ಘರ್ಷಣೆ ಇಲ್ಲದಿದ್ದರೆ ಏನಾಗುತ್ತಿತ್ತು!

Update: 2020-02-27 07:32 GMT

ಹೊರಗಿನಿಂದ ಮನೆಯೊಳಗೆ ಓಡಿಬಂದ ಪವನ ಕಾಲು ಜಾರಿ ಬಿದ್ದ. ಪಕ್ಕದಲ್ಲಿದ್ದ ಉಷಾ ಅವನನ್ನು ನೋಡಿ ಕಿಸ್ಸಕ್ಕನೆ ನಕ್ಕಳು. ಪವನನಿಗೆ ಅವಮಾನವಾದಂತಾಯ್ತು. ಇದನ್ನು ಗಮನಿಸಿದ ತಾತ ‘‘ಇರಲಿ ಬಿಡೋ, ನೀನೇನು ಬೇಕೂಂತ ಬಿದ್ದಿಲ್ಲ. ಈಗ ತಾನೆ ನಿನ್ನಮ್ಮ ನೆಲ ಒರೆಸಿಕೊಂಡು ಹೋದಳು. ಅಲ್ಲಿನ್ನೂ ನೀರು ಇತ್ತೂ ಅನ್ಸುತ್ತೆ. ಅದಕ್ಕೆ ಕಾಲು ಜಾರಿ ಬಿದಿದ್ದೀಯ’’ ಎನ್ನುತ್ತಾ ಅವನನ್ನು ಸಮಾಧಾನ ಮಾಡಿದರು ಮತ್ತು ‘‘ಗಾಯವೇನಾದರೂ ಆಯ್ತಾ’’ ಎಂದರು. ತಾತನ ಮಾತಿನಿಂದ ಪುಳಕಿತನಾದ ಪವನ ‘‘ಏನೂ ಆಗಿಲ್ಲ ಬಿಡು ತಾತ’’ ಎಂದು ತಾತನ ಬಳಿ ಮಾತಿಗೆ ಕುಳಿತ. ‘‘ತಾತ, ಎಲ್ಲಾ ಸಮಯದಲ್ಲೂ ಕಾಲು ಯಾಕೆ ಜಾರಲ್ಲ. ನೀರಿದ್ದರೆ ಮಾತ್ರ ಯಾಕೆ ಜಾರುತ್ತೆ?’’ ಎಂದು ಪ್ರಶ್ನಿಸಿದ. ಅವನ ಪ್ರಶ್ನೆಗೆ ಉತ್ತರವಾಗಿ ‘‘ನೋಡು ನುಣುಪಾದ ನೆಲದ ಮೇಲೆ ನೀರು ಬಿದ್ದಾಗ, ಅದರ ಮೇಲೆ ಕಾಲಿಟ್ಟರೆ ಅಲ್ಲಿ ಘರ್ಷಣೆ ಇಲ್ಲದಂತಾಗುತ್ತೆ ಆಗ ನಾವು ಜಾರಿ ಬೀಳುತ್ತೇವೆ. ಘರ್ಷಣೆ ಇರೋದ್ರಿಂದ ನಾವು ಎಲ್ಲಾ ಸಮಯದಲ್ಲೂ ಜಾರಿ ಬೀಳಲ್ಲ’’ ಎಂದರು ತಾತ. ತಾತ ಘರ್ಷಣೆ ಇಲ್ಲದಿದ್ರೆ ಇನ್ನೂ ಏನೇನಾಗುತ್ತೆ? ಎಂದು ಉಷಾ ತಟ್ಟನೇ ಪ್ರಶ್ನಿಸಿದಳು. ನಿಮ್ಮದೂ ಇದೇ ಪ್ರಶ್ನೆಯಾಗಿದ್ದರೆ ಮುಂದೆ ಓದಿ.

