''ದಿಲ್ಲಿಯ ಅಶೋಕ್ ನಗರದಲ್ಲಿ ಮಸೀದಿ ಮೇಲೆ ಕೇಸರಿ ಧ್ವಜ ಹಾಕಿದ್ದು, ಬೆಂಕಿ ಹಚ್ಚಿದ್ದು ನಿಜ''

Update: 2020-02-26 10:39 GMT

ಹೊಸದಿಲ್ಲಿ, ಫೆ.26: ‘’ಜೈ ಶ್ರೀ ರಾಮ್’’, ‘’ಹಿಂದುವೋಂ ಕಾ ಹಿಂದುಸ್ತಾನ್’’ ಘೋಷಣೆಗಳನ್ನು ಕೂಗುತ್ತಿದ್ದ ಗುಂಪೊಂದು ದಿಲ್ಲಿಯ ಮಸೀದಿಯೊಂದರ ಮೇಲೆ ಕೇಸರಿ ಧ್ವಜ ಹಾರಿಸುತ್ತಿರುವ ವೀಡಿಯೋವನ್ನು ಫೆಬ್ರವರಿ 25ರಂದು ಪತ್ರಕರ್ತೆ ರಾಣಾ ಅಯ್ಯೂಬ್ ಶೇರ್ ಮಾಡಿದ್ದರು. ಆದರೆ ನಂತರ ತೆಹ್ಸೀನ್ ಪೂನಾವಾಲ ಅವರು ಟ್ವೀಟ್ ಮಾಡಿ, ‘’ಇದು ಸಿಎಎ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ’’ ಎಂದು ಹೇಳಿಕೊಂಡ ನಂತರ ರಾಣಾ ಅಯ್ಯೂಬ್ ಆ ವೀಡಿಯೋ ಡಿಲೀಟ್ ಮಾಡಿದ್ದರು. ಆದರೆ ಅಯ್ಯೂಬ್ ಆ ವೀಡಿಯೋದ ಸತ್ಯಾಸತ್ಯತೆ ಪರಿಶೀಲಿಸಿ ಅದನ್ನು ಮತ್ತೆ ಪೋಸ್ಟ್ ಮಾಡಿದ್ದಾರೆ. ‘‘ಕೆಲ ವ್ಯಕ್ತಿಗಳು ಮಸೀದಿಯ ಮೇಲೇರಿ, ಅಲ್ಲಿ ದಾಂಧಲೆ ನಡೆಸಿ ಕೇಸರಿ ಧ್ವಜ  ಇಡುತ್ತಿರುವುದು’’ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪೂನಾವಾಲ, ‘’ಅಶೋಕ್ ವಿಹಾರ್ ಪ್ರದೇಶದಲ್ಲಿ ಯಾವುದೇ ಮಸೀದಿಗೆ ಹಾನಿ ಮಾಡಲಾಗಿಲ್ಲ’’ ಎಂದು ವಾಯುವ್ಯ ದಿಲ್ಲಿಯ ಡಿಸಿಪಿ ನೀಡಿರುವ ಹೇಳಿಕೆಯನ್ನು ತಮ್ಮ ಟ್ವೀಟ್ ಜತೆಗೆ ಪೋಸ್ಟ್ ಮಾಡಿದ್ದರು.

ರಾಣಾ ಅಯ್ಯೂಬ್ ಅವರು ನಕಲಿ ಸುದ್ದಿ ಹರಡುತ್ತಿದ್ದಾರೆ ಅವರನ್ನು ಬಂಧಿಸಬೇಕೆಂದು ಸಾಧ್ವಿ ಖೋಸ್ಲಾ ಸಹಿತ ಹಲವು ಟ್ವಿಟ್ಟರಿಗರು ಆಗ್ರಹಿಸಿದ್ದರು. ರಾಣಾ ಅಯ್ಯೂಬ್ ಅವರು ಬಿಹಾರದ ಎರಡು ವರ್ಷ ಹಳೆಯ ವೀಡಿಯೋ ಬಳಸಿದ್ದಾರೆ ಅವರ ವಿರುದ್ಧ ದೂರು ದಾಖಲಿಸಿದ್ದಾಗಿ ರಮೇಶ್ ಸೋಳಂಕಿ ಹೇಳಿದ್ದರು. ಟೈಮ್ಸ್ ನೌ ವಾಹಿನಿ ಕೂಡ ಈ ವೀಡಿಯೋ ನಕಲಿ ಎಂದಿತ್ತು.

