ಏಶ್ಯ ಇಲೆವೆನ್‌ನಲ್ಲಿ ಕೊಹ್ಲಿ, ಪಂತ್, ಶಮಿ

Update: 2020-02-25 18:49 GMT

ಢಾಕಾ, ಫೆ.25: ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ರಹ್ಮಾನ್‌ರ ಜನ್ಮ ಶತಾಬ್ದಿ ಅಂಗವಾಗಿ ಆಯೋಜಿಸಲಾಗಿರುವ ಎರಡು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಏಶ್ಯ ಇಲೆವೆನ್ ತಂಡದ ನಾಯಕತ್ವವಹಿಸಲಿದ್ದು, ಈ ತಂಡದಲ್ಲಿ ರಿಷಬ್ ಪಂತ್ ಹಾಗೂ ಮುಹಮ್ಮದ್ ಶಮಿ ಅವರಿದ್ದಾರೆ.

 ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ)ಒಂದು ಪಂದ್ಯಕ್ಕೆ ಕೊಹ್ಲಿ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಈ ನೇಮಕವನ್ನು ಬಿಸಿಸಿಐ ಇನ್ನಷ್ಟೇ ಖಚಿತಪಡಿಸಬೇಕಾಗಿದೆ. ಎರಡು ಪಂದ್ಯಗಳು ಮಾ.21 ಹಾಗೂ 22ರಂದು ನಡೆಯಲಿವೆ.

  ‘‘ನಾವು ಈಗಾಗಲೇ ಭಾರತದಿಂದ ನಾಲ್ಕು ಹೆಸರುಗಳನ್ನು ಸ್ವೀಕರಿಸಿದ್ದೇವೆ. ನಾವು ಒಪ್ಪಂದಕ್ಕೆ ಸಹಿ ಹಾಕಿಲ್ಲ. ಆದರೆ, ರಿಷಭ್ ಪಂತ್, ಕುಲದೀಪ ಯಾದವ್, ಶಿಖರ ಧವನ್ ಹಾಗೂ ಮುಹಮ್ಮದ್ ಶಮಿ ಬಾಂಗ್ಲಾಕ್ಕೆ ಬರುವ ಸಾಧ್ಯತೆಯಿದೆ. ಕೆ.ಎಲ್. ರಾಹುಲ್ ಹಾಗೂ ವಿರಾಟ್ ಕೊಹ್ಲಿ ತಲಾ ಒಂದು ಪಂದ್ಯವನ್ನು ಆಡಲಿದ್ದು, ಇದು ಇನ್ನೂ ಅಂತಿಮವಾಗಿಲ್ಲ ’’ ಎಂದು ಬಿಸಿಬಿ ಅಧ್ಯಕ್ಷ ನಝ್ಮುಲ್ ಹಸನ್ ತಿಳಿಸಿದ್ದಾರೆ.

 ಕೊಹ್ಲಿ ಹೆಸರನ್ನು ಕಳುಹಿಸಿಕೊಡಲಾಗಿದೆ. ಆದರೆ, ಟೂರ್ನಿಯಲ್ಲಿ ಭಾಗವಹಿಸುವುದು ಕೊಹ್ಲಿಗೆ ಬಿಟ್ಟ ವಿಚಾರ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಅವರನ್ನು ಭೇಟಿಯಾದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಟೀಮ್ ಇಂಡಿಯಾ ಪ್ರಸ್ತುತ ನ್ಯೂಝಿಲ್ಯಾಂಡ್ ಪ್ರವಾಸ ಕೈಗೊಂಡಿದ್ದು, ಈಗ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ನ್ಯೂಝಿಲ್ಯಾಂಡ್ ಪ್ರವಾಸ ಕೊನೆಗೊಂಡ ವಾರದ ಬಳಿಕ ಭಾರತ ಮಾ.12ರಿಂದ ಧರ್ಮಶಾಲಾದಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ. ಲಕ್ನೋದಲ್ಲಿ ಮಾ.15ರಂದು 2ನೇ ಪಂದ್ಯ ಹಾಗೂ ಕೋಲ್ಕತಾದಲ್ಲಿ ಮಾ.18ರಂದು ಮೂರನೇ ಪಂದ್ಯ ನಡೆಯಲಿದೆ. ಐಪಿಎಲ್ ಮಾ.29ರಿಂದ ಆರಂಭವಾಗಲಿದೆ.

ವಿಶ್ವ ಇಲೆವೆನ್ ತಂಡದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಫ್‌ಡು ಪ್ಲೆಸಿಸ್ ಹಾಗೂ ಹಿರಿಯ ಆಟಗಾರ, ಬಿಗ್ ಹಿಟ್ಟರ್ ಕ್ರಿಸ್ ಗೇಲ್ ಹಾಗೂ ಕಿರೊನ್ ಪೊಲಾರ್ಡ್ ಅವರಿದ್ದಾರೆ.

► ತಂಡಗಳು

 ಏಶ್ಯ ಇಲೆವೆನ್: ಕೆ.ಎಲ್.ರಾಹುಲ್, ಶಿಖರ ಧವನ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಕುಲದೀಪ ಯಾದವ್, ಮುಹಮ್ಮದ್ ಶಮಿ, ತಿಸಾರ ಪೆರೇರ, ಲಸಿತ ಮಾಲಿಂಗ, ರಶೀದ್ ಖಾನ್, ಮುಜೀಬ್‌ವುರ್ರಹ್ಮಾನ್, ಮುಸ್ತಫಿಝುರ್ರಹ್ಮಾನ್, ತಮೀಮ್ ಇಕ್ಬಾಲ್,ಮುಶ್ಫಿಕುರ್ರಹೀಂ, ಲಿಟನ್ ದಾಸ್, ಸಂದೀಪ್, ಮಹಮುದುಲ್ಲಾ.

ವಿಶ್ವ ಇಲೆವೆನ್: ಅಲೆಕ್ಸ್ ಹೇಲ್ಸ್, ಕ್ರಿಸ್ ಗೇಲ್, ಎಫ್‌ಡು ಪ್ಲೆಸಿಸ್, ನಿಕೊಲಸ್ ಪೂರನ್, ಬ್ರೆಂಡನ್ ಟೇಲರ್,ಜಾನಿ ಬೈರ್‌ಸ್ಟೋವ್, ಕಿರೊನ್ ಪೊಲಾರ್ಡ್, ಶೆಲ್ಡನ್ ಕಾಟ್ರೆಲ್, ಲುಂಗಿ ಗಿಡಿ, ಆ್ಯಂಡ್ರೂ ಟೈ, ಮಿಚೆಲ್ ಮೆಕ್ಲೆನಘನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News