ವಾಕಿಂಗ್‌ನ ಆರೋಗ್ಯ ಲಾಭಗಳು

Update: 2020-02-25 18:31 GMT

ನೀವು ಪ್ರತಿ ದಿನ ವಾಕಿಂಗ್ ಮಾಡುತ್ತೀರಾ? ಇಲ್ಲದಿದ್ದರೆ ಅದನ್ನು ಈಗಲೇ ರೂಢಿಸಿಕೊಳ್ಳಿ. ದೈಹಿಕ ಚಟುವಟಿಕೆ ಆರೋಗ್ಯಕ್ಕೆ ಮುಖ್ಯ ಎನ್ನುವುದನ್ನು ಅಧ್ಯಯನಗಳು ಎಂದೋ ತೋರಿಸಿವೆ. ಪ್ರತಿ ದಿನ ವಾಕಿಂಗ್ ಮಾಡುವುದರಿಂದ ಶರೀರದ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಾಗುವ ಜೊತೆಗೆ ನಿಮ್ಮ ಆಯುಷ್ಯವನ್ನೂ ಅದು ಹೆಚ್ಚಿಸುತ್ತದೆ. ವಾಕಿಂಗ್ ನೀಡುವ ಪ್ರಮುಖ ಆರೋಗ್ಯಲಾಭಗಳ ಕುರಿತು ಮಾಹಿತಿಯಲ್ಲಿದೆ.....

♦ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ

 ದೈಹಿಕ ಚಟುವಟಿಕೆಗಳು ಕಡಿಮೆಯಾಗಿರುವ ಇಂದಿನ ದಿನಗಳಲ್ಲಿ ಹೆಚ್ಚಿನವರು ಡೆಸ್ಕ್ ಜಾಬ್ ಮಾಡುತ್ತಿರುತ್ತಾರೆ,ಅಂದರೆ ಅವರು ಕೆಲಸದ ವೇಳೆ ಹೆಚ್ಚು ಸಮಯ ಕುಳಿತುಕೊಂಡೇ ಇರುತ್ತಾರೆ. ಇದು ಶರೀರದ ತೂಕ ಹೆಚ್ಚಲು ಕಾರಣವಾಗುತ್ತದೆ. ಪ್ರತಿ ದಿನ ವಾಕಿಂಗ್ ಮಾಡುವುದರಿಂದ ಶರೀರದಲ್ಲಿಯ ಹೆಚ್ಚಿನ ಕ್ಯಾಲರಿಗಳು ಕರಗುತ್ತವೆ ಹಾಗೂ ತೂಕ ಹೆಚ್ಚಳ ಮತ್ತು ಅದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಅಪಾಯವನ್ನು ತಗ್ಗಿಸುತ್ತದೆ. ನಡಿಗೆ ಎರೋಬಿಕ್ ವ್ಯಾಯಾಮವಾಗಿದ್ದು,ಪ್ರತಿ ಕಿ.ಮೀ.ಗೆ ಸುಮಾರು 60 ಕ್ಯಾಲರಿಗಳನ್ನು ಕರಗಿಸುತ್ತದೆ. ಮಹಿಳೆಯರು ವಾರಕ್ಕೆ ಮೂರು ಬಾರಿ 50ರಿಂದ 70 ನಿಮಿಷಗಳ ನಡಿಗೆಯನ್ನು 12 ವಾರಗಳ ಕಾಲ ಮಾಡಿದರೆ ಅವರ ಸೊಂಟದ ಸುತ್ತಳತೆ 2.8 ಸೆ.ಮೀ.ನಷ್ಟು ಕಡಿಮೆಯಾಗುತ್ತದೆ ಮತ್ತು ಶರೀರದಲ್ಲಿಯ ಸುಮಾರು ಶೇ.1.5ರಷ್ಟು ಕೊಬ್ಬು ಕರಗುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.

♦ರಚನಾತ್ಮಕತೆಯನ್ನು ಹೆಚ್ಚಿಸುತ್ತದೆ

ಮನಸ್ಸಿಗೆ ಮಂಕು ಕವಿದಂತಾಗಿದೆಯೇ? ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲವೇ? ಒಂದು ಚುರುಕಿನ ವಾಕಿಂಗ್ ಮಾಡಿ. ನಿಮ್ಮ ಕೆಲಸದಲ್ಲಿ ಎದುರಾಗುವ ಸಮಸ್ಯೆಗೆ ಪರಿಹಾರ ಅಗತ್ಯವಿದ್ದರೆ ಅಥವಾ ಯಾವುದೋ ಒಂದು ಐಡಿಯಾಕ್ಕಾಗಿ ತಡಕಾಡುತ್ತಿದ್ದರೆ ವಾಕಿಂಗ್ ಮಾಡುವುದು ನಿಮ್ಮಲ್ಲಿ ರಚನಾತ್ಮಕತೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಸುತ್ತದೆ ಎನ್ನುವುದು ಅಧ್ಯಯನಗಳಿಂದ ಬೆಳಕಿಗೆ ಬಂದಿದೆ. ಪುಟ್ಟ ವಾಕಿಂಗ್ ಮೆದುಳನ್ನು ಉತ್ತೇಜಿಸುತ್ತದೆ ಮತ್ತು ಹೊಸ ಕಲ್ಪನೆಗಳು ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಅಲ್ಲದೆ ವಾಕಿಂಗ್ ನಿಮ್ಮ ಜ್ಞಾಪಕ ಶಕ್ತಿ,ಅರಿವಿನ ಶಕ್ತಿ,ಕಲಿಯುವಿಕೆ,ಓದುವಿಕೆಯನ್ನೂ ಹೆಚ್ಚಿಸುತ್ತದೆ.