ನಮ್ಮೆಲ್ಲರ ಬದುಕಿನಲ್ಲಿ ಘರ್ಷಣೆ ಬಹಳ ಮುಖ್ಯ. ಘರ್ಷಣೆ ಇಲ್ಲದಿದ್ದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡಲು ಆಗುತ್ತಿರಲಿಲ್ಲ. ವಸ್ತುಗಳನ್ನು ಹಿಡಿಯಲು ಆಗುತ್ತಿರಲಿಲ್ಲ. ಕೈಯಲ್ಲಿ ಪೆನ್ನು ಹಿಡಿದು ಬರೆಯಲು ಆಗುತ್ತಿರಲಿಲ್ಲ. ಆಟ ಆಡಲು ಆಗುತ್ತಿರಲಿಲ್ಲ. ಊಟ ಮಾಡಲೂ ಕೂಡ ಆಗುತ್ತಿರಲಿಲ್ಲ, ನೋಟು ಎಣಿಸಲು ಸಾಧ್ಯವಾಗುತ್ತಿರಲಿಲ್ಲ, ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಲೇ ಇರಲಿಲ್ಲ. ಘರ್ಷಣೆ ಇಲ್ಲದಿದ್ದರೆ ಊಟ ಮಾಡಲು, ಚಹಾ, ನೀರು ಕುಡಿಯಲೂ ಆಗುತ್ತಿರಲಿಲ್ಲ. ಆಗ ನಾವು ಬದುಕುವುದೂ ಕಷ್ಟವಾಗುತ್ತಿತ್ತು. ವಸ್ತು/ವಾಹನಗಳು ಸರಾಗವಾಗಿ ಚಲಿಸಲು ಘರ್ಷಣೆ ಅಗತ್ಯ. ಮಳೆಗಾಲದಲ್ಲಿ ಕೆಸರು ರಸ್ತೆಯಲ್ಲಿ ಬಹುತೇಕ ವಾಹನಗಳು ಜಾರಿ ಬೀಳುವುದನ್ನು ನೀವು ನೋಡಿರಬಹುದು. ಆಗ ವಾಹನದ ಚಕ್ರಗಳಿಗೂ ಹಾಗೂ ನೆಲದ ನಡುವೆ ಘರ್ಷಣೆ ಇಲ್ಲದ ಕಾರಣ ವಾಹನಗಳು ಜಾರಿ ಬೀಳುತ್ತವೆ. ಎರಡು ವಸ್ತುಗಳು ಪರಸ್ಪರ ಸಂಪರ್ಕಕ್ಕೆ ಬಂದಾಗ ಘರ್ಷಣೆ ಉಂಟಾಗುತ್ತದೆ. ಘರ್ಷಣೆಯು ಚಲನೆಯನ್ನು ನಿಯಂತ್ರಿಸುತ್ತದೆ. ಘರ್ಷಣೆಯು ಯಾವಾಗಲೂ ಚಲಿಸುವ ವಸ್ತುವಿನ ವಿರುದ್ಧ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ವಸ್ತುಗಳು ಬೀಳುವುದಿಲ್ಲ. ಕಾಂಕ್ರಿಟ್ ನೆಲಕ್ಕಿಂತ ಮರಳಿನ ನೆಲದ ಮೇಲೆ ಘರ್ಷಣೆ ಹೆಚ್ಚಾಗಿರುತ್ತದೆ. ಆದ ಕಾರಣ ಮರಳಿನ ನೆಲದ ಮೇಲಿನ ನಡಿಗೆಯ ವೇಗ ಕಡಿಮೆ ಇರುತ್ತದೆ. ಘರ್ಷಣೆ ಇಲ್ಲದಿದ್ದರೆ ವಾಹನವೂ ಸಹ ಸ್ಟಾರ್ಟ್ ಆಗುವುದೇ ಇಲ್ಲ. ಒಂದು ವೇಳೆ ಸ್ಟಾರ್ಟ್ ಆದರೂ ವಾಹನದ ವೇಗ ಹೆಚ್ಚು ಅಥವಾ ಕಡಿಮೆ ಮಾಡಲು ಸಹ ಆಗುತ್ತಿರಲಿಲ್ಲ. ಗೇರ್ ಬದಲಿಸಲು ಆಗುತ್ತಿರಲಿಲ್ಲ. ಒಂದೇ ವೇಗದಲ್ಲಿ ವಾಹನವು ನಿಲ್ಲದೇ ಓಡುತ್ತಲೇ ಇರುತ್ತಿತ್ತು. ಘರ್ಷಣೆ ಇಲ್ಲದಿದ್ದರೆ ಆಕಾಶದಲ್ಲಿ ವಿಮಾನ ಹಾರಾಟ ತೊಂದರೆಯಾಗುತ್ತಿತ್ತು. ಮೇಲೇರಿದ ವಿಮಾನಗಳು ಕೆಳಗಿಳಿಯಲು ಸಾಧ್ಯವಾಗುತ್ತಲೇ ಇರಲಿಲ್ಲ. ಘರ್ಷಣೆ ಇಲ್ಲದಿದ್ದರೆ ಭೂಮಿಯ ಮೇಲೆ ಯಾವುದೇ ಕಟ್ಟಡಗಳನ್ನು ಕಟ್ಟಲಾಗುತ್ತಿರಲಿಲ್ಲ. ಘರ್ಷಣೆ ಇಲ್ಲದಿದ್ದರೆ ನಾವು ಒಂದೆಡೆ ಕೂರಲು, ನಿಲ್ಲಲು ಆಗುತ್ತಿರಲಿಲ್ಲ. ಗಾಳಿಯಲ್ಲಿ ತೇಲಾಡುತ್ತ ಇರಬೇಕಾಗುತ್ತಿತ್ತು. ಅಂತರಿಕ್ಷದಲ್ಲಿ ಘರ್ಷಣೆ ಶೂನ್ಯವಾಗಿರುತ್ತದೆ. ಅಲ್ಲಿ ಮಾನವ ಸೇರಿದಂತೆ ಎಲ್ಲಾ ವಸ್ತುಗಳೂ ಸದಾ ತೇಲಾಡುತ್ತ ಇರುತ್ತವೆ. ಘರ್ಷಣೆಯಲ್ಲಿ ಸ್ಥಿರ ಘರ್ಷಣೆ, ಉರುಳು ಘರ್ಷಣೆ ಮತ್ತು ಪ್ರಚ್ಛನ್ನ ಘರ್ಷಣೆ ಎಂಬ ಮೂರು ವಿಧಗಳಿವೆ. ವಿದ್ಯುತ್ ಕಂಬ, ಧ್ವಜಕಂಬ, ಕಟ್ಟಡಗಳು ಇವೆಲ್ಲವೂ ಒಂದೆಡೆ ಸ್ಥಿರವಾಗಿರುತ್ತವೆ. ಸ್ಥಿರ ಘರ್ಷಣೆಯ ಕಾರಣದಿಂದ ಇವು ಯಾವಾಗಲೂ ಇದ್ದಲ್ಲೇ ಇರುತ್ತವೆ. ಕೆಲವು ವಸ್ತುಗಳು ಉರುಳುವಾಗ ಘರ್ಷಣೆ ಪಡೆಯುತ್ತವೆ. ಗೋಲಿಯು ಉರುಳು ಘರ್ಷಣೆಯ ಕಾರಣದಿಂದ ಚಲಿಸುತ್ತದೆ. ಹಾಗೆಯೇ ವಾಹನಗಳೂ ಸಹ ಉರುಳು ಘರ್ಷಣೆಯ ಕಾರಣದಿಂದ ಒಂದೆಡೆಯಿಂದ ಇನ್ನೊಂದೆಡೆ ಚಲಿಸುತ್ತವೆ. ಪರಸ್ಪರ ಸಂಪರ್ಕಕ್ಕೆ ಒಳಗಾದ ಎರಡೂ ವಸ್ತುಗಳು ಚಲನೆಯಲ್ಲಿದ್ದಾಗ ಪ್ರಚ್ಛನ್ನ ಘರ್ಷಣೆ ಉಂಟಾಗುತ್ತದೆ. ವಿಮಾನ ಚಲಿಸುವ ವೇಳೆ ಗಾಳಿ ಮತ್ತು ವಿಮಾನಗಳು ಪರಸ್ಪರ ಚಲನೆಯಲ್ಲಿರುತ್ತವೆ. ಆಗ ಪ್ರಚ್ಛನ್ನ ಘರ್ಷಣೆ ಉಂಟಾಗುತ್ತದೆ.

