ಐಪಿಎಲ್‌ಗೆ ಮಾ.2ರಿಂದ ಧೋನಿ ಅಭ್ಯಾಸ ಆರಂಭ

Update: 2020-02-25 18:46 GMT

ಚೆನ್ನೈ, ಫೆ.25: ಮುಂಬರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಐಪಿಎಲ್)ಆಡುವ ಮೂಲಕ ದೀರ್ಘ ಸಮಯದ ಬಳಿಕ ಕ್ರಿಕೆಟ್‌ಗೆ ವಾಪಸಾಗಲಿರುವ ಮಹೇಂದ್ರ ಸಿಂಗ್ ಧೋನಿ ಮಾರ್ಚ್ 2ರಿಂದ ಅಭ್ಯಾಸ ಆರಂಭಿಸಲಿದ್ದಾರೆ. ಕಳೆದ ವರ್ಷ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಡಿದ ಬಳಿಕ ಧೋನಿ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದು, ಅವರ ವೃತ್ತಿಜೀವನದ ಬಗ್ಗೆ ಊಹಾಪೋಹಗಳು ಎದ್ದಿದ್ದವು.

ಚೆನ್ನೈ ಸೂಪರ್ ಕಿಂಗ್ಸ್‌ನ ಓರ್ವ ಯಶಸ್ವಿ ನಾಯಕನಾಗಿರುವ ಧೋನಿ, ಭಾರತ ಎರಡು ವಿಶ್ವಕಪ್ ಪ್ರಶಸ್ತಿ ಜಯಿಸಲು ತಂಡದ ನಾಯಕತ್ವವಹಿಸಿದ್ದರು. ಚೆನ್ನೈ ಫ್ರಾಂಚೈಸಿಯ ಇತರ ಕೆಲವು ಆಟಗಾರರ ಜೊತೆಗೆ ಎಂ.ಎ.ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ಧೋನಿ ತನ್ನ ಅಭ್ಯಾಸ ಆರಂಭಿಸಲಿದ್ದಾರೆ.

38ರ ಹರೆಯದ ಧೋನಿ ಕಳೆದ ವರ್ಷ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಮುಗ್ಗರಿಸಿದ ಬಳಿಕ ಕ್ರಿಕೆಟ್ ಪಂದ್ಯ ಆಡಿಲ್ಲ. ತನ್ನ ಮುಂದಿನ ಹೆಜ್ಜೆಯ ಬಗ್ಗೆ ದಿವ್ಯ ವೌನ ತಾಳಿದ್ದರು. ಜನವರಿಯಲ್ಲಿ ಬಿಸಿಸಿಐನ ಆಟಗಾರರ ಕೇಂದ್ರೀಯ ಗುತ್ತಿಗೆಯಿಂದ ಧೋನಿಯ ಹೆಸರನ್ನು ಕೈಬಿಡಲಾಗಿತ್ತು.

 ‘‘ಧೋನಿ ಮಾ.2ರಂದ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ. ಆ ಸಮಯದಲ್ಲಿ ಲಭ್ಯವಿರುವ ಆಟಗಾರರೊಂದಿಗೆ ಅವರು ಪ್ರಾಕ್ಟೀಸ್ ನಡೆಸಲಿದ್ದಾರೆ. ಎಲ್ಲ ಆಟಗಾರರು ತಂಡವನ್ನು ಸೇರಿಕೊಂಡ ಬಳಿಕ ಮಾ.19ರಿಂದ ಸಂಪೂರ್ಣ ಶಿಬಿರ ಆರಂಭವಾಗುವುದು’’ ಎಂದು ಚೆನ್ನೈ ಫ್ರಾಂಚೈಸಿಯ ಸಿಇಒ ಕೆ.ಎಸ್.ವಿಶ್ವನಾಥನ್ ಹೇಳಿದ್ದಾರೆ.

 ಮಾ.29ರಂದು ಮುಂಬೈನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುವ ಮೂಲಕ ಚೆನ್ನೈ ಫ್ರಾಂಚೈಸಿ 2020ರ ಐಪಿಎಲ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಧೋನಿ ಅವರು ಸುರೇಶ್ ರೈನಾ ಹಾಗೂ ಅಂಬಟಿ ರಾಯುಡು ಸಹಿತ ಇತರ ಆಟಗಾರರೊಂದಿಗೆ ಕೆಲವು ವಾರಗಳ ತನಕ ಅಭ್ಯಾಸ ನಡೆಸಲಿದ್ದಾರೆ. ತಂಡಕ್ಕೆ ವಾಪಸಾಗುವ ಮೊದಲು ಮತ್ತೆ ಸ್ವಲ್ಪ ವಿರಾಮ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಚೆನ್ನೈ ತಂಡ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದ ಆಟಗಾರರ ಹರಾಜಿನ ವೇಳೆ ಹಿರಿಯ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ, ಆಸ್ಟ್ರೇಲಿಯದ ವೇಗದ ಬೌಲರ್ ಜೋಶ್ ಹೇಝಲ್‌ವುಡ್, ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಹಾಗೂ ತಮಿಳುನಾಡು ಎಡಗೈ ಸ್ಪಿನ್ನರ್ ಆರ್.ಸಾಯಿ ಕಿಶೋರ್‌ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News