ನಿರಂತರ ವಿಕಸಿತವಾಗಬೇಕಾದ ಜೀವನದೃಷ್ಟಿ

Update: 2020-02-27 07:39 GMT

ಸ್ಥಿರನೆಲೆಯಿಂದ ಆರಂಭಿಸಿ, ಜೀವನದೃಷ್ಟಿ ವಿಕಾಸಗೊಳಿಸುತ್ತಾ ಚರನೆಲೆಯತ್ತ ಸಾಗುವ ವಿಸ್ಮಯದ ಒಂದು ಅಪೂರ್ಣ ಪ್ರಯಾಣವೇ ಮನುಷ್ಯನ ಬದುಕು. ಅಪೂರ್ಣವೇಕೆಂದರೆ, ಇಲ್ಲಿ ಪೂರ್ಣಸತ್ಯಗಳಿಲ್ಲ, ಬರಿ ದೃಷ್ಟಿಕೋನಗಳಷ್ಟೇ. ಗಾಂಧೀಜಿ ಹೇಳಿದಂತೆ, ನಮ್ಮ ಇಡೀ ಬದುಕೇ ಒಂದು ಸತ್ಯದ ಹುಡುಕಾಟ, ಅನ್ವೇಷಣೆ ಅಥವಾ ಪ್ರಯೋಗ. ನಮ್ಮ ಬಾಲ್ಯದಲ್ಲಿ, ಸುತ್ತಮುತ್ತಲಿನ ಪರಿಸರ ಕಟ್ಟಿಕೊಡುವ ನೆಲೆಯನ್ನು ಸ್ಥಿರವೆಂದು ತೆಗೆದುಕೊಂಡರೆ, ನಾವು ನಿಧಾನವಾಗಿ ಅರಿವಿನ ಪ್ರಪಂಚಕ್ಕೆ ತೆರೆದುಕೊಂಡಂತೆ, ಆ ನೆಲೆ ಕ್ರಮೇಣ ಚರವಾಗುತ್ತ ಹೋಗುತ್ತದೆ. ಈ ಪ್ರಕ್ರಿಯೆ ಬಹಳ ಸಂಕೀರ್ಣ. ನಮಗೆ ಕಟ್ಟಿಕೊಟ್ಟ ಸ್ಥಿರನೆಲೆಯನ್ನು ಒಪ್ಪುತ್ತಾ, ಅಳವಡಿಸಿಕೊಳ್ಳುತ್ತಾ, ಕೆಲವೊಮ್ಮೆ ಪ್ರಶ್ನಿಸುತ್ತಾ, ವಿಮರ್ಶಿಸುತ್ತಾ, ವಿರೋಧಿಸುತ್ತಾ ನಮ್ಮದೇ ಜೀವನದೃಷ್ಟಿಯನ್ನು ಕಂಡುಕೊಂಡಂತೆ, ನಮ್ಮ ಜೀವನ ಒಂದು ಹರಿಯುವ ನದಿಯಂತೆ ಕಾಣಿಸತೊಡಗುತ್ತದೆ. ಒಂದು ಸಣ್ಣ ನಿಗೂಢ ಉಗಮಸ್ಥಾನದಿಂದ ಪ್ರಾರಂಭವಾಗಿ, ಮುಂದೆ ಸಾಗುತ್ತಾ ಬೇರೆ ಬೇರೆ ನೆಲೆಗಳಿಂದ ಹರಿದುಬಂದ ತೊರೆಗಳೊಂದಿಗೆ ಮೇಳೈಸಿ, ವೈವಿಧ್ಯತೆಗಳೊಂದಿಗೆ ಮೊದಲು ಸಂಘರ್ಷಣೆ ಆಮೇಲೆ ಸ್ವವಿಮರ್ಶೆಯ ಮೂಲಕ, ಕೆಲವನ್ನು ಅಂತರ್ಗತ ಮಾಡಿಕೊಳ್ಳುತ್ತಾ, ವಿಸ್ತಾರಗೊಳ್ಳುತ್ತಾ, ಎಲ್ಲ ಅಣೆಕಟ್ಟುಗಳ ಮೀರಿ, ಸಾಗರದಲ್ಲಿ ಲೀನವಾಗುವುದೇ, ಮನುಷ್ಯ ಜೀವನದ ಒಟ್ಟು ತಾತ್ಪರ್ಯ. ಹಾಗಿದ್ದಲ್ಲಿ, ಎಲ್ಲರೂ ಚರನೆಲೆ ಕಂಡುಕೊಳ್ಳುತ್ತಾರೆಯೇ? ಹಾಗೇನೂ ಇಲ್ಲ. ಕೆಲವರು ಜೀವನವಿಡೀ ಸ್ಥಿರನೆಲೆಯಲ್ಲಿಯೇ ಇದ್ದುಬಿಡುತ್ತಾರೆ. ಈ ಸ್ಥಿರನೆಲೆಯನ್ನು ಒಂದು ನಿಂತನೀರ ಕೊಳಕ್ಕೆ ಹೋಲಿಸಬಹುದು. ಕೊಳದ ನೀರು ಮೇಲೆ ತಿಳಿಯಾಗಿಯೇ ಕಾಣಿಸುತ್ತದೆ, ಆದರೆ ಒಳಗೊಳಗೇ ಕೆಸರುನಿಲ್ಲುತ್ತಾ, ನಿಧಾನವಾಗಿ ಇಡೀ ದೇಹವನ್ನು ಹುದುಗಿಸುವಷ್ಟು ಆಳ ವ್ಯಾಪ್ತಿ ಪಡೆಯುತ್ತದೆ. ಇದರಂತೆಯೇ, ನಾವು ನಮ್ಮನ್ನು ಸಮಕಾಲೀನ ಪ್ರಾಪಂಚಿಕ ಬದಲಾವಣೆಗಳಿಗೆ ಮತ್ತು ಹೊಸ ಅರಿವುಗಳಿಗೆ ಮನಸ್ಸನ್ನು ತೆರೆದುಕೊಳ್ಳದಿದ್ದರೆ ಬದುಕಿನ ದೃಷ್ಟಿಕೋನ ಸ್ಥಿರವಾಗಿಯೇ ಉಳಿದುಬಿಡುವ ಸಾಧ್ಯತೆಯಿದೆ. ನಿಂತ ಮನುಷ್ಯನ ಮನಸ್ಸು, ಅಸಂಬದ್ಧ ಆಲೋಚನೆಗಳಿಂದ ಭಾರವಾಗಿರುತ್ತದೆ. ಹರಿಯುವ ಮನಸ್ಸು ಕಲ್ಮಶವಿಲ್ಲದೆ ಹಗುರವಾಗಿರುತ್ತದೆ. ಅದಕ್ಕಾಗಿಯೇ ಮನುಷ್ಯ ಮುಂದಕ್ಕೆ ನಡೆಯುತ್ತಲೇ ಇರಬೇಕು. ಕುವೆಂಪು ಹೇಳಿದಂತೆ, 'ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು, ಓ ಅನಂತವಾಗಿರು', ಚರನೆಲೆ ಕಂಡುಕೊಳ್ಳುವುದು ಬದುಕನ್ನು ಸಂಪೂರ್ಣವಾಗಿ ಅನುಭವಿಸಿದಂತೆ. ಈ ಸಂಚಾರ, ಬರಿ ಬಾಹ್ಯಸಂಚಾರಕ್ಕೆ ಸೀಮಿತವಲ್ಲ. ಇದು ಮುಖ್ಯವಾಗಿ, ಆಂತರಿಕ ಸಂಚಾರ, ತನ್ನೊಳಗಿನ ಪ್ರಯಾಣ. ಈ ಪ್ರಯಾಣದ ಹುಡುಕಾಟ, ಹುಟ್ಟುಸಾವಿನ ಮಧ್ಯದ, ಜೀವನದ ಸಾರ್ಥಕತೆ.

