'ನನ್ನ ಧರ್ಮವನ್ನು ಸಾಬೀತುಗೊಳಿಸಲು ರುದ್ರಾಕ್ಷಿಯನ್ನು ತೋರಿಸಬೇಕಾಯಿತು'

Update: 2020-02-26 10:36 GMT
Photo: NDTV

#"ಧಾರ್ಮಿಕ ಸ್ಥಳದ ಮೇಲೆ ದಾಳಿ ನಡೆಯುವಾಗ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು"

ದಿಲ್ಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ವರದಿಗಾರಿಕೆಗಾಗಿ ತೆರಳಿದ ವೇಳೆ ದುಷ್ಕರ್ಮಿಗಳ ತಂಡದಿಂದ ಹಲ್ಲೆಗೊಳಗಾದ NDTV ಪತ್ರಕರ್ತ ಸೌರಭ್ ಶುಕ್ಲಾ ತಾನು ಎದುರಿಸಿದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

"ಮಂಗಳವಾರ ಎಂದಿನಂತೆ ವರದಿಗಾರಿಕೆಯ ಇನ್ನೊಂದು ದಿನವಾಗಿ ಆರಂಭವಾಗಿತ್ತಾದರೂ ಅದು ಕೊನೆಗೊಂಡಿದ್ದು ಮಾತ್ರ ನನ್ನ ಜೀವನದ ಅತ್ಯಂತ ಕರಾಳ ದಿನಗಳಲ್ಲೊಂದಾಗಿ".

"ರವಿವಾರ ರಾತ್ರಿಯಿಂದಲೂ ಈಶಾನ್ಯ ದಿಲ್ಲಿಯಲ್ಲಿನ ಹಿಂಸಾಚಾರದ ವರದಿಗಾರಿಕೆಯಲ್ಲಿ ತೊಡಗಿಕೊಂಡಿದ್ದ ನಾನು ಮಂಗಳವಾರ ಬೆಳಗ್ಗೆ ಏಳು ಗಂಟೆಗೆ ನೇರ ವರದಿಗಾರಿಕೆಗಾಗಿ ಮೌಜಪುರಕ್ಕೆ ಮರಳಿದ್ದೆ. ಅಲ್ಲಿ ನಾವು ನೋಡಿದ್ದು ಭೀಕರ ದೃಶ್ಯವಾಗಿತ್ತು. ಕುಪಿತ ಗುಂಪುಗಳು ಜನರನ್ನು ದೋಚುತ್ತಿದ್ದವು. ಕಲ್ಲುಗಳ ತೂರಾಟ, ಅಂಗಡಿಗಳ ಧ್ವಂಸ ಮುಂದುವರಿದಿತ್ತು. ವಾತಾವರಣವು ಅತ್ಯಂತ ಉದ್ವಿಗ್ನವಾಗಿತ್ತು. ಗುಂಡಿನ ಶಬ್ದಗಳು ನಮಗೆ ಕೇಳಿ ಬರುತ್ತಿದ್ದವು. ಅದೇಕೋ ಅದು ಎಂದಿನ ದಿಲ್ಲಿಯಾಗಿರಲಿಲ್ಲ, ಬೇರೆಯದೇ ಆಗಿ ಕಂಡು ಬರುತ್ತಿತ್ತು".

"ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಮೌಜಪುರದಲ್ಲಿ ವರದಿಗಾರಿಕೆ ಮುಗಿಸಿಕೊಂಡು ನಾನು ಮತ್ತು ಸಹೋದ್ಯೋಗಿ ಅರವಿಂದ ಗುಣಶೇಖರ ಅತ್ಯಂತ ಸೂಕ್ಷಪ್ರದೇಶಗಳಾದ ಕರ್ವಾಲ್ ನಗರ ಮತ್ತು ಗೋಕುಲಪುರಿಯತ್ತ ಸಾಗಿದ್ದೆವು. ದಂಗೆಕೋರರು ಮಾಧ್ಯಮಗಳ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದರಿಂದ ಎನ್‌ ಡಿಟಿವಿ ಮೈಕ್‌ ಬಳಸದಿರಲು ನಾವು ನಿರ್ಧರಿಸಿದ್ದೆವು. ನಮ್ಮ ಸುತ್ತ ನಡೆಯುತ್ತಿದ್ದ ಹಿಂಸಾಚಾರದ ದೃಶ್ಯಗಳನ್ನು ಸೆರೆ ಹಿಡಿಯಲು ನಮ್ಮ ಮೊಬೈಲ್ ಫೋನ್‌ ಗಳನ್ನು ಬಳಸಿದ್ದೆವು".

"ಹಿಂಸಾಚಾರ ಬಹುಬೇಗನೆ ಮುಖ್ಯ ರಸ್ತೆಗಳಿಂದ ಪಕ್ಕದ ಗಲ್ಲಿಗಳಿಗೆ ಹರಡಿತ್ತು. ಗುಂಪುಗಳು ಕ್ಷಣ ಕ್ಷಣಕ್ಕೂ ಹೆಚ್ಚೆಚ್ಚು ಆಕ್ರಮಣಕಾರಿಯಾಗುತ್ತಿದ್ದು, ನಮ್ಮ ಕಣ್ಣೆದುರೇ ಮನೆಗಳು ಹೊತ್ತಿಕೊಂಡು ಉರಿಯುತ್ತಿದ್ದವು. ಧಾರ್ಮಿಕ ಸ್ಥಳಗಳು ಧ್ವಂಸಗೊಳ್ಳುತ್ತಿದ್ದವು. ದಾಂಧಲೆಯಲ್ಲಿ ತೊಡಗಿದ್ದ ಗುಂಪುಗಳಲ್ಲಿದ್ದ ಯುವಕರು ಮದ್ಯಪಾನ ಮಾಡಿದ್ದರು. ಅಲ್ಲೆಲ್ಲಿಯೂ ಪೊಲೀಸರಿರಲಿಲ್ಲ".

"ಈಗ ಅಪರಾಹ್ನ ಒಂದು ಗಂಟೆಯಾಗಿತ್ತು. ಸೀಲಂಪುರ ಬಳಿ ಧಾರ್ಮಿಕ ಕಟ್ಟಡವೊಂದನ್ನು ಉದ್ರಿಕ್ತ ಗುಂಪುಗಳು ಗುರಿಯಾಗಿಸಿಕೊಳ್ಳುತ್ತಿವೆ ಎಂಬ ಸುದ್ದಿ ನಮ್ಮ ಕಿವಿಗೆ ಬಿದ್ದಿತ್ತು. ನಾವು ಅಲ್ಲಿಗೆ ತಲುಪಿದಾಗ ಸುಮಾರು 200 ಜನರ ಗುಂಪೊಂದು ಧಾರ್ಮಿಕ ಸ್ಥಳದಲ್ಲಿ ಹಾವಳಿ ನಡೆಸಿತ್ತು. ನಾವು ಫ್ಲೈ ಓವರ್‌ ನಿಂದ ಆ ದೃಶ್ಯವನ್ನು ಚಿತ್ರಿಸಿಕೊಳ್ಳಲು ಆರಂಭಿಸಿದ್ದೆವು. ಸಿಎನ್‌ಎನ್ ನ್ಯೂಸ್ ವರದಿಗಾರ್ತಿ ರುಂಝುನ್ ಶರ್ಮಾ ಸಹ ನಮ್ಮ ಜೊತೆಯಲ್ಲಿದ್ದರು. ಅಲ್ಲಿ ಕೆಲವೇ ಪೊಲೀಸರಿದ್ದು, ನಡೆಯುತ್ತಿದ್ದ ಘಟನೆಗೆ ಮೂಕಪ್ರೇಕ್ಷಕರಾಗಿದ್ದರು".

"ಅಷ್ಟರಲ್ಲಿ ನನ್ನಿಂದ ಸುಮಾರು 50 ಮೀ.ನಷ್ಟು ದೂರದಲ್ಲಿದ್ದ ಅರವಿಂದನನ್ನು ಗುಂಪೊಂದು ಹಿಡಿದುಕೊಂಡಿತ್ತು. ಏನಾಗುತ್ತಿದೆ ಎನ್ನುವುದು ತಿಳಿಯುವ ಮೊದಲೇ ಸುಮಾರು 50-60 ಜನರಿದ್ದ ಗುಂಪು ಅರವಿಂದನನ್ನು ಥಳಿಸತೊಡಗಿತ್ತು. ಮೊಬೈಲ್ ಫೋನ್‌ ನಲ್ಲಿದ್ದ ಎಲ್ಲ ಫೂಟೇಜ್‌ ಗಳನ್ನು ಅಳಿಸುವಂತೆ ಗುಂಪು ಆತನನ್ನು ಆಗ್ರಹಿಸುತ್ತಿತ್ತು".