♦ ಹೃದ್ರೋಗಗಳ ಅಪಾಯವನ್ನು ತಗ್ಗಿಸುತ್ತದೆ

  ಹೃದ್ರೋಗದ ಸಮಸ್ಯೆಯಿರುವವರಿಗೆ ಪ್ರತಿದಿನ ವಾಕಿಂಗ್ ಮಾಡುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಪ್ರತಿ ದಿನ 15 ನಿಮಿಷಗಳ ವ್ಯಾಯಾಮ ಮಾಡುವುದರಿಂದ ಹೃದಯರಕ್ತನಾಳ ರೋಗಗಳಿಂದ ಉಂಟಾಗುವ ಸಾವಿನ ಅಪಾಯ ಶೇ.15ರಷ್ಟು ಕಡಿಮೆಯಾಗುತ್ತದೆ. ವಾಕಿಂಗ್ ಕೂಡ ವ್ಯಾಯಾಮವಾಗಿದ್ದು, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ,ಹೃದಯ ಬಡಿತದ ದರವನ್ನು ಕಾಯ್ದುಕೊಳ್ಳುತ್ತದೆ,ಹೃದಯದ ಸ್ನಾಯುವನ್ನು ಬಲಗೊಳಿಸುತ್ತದೆ ಮತ್ತು ತನ್ಮೂಲಕ ಹೃದಯ ರೋಗಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ವಾರಕ್ಕೆ ಎರಡೂವರೆ ಗಂಟೆಗಳ ಕಾಲ ಬಿರುಸಿನ ನಡಿಗೆ ಅಥವಾ ವ್ಯಾಯಾಮವನ್ನು ಮಾಡುವ ಮಹಿಳೆಯರಲ್ಲಿ ಋತುಬಂಧದ ನಂತರ ಹೃದ್ರೋಗಗಳಿಗೆ ಗುರಿಯಾಗುವ ಅಪಾಯ ಶೇ.30ರಷ್ಟು ಕಡಿಮೆಯಾಗುತ್ತದೆ.

♦ ಆಯುಷ್ಯವನ್ನು ಹೆಚ್ಚಿಸುತ್ತದೆ

 ಹೆಚ್ಚು ಸಮಯ ಬದುಕುವ ಇಚ್ಛೆಯಿದ್ದರೆ ಅದಕ್ಕೆ ಹೆಚ್ಚಿನ ಪ್ರಯತ್ನವೇನೂ ಬೇಕಿಲ್ಲ,ಪ್ರತಿದಿನ ನಿಯಮಿತವಾಗಿ ವಾಕಿಂಗ್ ಮಾಡುತ್ತಿದ್ದರೆ ಸಾಕು. ಅದು ನಿಮ್ಮ ಬದುಕಿಗೆ ವರ್ಷಗಳನ್ನು ಸೇರಿಸುತ್ತದೆ ಮತ್ತು ನಿಮ್ಮನ್ನು ದೀರ್ಘಾಯುಷಿಯನ್ನಾಗಿ ಮಾಡುತ್ತದೆ. ವ್ಯಕ್ತಿಯ ವಯಸ್ಸು ಮತ್ತು ದೇಹತೂಕ ಏನೇ ಇರಲಿ,ನಿಯಮಿತವಾಗಿ ವಾಕಿಂಗ್ ಮಾಡುತ್ತಿದ್ದರೆ ಏಳು ವರ್ಷಗಳವರೆಗೆ ಆಯುಷ್ಯ ಹೆಚ್ಚುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

♦ ಒತ್ತಡಗಳಿಂದ ಮುಕ್ತಿಯನ್ನು ನೀಡುತ್ತದೆ.

ಸಂಜೆಯ ವೇಳೆಯಲ್ಲಿ ಅಥವಾ ಊಟದ ಬಳಿಕ ವಾಕಿಂಗ್ ನಿಮ್ಮ ಮೂಡನ್ನು ಹೆಚ್ಚಿಸಲು ಮತ್ತು ಒತ್ತಡವನ್ನು ನಿವಾರಿಸಲು ನೆರವಾಗುತ್ತದೆ. ವಾಕಿಂಗ್ ಮಾಡುವುದರಿಂದ ಒತ್ತಡದ ಹಾರ್ಮೋನ್ ಆಗಿರುವ ಕಾರ್ಟಿಸಾಲ್ ನಿವಾರಣೆಯಾಗುತ್ತದೆ ಮತ್ತು ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ,ತನ್ಮೂಲಕ ನೀವು ಶಾಂತಚಿತ್ತ ಮತ್ತು ಹರ್ಷಚಿತ್ತರಾಗಿರಲು ಸಾಧ್ಯವಾಗುತ್ತದೆ.

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News