ಹುಟ್ಟಿದ ಮನುಷ್ಯನಿಗೆ ಮೂಲಭೂತವಾಗಿ ಕಾಡುವ ಪ್ರಶ್ನೆಯೇ, ಜೀವನದ ಉದ್ದೇಶದ ಸಾಧ್ಯಾಸಾಧ್ಯತೆಗಳು. ಅದಕ್ಕೆ ವಿವಿಧ ಧರ್ಮಗ್ರಂಥಗಳು ಹಾಗೂ ತತ್ವಶಾಸ್ತ್ರಗಳು ತಮ್ಮದೇ ವ್ಯಾಖ್ಯಾನಗಳನ್ನು ಕೊಟ್ಟಿವೆ. ಅದಕ್ಕಾಗಿಯೇ ಕರ್ಮಸಿದ್ಧಾಂತ, ಪುನರ್ಜನ್ಮಗಳಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನಪಡುತ್ತೇವೆ. ಆದರೆ, ಅವು ನಮ್ಮ ಅಳತೆಮೀರಿದ ಊಹೆಗಳಷ್ಟೇ. ಹಾಗಿದ್ದಲ್ಲಿ, ನಮ್ಮ ಅರಿವಿನಲ್ಲಿರುವ ವರ್ತಮಾನದ ಬದುಕನ್ನು ಅರ್ಥಪೂರ್ಣಗೊಳಿಸುವುದು ಹೇಗೆ? ನಮ್ಮ ಸುತ್ತಲೂ ಸದಾ ಗೋಚರಿಸುವ ನೋವು, ಸೋಲು, ಹತಾಶೆ, ಆಘಾತಗಳ ಮಧ್ಯೆ ನಮ್ಮ ಜೀವನವನ್ನು ಯಾವ ಪ್ರೇರಣೆಯಿಂದ ಮುಂದುವರಿಸಬೇಕು?

ಸಾಮಾನ್ಯವಾಗಿ, ಜನಸಾಮಾನ್ಯರ ದೃಷ್ಟಿಕೋನದಲ್ಲಿ ಜೀವನವೆಂದರೆ, ಚೆನ್ನಾಗಿ ಸಂಪಾದನೆ ಮಾಡುವುದು, ಮುಂದುವರಿದು ಮದುವೆ, ಮಕ್ಕಳು ಮತ್ತು ಸಂಸಾರದ ಪರಿಧಿಯಲ್ಲಿ ಬದುಕು ಕಟ್ಟಿಕೊಂಡು ಅದರಲ್ಲಿ ಸುಖ, ನೆಮ್ಮದಿ ಕಾಣುವ ಪ್ರಯತ್ನಪಡುತ್ತಾ ರಾಜಿಯ ಜೀವನ ನಡೆಸುವುದು. ಇದನ್ನು ಮೀರಿ ಕಟ್ಟಿಕೊಂಡ ಬದುಕು ನಮಗೆ ಅಸಹಜವಾಗಿ ಕಾಣಿಸುತ್ತದೆ. ಹಾಗಾಗಿಯೇ, ಮದುವೆಯಾಗದೆ ಒಂಟಿ ಜೀವನ ನಡೆಸುವವರು, ಮದುವೆಯಾದರೂ ಮಕ್ಕಳನ್ನು ಹೆರದವರು, ಸಲಿಂಗ ಪ್ರೇಮಿಗಳು, ತಮ್ಮ ಹವ್ಯಾಸಗಳಲ್ಲಿಯೇ ಜೀವನ ಕಂಡುಕೊಂಡವರು ಅಥವಾ ವಿವಾಹದ ಹಂಗಿಲ್ಲದೆ ಜೊತೆಗಿರುವವರು, ಆರಾಮವಾಗಿ ಜೀವಿಸಿದಂತೆ ಕಂಡರೆ ನಮಗೆ ಕಸಿವಿಸಿಯಾಗುತ್ತದೆ.