"ನೆಲಕ್ಕೆ ಬಿದ್ದಿದ್ದ ಅರವಿಂದನ ಬಾಯಿಯಿಂದ ರಕ್ತ ಸುರಿಯುತ್ತಿತ್ತು. ಆತ ಮೂರು ಹಲ್ಲುಗಳನ್ನು ಕಳೆದುಕೊಂಡಿದ್ದ. ನಾನು ಆತನ ನೆರವಿಗೆ ಧಾವಿಸಿದೆ ಮತ್ತು ದೊಣ್ಣೆಗಳ ಏಟು ನನಗೆ ಬಿದ್ದಿತ್ತು. ಇಲ್ಲದಿದ್ದರೆ ಏಟು ಅರವಿಂದನ ತಲೆಗೆ ಬೀಳುತ್ತಿತ್ತು. ಅವರು ನನ್ನ ಹೊಟ್ಟೆ ಮತ್ತು ಬೆನ್ನಿಗೆ ಗುದ್ದಿದ್ದರು. ಅರವಿಂದನನ್ನು ಅವರ ದಾಳಿಯಿಂದ ಪಾರು ಮಾಡಲು ಆತನನ್ನು ಅಪ್ಪಿ ಹಿಡಿದಿದ್ದ ನನ್ನ ಭುಜಗಳಿಗೆ ಅವರು ದೊಣ್ಣೆಗಳಿಂದ ಹೊಡೆಯುತ್ತಲೇ ಇದ್ದರು".

"ಹೇಗೋ ಸಾವರಿಸಿಕೊಂಡು ಎದ್ದ ನಾನು ಅವರಿಗೆ ವಿದೇಶಿ ವರದಿಗಾರರ ಪ್ರೆಸ್ ಕ್ಲಬ್ ಕಾರ್ಡ್‌ ತೋರಿಸಿದೆ. ನಾವು ಭಾರತೀಯ ಟಿವಿ ಚಾನೆಲ್‌ ಗಾಗಿ ವರದಿ ಮಾಡುತ್ತಿಲ್ಲ, ವಿದೇಶಿ ಸುದ್ದಿಸಂಸ್ಥೆಗಾಗಿ ವರದಿ ಮಾಡುತ್ತಿದ್ದೇವೆ ಎಂದು ನಾನು ಅವರಿಗೆ ಹೇಳಿದ್ದೆ".