ವಾಸ್ತವವೇನು ?

 ದಿ ವೈರ್ ಪತ್ರಿಕೆಯ ನವೋಮಿ ಬಾರ್ಟೊನ್ ಅವರು ತಮ್ಮ ವರದಿಯಲ್ಲಿ ಈ ಮಸೀದಿ ಅಶೋಕ್ ನಗರ್ (ಹಿಂದೆ ಅಶೋಕ್ ವಿಹಾರ್ ಎಂದು ಹೇಳಲಾಗಿತ್ತು) ಪ್ರದೇಶದಲ್ಲಿದೆ ಎಂದಿದ್ದಾರೆ. ಆಲ್ಟ್ ನ್ಯೂಸ್ ಈ ವೀಡಿಯೋವನ್ನು ಹೈಯರ್ ರೆಸೊಲ್ಯೂಶನ್ ಮೂಲಕ ವೀಕ್ಷಿಸಿ ಮಸೀದಿಯ ಮೇಲೇರಿ ಕೇಸರಿ ಧ್ವಜ ಹಾರಿಸುತ್ತಿರುವುದನ್ನು ಗಮನಿಸಿದೆ. ಇನ್ನೊಂದು ಕೋನದಲ್ಲಿ ತೆಗೆಯಲಾದ ಇದೇ ವೀಡಿಯೋವನ್ನು ಯೂಟ್ಯೂಬಿನಲ್ಲಿ ಒಬ್ಬರು ಅಪ್‌ಲೋಡ್ ಮಾಡಿದ್ದಾರೆ.

ತಾವು ಆ ಸ್ಥಳದಲ್ಲಿದ್ದಾಗ ಮಸೀದಿಯ ಕಟ್ಟಡದ ಮೇಲೆ ಕೇಸರಿ ಧ್ವಜ ಹಾರುತ್ತಿರುವುದು ಹಾಗೂ ಕೆಳಗಡೆ ಇರುವ ಪಾದರಕ್ಷೆ ಮಳಿಗೆ ಬೆಂಕಿಗಾಹುತಿಯಾಗಿರುವುದು ನೋಡಿದೆ ಎಂದು ನವೋಮಿ ಟ್ವೀಟ್ ಮಾಡಿದ್ದಾರೆ.

ಆಲ್ಟ್ ನ್ಯೂಸ್ ಜತೆ ಮಾತನಾಡಿದ ಆಕೆ, ಈ ಮಸೀದಿಯ ಹೆಸರು ಬಡಿ ಮಸ್ಜಿದ್ ಎಂದೂ ತಿಳಿಸಿದ್ದಾರೆ. ನವೋಮಿ ಜತೆ ಪತ್ರಕರ್ತ ಅವಿಚಲ್ ದುಬೆ ಕೂಡ ಇದ್ದು, ಅವರು ಮಸೀದಿಯ ಕ್ಲೋಸ್-ಅಪ್ ಚಿತ್ರಗಳನ್ನು ಆಲ್ಟ್ ನ್ಯೂಸ್ ಜತೆ ಶೇರ್ ಮಾಡಿದ್ದಾರೆ. ಈ ಫೋಟೋದ ಎಕ್ಸಿಫ್ ಡಾಟಾ ಪ್ರಕಾರ ಅದನ್ನು ಫೆಬ್ರವರಿ 25ರಂದು ಅಪರಾಹ್ನ 3:57ಕ್ಕೆ ತೆಗೆಯಲಾಗಿತ್ತು. ಮಸೀದಿಯಲ್ಲಿನ ಬೆಂಕಿ ನಂದಿಸಲು ನೀರು ಸಿಂಪಡಿಸುತ್ತಿರುವ ವೀಡಿಯೋವನ್ನೂ ದಿ ವೈರ್ ಅಪ್‌ಲೋಡ್ ಮಾಡಿದೆ. ಅದೇ ಸ್ಥಳದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಯಿರುವ ವೀಡಿಯೊ ಕೂಡ ಇದೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News