ಹಾಗಿದ್ದಲ್ಲಿ, ಚರನೆಲೆ ಪಡೆಯುವತ್ತ, ಜೀವನದೃಷ್ಟಿ ವಿಸ್ತಾರಗೊಳಿಸಲು ಕಾರಣೀಭೂತ ಅಂಶಗಳ್ಯಾವವು? ನಮ್ಮನ್ನು ಸ್ಥಿರನೆಲೆಯಿಂದ ಮುಕ್ತಿಗೊಳಿಸುವುದು, ನಮ್ಮ ಜೀವನಾನುಭವ ಮತ್ತು ಹೊಸ ಅರಿವು. ಇದಕ್ಕೆ ಪೂರಕವಾಗಿ ನಮ್ಮ ಮುಂದಿರುವ ಸಮಕಾಲೀನ ಉದಾಹರಣೆ, ಗಾಂಧೀಜಿಯ ಜೀವನದೃಷ್ಟಿ. ತನ್ನ ಜೀವನವನ್ನು ತೆರೆದಪುಸ್ತಕದಂತೆ ನಮ್ಮ ಮುಂದಿಟ್ಟಿರುವ ಗಾಂಧೀಜಿ, ಹರಿಯುವ ನೀರಿನಂತೆ ಜೀವನದೃಷ್ಟಿಯನ್ನು ವಿಕಸಿಸುತ್ತಾ ಮುನ್ನೆಡೆಯುತ್ತಾರೆ. ತನ್ನ ಮಗನ ಅಂತರ್ಜಾತಿಯ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ ಗಾಂಧೀಜಿ, ಮುಂದೆ ತನ್ನನ್ನು ಅಂತರ್ಜಾತಿಯ ವಿವಾಹಕ್ಕೆ ಕರೆದರೆ ಮಾತ್ರ ಬರುತ್ತೇನೆ ಎನ್ನುವಷ್ಟು ಬದಲಾಗುತ್ತಾರೆ.

ಮನುಷ್ಯ ಜೀವನದ ಅರ್ಥ ಹುಡುಕಾಟದ ಕುರಿತು ಆಂಗ್ಲ ಕವಿ ಲಾಂಗ್ ಫೆಲೋ ಬರೆದಿರುವ, 'ಏ ಸ್ಯಾಮ್ ಆಫ್ ಲೈಫ್'ನಲ್ಲಿ ಹೇಳಿರುವಂತೆ, 'ಜೀವನ ಇರುವುದು ವರ್ತಮಾನದಲ್ಲಿ ಮಾತ್ರ, ಇದನ್ನು ಭೂತಕಾಲ ಅಥವಾ ಭವಿಷ್ಯದಲ್ಲಿ ಹುಡುಕುತ್ತ ಕಾಲಹರಣ ಮಾಡಬಾರದು. ಸಂಯಮವೇ ಜೀವನ, ಬರಿ ಸಂತೋಷ ಅಥವಾ ಕಣ್ಣೀರೇ ಜೀವನದ ಗುರಿಯಲ್ಲ. ಮಣ್ಣಿನಿಂದ ಹುಟ್ಟಿ, ಪುನಃ ಮಣ್ಣಿಗೆ ಸೇರುವ ಈ ದೇಹದ ಪ್ರಯಾಣದಲ್ಲಿ, ಸಾಧನೆಯ ಹೆಜ್ಜೆಗುರುತುಗಳನ್ನು ಮುಂದಿನ ಜನಾಂಗದ ಪ್ರೇರಣೆಗಾಗಿ ಬಿಟ್ಟುಹೋಗುವುದಷ್ಟೇ ಜೀವನದ ಉದ್ದೇಶ'.

Writer - ಡಾ ಜ್ಯೋತಿ

contributor

Editor - ಡಾ ಜ್ಯೋತಿ

contributor

Similar News