ಬದುಕು ಹಾಗೂ ಖುಷಿಯ ಷರತ್ತುಗಳ ಅನಾವರಣ ಮಾಡುವ ಪುಸ್ತಕ

Update: 2020-02-27 07:48 GMT

ದಿನಪತ್ರಿಕೆಗಳ ಪುರವಣಿಗಳಲ್ಲಿ ಯಾವುದಾದರೊಂದು ಬರಹ ನಿಮ್ಮನ್ನು ಸೂಜಿಗಲ್ಲಿನಂತೆ ಸೆಳೆಯಿತೋ, ಸಂದೇಹವೇ ಬೇಡ. ಅದರ ಲೇಖಕರು ಸದಾಶಿವ ಸೊರಟೂರು. ನಿಯತಕಾಲಿಕಗಳ ನಿರಂತರ ಬರಹದ ಮೂಲಕ ಓದುಗರಿಗೆ ಚಿರಪರಿಚಿತರಾಗಿರುವ ಹೊಸ ತಲೆಮಾರಿನ ಬರಹಗಾರರಿವರು. ಈಗಾಗಲೇ ಐದು ಲೇಖನ ಸಂಕಲನಗಳು ಹಾಗೂ ಎರಡು ಕವನ ಸಂಕಲನಗಳ ಮೂಲಕ ಸಾಹಿತ್ಯ ಲೋಕದಲ್ಲಿ ದೃಢವಾಗಿ ಹೆಜ್ಜೆಯೂರಿರುವ ಇವರ ಎಂಟನೇಯ ಪುಸ್ತಕವೇ, ಷರತ್ತುಗಳು ಅನ್ವಯಿಸುತ್ತವೆ. ಬದುಕಿಗೂ ಖುಷಿಗೂ ಎಂಬ ಟ್ಯಾಗ್ ಲೈನೂ ಸೇರಿದಾಗ ಶೀರ್ಷಿಕೆ ಸಂಪೂರ್ಣ ಹಾಗೂ ಅರ್ಥಪೂರ್ಣ. ಈ ಶೀರ್ಷಿಕೆಯ ಮೋಹಕತೆಗೆ ಮರುಳಾಗಿ ನೀವು ಆ ಪುಸ್ತಕವನ್ನು ಓದುವ ಮನಸ್ಸು ಮಾಡಿಯೇ ಮಾಡುತ್ತೀರಿ. ಇದರಲ್ಲಿರುವ ಬಿಡಿಬಿಡಿ ಲೇಖನಗಳು ಗಾತ್ರದಲ್ಲಿ ಸಣ್ಣವು. ಬದುಕಿನಲ್ಲಿ ಬಹುತೇಕರು ಅಪ್ರಧಾನವೆಂದು ಪರಿಗಣಿಸುವ ವಿಷಯಗಳನ್ನು ಕೈಗೆತ್ತಿಕೊಂಡು ಬಹಳ ಆಕರ್ಷಕವಾದ ಶೈಲಿಯಲ್ಲಿ, ಹಿತವಾದ ಭಾಷೆಯಲ್ಲಿ ಸುಂದರ ಲೇಖನಮಾಲೆಯನ್ನು ಪೋಣಿಸಿರುವ ಅವರ ಚಾಕಚಕ್ಯತೆಗೆ ಓದುಗ ತಲೆದೂಗಲೇಬೇಕು. ಈ ವಿಷಯಗಳನ್ನೆಲ್ಲ ಕಡೆಗಣಿಸಿಬಿಟ್ಟಿದ್ದರಿಂದಲೇ ತನ್ನ ಬದುಕಿನ ಖುಷಿ ನಷ್ಟವಾಯ್ತೇ ಎಂದು ಓದುಗ ಕೊನೆಗೆ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳಬಹುದು. ಎಲ್ಲರೂ ತಮ್ಮ ಬದುಕಲ್ಲಿ ನೋಡಿ, ಕೇಳಿ, ಅನುಭವಿಸಿರಬಹುದಾದ ವಿಷಯಗಳನ್ನೇ ವಿಭಿನ್ನ ಆಯಾಮದಲ್ಲಿ ಯೋಚಿಸಿ ಲೇಖನವಾಗಿಸಿದ್ದರಲ್ಲೇ ಸದಾಶಿವ ಅವರ ಪ್ರತಿಭೆ ಅಡಗಿದೆ. ಸಾಹಿತ್ಯ ಕೃತಿಯೊಂದನ್ನು ಓದುವಾಗ ಉಂಟಾಗಬೇಕಾದ ರಸಸ್ವಾದನೆ ಓದುಗನಿಗೆ ಈ ಕೃತಿಯಿಂದ ಖಂಡಿತಾ ಸಿಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಸದಾಶಿವ ಅವರು ತಮ್ಮ ಪುಸ್ತಕದ ಬಗ್ಗೆ ಹೇಳಿಕೊಂಡಿರುವ ಮಾತು ಈ ಪುಸ್ತಕದ ಬರಹಗಳಿಗೆ ಪೀಠಿಕೆ ಎನ್ನಬಹುದು ಅಥವಾ ಇದರ ಎಲ್ಲಾ ಬರಹಗಳ ಸಂಗ್ರಹ ಎನ್ನಬಹುದು. ಬದುಕಾಗಲಿ, ಅದರೊಳಗಿನ ಖುಷಿಯಾಗಲಿ ಬುಕ್ಕು ಹಿಡಿದು ಓದಿಕೊಂಡು ಮಾಡುವ ಅಡುಗೆಯಲ್ಲ. ಸಾಮಾನ್ಯರಾದ ನಮಗೆ ತೀರಾ ಬದುಕನ್ನು ಪಳಗಿಸಿ ನಿಲ್ಲಿಸಿಕೊಂಡು ಅದರಿಂದ ಕಂದಾಯ ವಸೂಲಿ ಮಾಡುವಂತಹ ದೊಡ್ಡ ಆಸೆ ಇರುವುದಿಲ್ಲ. ಆಯಾ ಹೊತ್ತಿಗೆ ಬೊಗಸೆಯಲ್ಲಿ ಬಂದು ಕೂರುವ ತಲ್ಲಣಗಳನ್ನಾಗಲೀ, ಖುಷಿಯನ್ನಾಗಲೀ, ಸಂಕಟಗಳನ್ನಾಗಲೀ ತಾಜಾತಾಜಾ ಅನುಭವಿಸಿ ಅದರಿಂದ ಕಲಿತು, ಮತ್ತೆ ಅದರೊಂದಿಗೆ ಒಂದಾಗಬೇಕು. ಅದು ಒಡ್ಡುವ ಷರತ್ತುಗಳನ್ನು ಪೂರೈಸಬೇಕು....ಅವು (ಈ ಪುಸ್ತಕದೊಳಗಿನ ಲೇಖನಗಳು)ನನ್ನೊಳಗೆ ನಾನು ನಡೆದಂತೆ ಮೂಡಿದ ಬೆವರ ಹನಿಗಳು. ಹನಿಗಳು ನನ್ನವೇ. ಬೆವರನ್ನು ಕದ್ದು ನಮ್ಮ ಮೇಲೆ ಮೂಡಿಸಿಕೊಳ್ಳಲಾಗುವುದಿಲ್ಲ ನೋಡಿ.. ಮಂಜುನಾಥ್ ಚಾಂದ್ ಅವರ ಬೆನ್ನುಡಿ, ಪುಸ್ತಕದ ತೂಕವನ್ನು ಹೆಚ್ಚಿಸಿದೆ. 'ಎಷ್ಟೋ ಬಾರಿ ನಮ್ಮೋಳಗೊಂದು ತಂತು ಸಣ್ಣಗೆ, ಗೊತ್ತೇ ಆಗದ ರೀತಿಯಲ್ಲಿ ಅಲುಗಾಡುತ್ತಿರುತ್ತದೆ.... ನಮ್ಮ ಗಡಿಬಿಡಿ, ಧಾವಂತ ಚಡಪಡಿಕೆಗಳ ನಡುವೆ ಬೊಗಸೆಯಲ್ಲಿ ಇಟ್ಟುಕೊಳ್ಳಬಲ್ಲ ಎಷ್ಟೊಂದು ಕ್ಷಣಗಳಿವೆಯಲ್ಲವೇ? ಡಿಜಿಟಲ್ ಪ್ರಪಂಚದಲ್ಲಿ ಕಳೆದುಹೋಗುವ ನಮಗೆ ಇಂತಹ ಕ್ಷಣಗಳೇ ಜೀವವಾಗಬೇಕು. ಇಂತಹ ಸಣ್ಣಸಣ್ಣ ಚುಂಗುಗಳಲ್ಲೇ ಖುಷಿಯ ಗುಂಗು ಹುಡುಕುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಸದಾಶಿವ ಸೊರಟೂರು. ಈ ಲೇಖನಗಳು ನಿಮ್ಮಾಳಗಿನ ತಂತು ಅಲುಗಾಡುವಂತೆ ಮಾಡುತ್ತವೆ.' ಎಂಬ ಇವರ ಮಾತುಗಳು ಅತಿಶಯೋಕ್ತಿಯದ್ದಲ್ಲ.

