಿ-ಎಸ್ಟಿಯಲ್ಲಿ ಮೀಸಲಾತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಚರ್ಚೆ ನಡೆಯಬೇಕಿದೆ.

-ನಾಗಮೋಹನ್‌ದಾಸ್, ನಿವೃತ್ತ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News