ಘರ್ಷಣೆ ಇಲ್ಲದಿದ್ದರೆ ಬೆಂಕಿಕಡ್ಡಿಯಿಂದ ಬೆಂಕಿ ಹೊತ್ತಿಸಲು ಆಗುತ್ತಿರಲಿಲ್ಲ. ಘರ್ಷಣೆ ಇಲ್ಲದಿದ್ದರೆ ಸಸ್ಯಗಳು, ಮರಗಳು ಮೇಲ್ಮುಖವಾಗಿ ಬೆಳೆಯಲು ಆಗುತ್ತಿರಲಿಲ್ಲ. ಸಸ್ಯಗಳು, ಮರಗಳು ಇಲ್ಲದೇ ಆಮ್ಲಜನಕ ಹಾಗೂ ಜೀವಿಗಳಿಗೆ ಬೇಕಾದ ಆಹಾರ ಉತ್ಪಾದನೆ ಇರುತ್ತಿರಲಿಲ್ಲ. ಆಗ ಜೀವಿಗಳ ಜೀವನ ಕಷ್ಟವಾಗುತ್ತಿತ್ತು. ಮಣ್ಣು ಬೇರುಗಳ ನಡುವೆ ಘರ್ಷಣೆ ಇರುವುದರಿಂದ ಮಣ್ಣು ಬೇರುಗಳನ್ನು ಹಿಡಿದಿಟ್ಟುಕೊಂಡಿದೆ. ಹಾಗಾಗಿ ಮರಗಳು ಮೇಲ್ಮುಖವಾಗಿ ನಿಂತುಕೊಂಡಿವೆ. ಘರ್ಷಣೆ ಇಲ್ಲದಿದ್ದರೆ ವಾಹನಗಳ ಸವಕಳಿ ಕಡಿಮೆಯಾಗುತ್ತಿತ್ತು. ಇದರಿಂದ ಅವುಗಳ ಕಾರ್ಯಕ್ಷಮತೆ ಹೆಚ್ಚುತ್ತಿತ್ತು. ವಾಹನಗಳಲ್ಲಿ ಉಂಟಾಗುವ ಘರ್ಷಣೆಯನ್ನು ಕಡಿಮೆ ಮಾಡಲು ಅವುಗಳ ಬಿಡಿಭಾಗಗಳಿಗೆ ಆಗಾಗ ಎಣ್ಣೆ ಅಥವಾ ಗ್ರೀಸ್ ಬಳಸುವುದನ್ನು ಗಮನಿಸಿದ್ದೇವೆ. ಏನೇ ಆಗಲಿ ಘರ್ಷಣೆಯಿಂದ ಒಂದಿಷ್ಟು ಅನುಕೂಲಗಳಿರುವಂತೆ ಅನನುಕೂಲಗಳು ಇವೆ. ಇದಿಷ್ಟನ್ನು ಕೇಳುತ್ತ ಕುಳಿತಿದ್ದ ಉಷಾ ಮತ್ತು ಪವನ ಅಡುಗೆ ಮನೆಯಲ್ಲಿ ಜಾರಿಬಿದ್ದ ತಟ್ಟೆಯ ಸದ್ದಿಗೆ ಅತ್ತ ನಡೆದರು. ಈಗ ನಿಮ್ಮ ಸರದಿ.

Writer - ಆರ್.ಬಿ. ಗುರುಬಸವರಾಜ

contributor

Editor - ಆರ್.ಬಿ. ಗುರುಬಸವರಾಜ

contributor

Similar News