  ನಮ್ಮವರೇ ಅಲ್ವಾ? ಎಂಬ ಇತರರ ಕುರಿತ ನಮ್ಮ ಭಾವನೆ ಉಢಾಫೆಯ ವರ್ತನೆಯಾಗಿ ಬದಲಾಗಬಹುದುದೆಂದು ನಮ್ಮವರೇ ಅಲ್ವಾ? ಎಂಬ ಲೇಖನ ಎಚ್ಚರಿಕೆ ನೀಡುತ್ತದೆ. ನಮ್ಮ ಬದುಕಲ್ಲಿ ಬಂದು ಹೋದ ತೀರಾ ಸಾಮಾನ್ಯರಾದ ಅವರೆಲ್ಲಾ ಎಲ್ಲಿ ಹೋದರು? ಎಂದು ತಮ್ಮ ಇನ್ನೊಂದು ಲೇಖನದ ಮೂಲಕ ಅವರು ಪ್ರಶ್ನಿಸುತ್ತಾರೆ. ಕಾಲ ಎಲ್ಲವನ್ನೂ ಮರೆಸುತ್ತದೆ. ಆದರೆ ನಾವೇ ಕೆಲವೊಂದನ್ನು ಒತ್ತಾಯಪೂರ್ವಕವಾಗಿ ಎತ್ತಿಟ್ಟುಕೊಳ್ಳುತ್ತೇವೆ. ಆಗಾಗ ಮನೆಯನ್ನು ಕ್ಲೀನ್ ಮಾಡಿದಂತೆ ಬೇಡವಾದದ್ದನ್ನು ಎತ್ತಿ ಬಿಸಾಕಿ. ಹೊಸದಕ್ಕೆ ಜಾಗಕೊಡಿ ಎಂಬ ತಾತ್ವಿಕ ಚಿಂತನೆಯನ್ನು ಬೇಡವಾದದ್ದು ಬೇಕಾ? ಎಂಬ ಲೇಖನದ ಮೂಲಕ ನಮ್ಮ ಮುಂದಿಡುತ್ತಾರೆ. ಪುಸ್ತಕದ ಶೀರ್ಷಿಕೆಯ ಬರಹ ಷರತ್ತುಗಳು ಅನ್ವಯಿಸುತ್ತವೆ ಲೇಖಕರ ಮಾತುಗಳನ್ನು ಕೇಳಿ. 'ಬದುಕಿನ ಷರತ್ತುಗಳು ಖುಲ್ಲಂ ಖುಲ್ಲಂ. ಬಾಳು ತನ್ನ ಷರತ್ತುಗಳನ್ನು ಅಂಗೈಯಲ್ಲಿಟ್ಟುಕೊಂಡು ಎದುರಿಗೆ ನಿಲ್ಲುತ್ತದೆ. ಬದುಕಿಗೆ ಖುಷಿಗೆ ಕೆಲವು ಷರತ್ತುಗಳು ಅನ್ವಯಿಸುತ್ತವೆ. ಅವನ್ನು ಪಾಲಿಸಬೇಕಷ್ಟೇ.ಆಗ ಮಾತ್ರ ನಿಮ್ಮ ಬಾಳು ನಗುತ್ತದೆ' ಎಂತಹ ಮಾರ್ಮಿಕ ನುಡಿಗಳು ಅಲ್ಲವೇ? ಬದುಕಲಿಕ್ಕೊಂದು ಭ್ರಾಂತಿ ಬೇಕು ಎಂಬ ಲೇಖನ ಓದುವಾಗ ನಮಗೆ ಹೌದೆನಿಸದಿರದು. ತಲೆದಿಂಬಿಗೆ ಅಂತ ನಾಲ್ಕು ಕಾಸು ಇಲ್ಲವೆಂದ ಮೇಲೆ? ಲೇಖನದ ಮೂಲಕ ಉಳಿತಾಯದ ಅಗತ್ಯವನ್ನು ತಿಳಿಸುತ್ತಾರೆ. ವಾಸ್ತವದಲ್ಲಿ ಬದುಕಿ-ಮನಸ್ಸಿಗೊಂದು ರಿಲ್ಯಾಕ್ಸ್ ಇದೆ, ಸಮರ್ಥನೆಗಳನ್ನು ಆ ಪರಿ ಸಾಕಿಕೊಳ್ಳಬಾರದು, ಉಲ್ಲಾಸ ನಮ್ಮ್‌ಳಗಿದೆ, ನಿಮ್ಮ ಆಲೋಚನೆಗಳಲ್ಲಿ ಎಷ್ಟು ನಿಮ್ಮವು?, ಪ್ರತಿ ಬೆಳಗಿನಲ್ಲೂ ಮನಸ್ಸಿಗೆ ಬಣ್ಣ ಬಳಿದುಕೊಂಡು ಇತ್ಯಾದಿ ಈ ಸಂಕಲನದ ಒಂದೊಂದು ಲೇಖನವೂ ಒಂದೊಂದು ಹೊಳಹನ್ನು ನಮ್ಮ ಮುಂದೆ ತೆರೆದಿಡುತ್ತದೆ. ತಾರಾನಾಥ ಭದ್ರಾವತಿಯವರ ಭಾವ ಸಿಂಚನಾ ಪ್ರಕಾಶನ ಹೊರತಂದಿರುವ ಈ ಪುಸ್ತಕದ ಬೆಲೆ 130 ರೂಪಾಯಿಗಳು. ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಪುಸ್ತಕಗಳು ಲಭ್ಯ. 

Writer - ಜೆಸ್ಸಿ ಪಿ.ವಿ

contributor

Editor - ಜೆಸ್ಸಿ ಪಿ.ವಿ

contributor

Similar News