ಶಿಕ್ಷಣದಿಂದ ಮಾತ್ರ ಮಹಿಳೆ ಸ್ವಾವಲಂಬಿಯಾಗಲು ಸಾಧ್ಯ: ಮಾಜಿ ಸಿಎಂ ಕುಮಾರಸ್ವಾಮಿ

Update: 2020-02-25 16:46 GMT

ಬೆಂಗಳೂರು, ಫೆ.25: ಶಿಕ್ಷಣದಿಂದ ಮಾತ್ರ ಹೆಣ್ಣು ಮಕ್ಕಳು ಸ್ವಾವಲಂಬಿ ಮತ್ತು ಘನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯ. ಯಾವೊಬ್ಬ ಹೆಣ್ಣು ಮಗಳೂ ಶಿಕ್ಷಣದಿಂದ ವಂಚಿತಳಾಗಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಅಬ್ಬಾಸ್ ಖಾನ್ ಮಹಿಳಾ ಕಾಲೇಜಿನ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾಲೇಜು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಳಾ ಸಬಲೀಕರಣದ ಕುರಿತು ನಾವೆಲ್ಲರೂ ಮಾತನಾಡುತ್ತೇವೆ. ಆದರೆ, ವಾಸ್ತವದಲ್ಲಿ ಮಹಿಳೆಯರು ಯಾವ ಸಮಸ್ಯೆಯಿಂದಲೂ ಮುಕ್ತಗೊಂಡಿಲ್ಲ. ಅವರು ಸ್ವಂತ ಶಕ್ತಿಯಿಂದ ಜೀವನ ನಡೆಸಲು ಶಿಕ್ಷಣ ಅತ್ಯಗತ್ಯ. ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದರು.

ಇಸ್ಲಾಮ್ ಧರ್ಮದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರಲ್ಲಿ ದೂರ ಉಳಿದಿದ್ದೇವೆ. ಹೀಗೆ ದೂರ ಉಳಿಯಲು ಅವರ ಧರ್ಮದಲ್ಲಿರುವ ಕೆಲವು ಕಟ್ಟುಪಾಡುಗಳು ಹಾಗೂ ಬಡತನವೂ ಕಾರಣವಾಗಿರಬಹುದು. ಆದರೆ, ಇವತ್ತಿನ ದಿನಗಳಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೂ ಶಿಕ್ಷಣ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿರುವುದು ಶ್ಲಾಘನೀಯವೆಂದು ಅವರು ಹೇಳಿದರು.

ದೇಶದಲ್ಲಿ ನಿರುದ್ಯೋಗ, ಆರ್ಥಿಕ ಕುಸಿತದಂತಹ ಅನೇಕ ಸಮಸ್ಯೆಗಳು ಎದುರಾಗಿವೆ. ಈ ನಡುವೆ ಸಮಾಜದಲ್ಲಿ ಧರ್ಮ ಧರ್ಮಗಳ ನಡುವೆ ದ್ವೇಷ ಹರಡಲಾಗುತ್ತಿದೆ. ದ್ವೇಷ ಹರಡುವಂತಹ ವಿಚಾರಗಳಿಗೆ ಯಾರೂ ಆಸ್ಪದ ನೀಡಬಾರದು. ನಾವೆಲ್ಲಾ ಒಂದೇ ಸಮಾಜದವರು. ಪರಸ್ಪರ ಸ್ನೇಹ ಗೌರವದಿಂದ ಬದುಕಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹೆಚ್ಚು ಅಂಕ ಗಳಿಸಿದ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್‌ನ ಅಧ್ಯಕ್ಷ ಜಿಯಾವುಲ್ಲಾ ಶರೀಫ್ ಸಾಹೇಬ್, ಉಪಾಧ್ಯಕ್ಷ ಜಾವೀದ್ ಅಹ್ಮದ್ ಖಾನ್, ಅತ್ತರ್ ಸಯ್ಯದ್, ಅಬ್ಬಾಸ್‌ ಖಾನ್ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲೆ ಪ್ರೊ.ಜುಬೇದಾ ಬೇಗಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News