"ಕಾರ್ಡ್‌ ನಲ್ಲಿದ್ದ ನನ್ನ ‘ಶುಕ್ಲಾ’ ಕುಲನಾಮವನ್ನು ಅವರು ನೋಡಿದ್ದರು. ಗುಂಪಿನಲ್ಲಿದ್ದ ಒಬ್ಬ ನಾನು ಬ್ರಾಹ್ಮಣ ಎಂದು ಇತರರಿಗೆ ಹೇಳಿದ. ನಾನು ನನ್ನ ಧರ್ಮವನ್ನು ಸಾಬೀತುಗೊಳಿಸಲು ಧರಿಸಿದ್ದ ರುದ್ರಾಕ್ಷಿಯನ್ನು ಅವರಿಗೆ ತೋರಿಸಬೇಕಾಯಿತು. ನನ್ನ ಜೀವವನ್ನು ಉಳಿಸಿಕೊಳ್ಳಲು ನನ್ನ ಧರ್ಮವನ್ನು ರುಜುವಾತು ಮಾಡಬೇಕಾದ ಆ ಘಳಿಗೆ ನನ್ನ ಬದುಕಿನ ಅತ್ಯಂತ ವಿಷಾದಮಯ ಭಾಗವಾಗಿತ್ತು. 'ನೀನು ನಮ್ಮ ಸಮುದಾಯದವನಾಗಿ ವೀಡಿಯೊಗಳನ್ನೇಕೆ ಶೂಟ್ ಮಾಡುತ್ತಿದ್ದೀಯಾ' ಎಂದು ಅವರು ನನ್ನನ್ನು ಪ್ರಶ್ನಿಸಿದರು. (ಈ ವೀಡಿಯೊಗಳು ಅಲ್ಲಿಯ ಸನ್ನಿವೇಶದ ಕುರಿತು ಅವರು ನೀಡಬಹುದಾದ ಹೇಳಿಕೆಗಳಿಗೆ ವಿರುದ್ಧವಾಗಿರುತ್ತಿದ್ದವು). ನನ್ನನ್ನು ಅವಾಚ್ಯವಾಗಿ ನಿಂದಿಸಿದ ಅವರು ಮತ್ತೆ ನನ್ನನ್ನು ಥಳಿಸಿದರು. ನಾವು ಕೈಗಳನ್ನು ಜೋಡಿಸಿ ನಮ್ಮನ್ನು ಅಲ್ಲಿಂದ ತೆರಳಲು ಬಿಡುವಂತೆ ಕೋರಿಕೊಂಡಿದ್ದೆವು. ಅರವಿಂದ ತಮಿಳುನಾಡಿನವನು, ಅವನಿಗೆ ಹಿಂದಿ ಬರುವುದಿಲ್ಲ ಎಂದು ನಾನು ಅವರಿಗೆ ತಿಳಿಸಿದ್ದೆ. ನಮ್ಮೊಂದಿಗಿದ್ದ ರುಂಝುನ್ ಸಹ ನಮ್ಮನ್ನು ಬಿಟ್ಟುಬಿಡುವಂತೆ ಅವರನ್ನು ಬೇಡಿಕೊಂಡಿದ್ದಳು".

"ಅವರು ನಮ್ಮ ಮೊಬೈಲ್ ಫೋನ್‌ ಗಳನ್ನು ಕಿತ್ತುಕೊಂಡು ಅವುಗಳಲ್ಲಿದ್ದ ಫೋಟೊಗಳು ಮತ್ತು ವೀಡಿಯೊಗಳನ್ನು ಅಳಿಸತೊಡಗಿದ್ದರು. ಐಫೋನ್‌ ಗಳನ್ನು ಹೇಗೆ ಬಳಸಬೇಕು ಎನ್ನುವುದು ಅವರಿಗೆ ತಿಳಿದಿತ್ತು. ಯಾವುದೇ ಆಕ್ಷೇಪಾರ್ಹ ಪೂಟೇಜ್‌ನ್ನು ಅಳಿಸಲು ಅವರು ಸಾಧ್ಯವಿರುವ ಎಲ್ಲ ಫೋಲ್ಡರ್‌ ಗಳನ್ನೂ ತೆರೆದಿದ್ದರು. ನಂತರ ನಾವು ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಮಾಡಿದ ಅವರು, ಮತ್ತೊಮ್ಮೆ ನಮ್ಮನ್ನು ಅಲ್ಲಿ ಕಂಡರೆ ಕೊಲ್ಲುವುದಾಗಿ ಎಚ್ಚರಿಕೆಯನ್ನೂ ನೀಡಿದ್ದರು".

"ಅವರಿಂದ ಪಾರಾದ ನಾವು ಸಮೀಪದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ನಮ್ಮ ಕಚೇರಿಗೆ ವಾಪಸಾಗುತ್ತಿದ್ದೆವು. ಕಾರು ಸಾಗುತ್ತಿದ್ದಾಗ ದಿಲ್ಲಿ ಇಂದು ಹೇಗೆ ರಾಷ್ಟ್ರೀಯ ಅವಮಾನವಾಗಿ ಬದಲಾಗಿದೆ ಎಂಬ ಬಗ್ಗೆಯೇ ನಾನು ಯೋಚಿಸುತ್ತಿದ್ದೆ. 2011ರಲ್ಲಿ ನಾನು ಮೊದಲ ಹೆಜ್ಜೆಗಳನ್ನೂರಿದ್ದ ದಿಲ್ಲಿ ಈಗ ಖಂಡಿತ ಮೊದಲಿನಂತಿಲ್ಲ".

"ದಿಲ್ಲಿಯ ಹೆಸರಿನಲ್ಲಿ ‘ದಿಲ್ (ಹೃದಯ)’ ಇದೆ. ಆದರೆ ಅದು ಎಲ್ಲಿದೆ?"

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News