ದ್ವೇಷ ಭಾಷಣಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ: ಕೇಂದ್ರಕ್ಕೆ 1 ತಿಂಗಳ ಕಾಲಾವಕಾಶ ನೀಡಿದ ದಿಲ್ಲಿ ಹೈಕೋರ್ಟ್

Update: 2020-02-27 16:15 GMT

ಹೊಸದಿಲ್ಲಿ, ಫೆ. 27: ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ 48 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ದಿಲ್ಲಿ ಸಹಜ ಸ್ಥಿತಿಗೆ ಮರಳುವವರೆಗೆ ನ್ಯಾಯಾಂಗ ಹಸ್ತಕ್ಷೇಪ ಮಾಡಬಾರದು ಎಂದು ಕೇಂದ್ರ ಸರಕಾರ ಹಾಗೂ ದಿಲ್ಲಿ ಪೊಲೀಸರು ಗುರುವಾರ ದಿಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಗೆ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರ ಸರಕಾರ ಹಾಗೂ ದಿಲ್ಲಿ ಪೊಲೀಸರಿಗೆ ದಿಲ್ಲಿ ಉಚ್ಚ ನ್ಯಾಯಾಲಯ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ಬಿಜೆಪಿಯ ಮೂವರು ನಾಯಕರು ದ್ವೇಷ ಭಾಷಣ ಮಾಡಿದ ಆರೋಪದ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂಬ ಮನವಿಗೆ ಕೇಂದ್ರ ಸರಕಾರ ಹಾಗೂ ದಿಲ್ಲಿ ಪೊಲೀಸರು ಪ್ರತಿಕ್ರಿಯೆ ಸಲ್ಲಿಸಬೇಕಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಹಾಗೂ ನ್ಯಾಯಮೂರ್ತಿ ಸಿ. ಹರಿಶಂಕರ್ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಹಿನ್ನೆಲೆಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಭುಗಿಲೆದ್ದ ಹಿಂಸಾಚಾರದ ಸಂದರ್ಭದ ನಡೆದ ಬೆಂಕಿ ಹಚ್ಚುವಿಕೆ, ಲೂಟಿ ಹಾಗೂ ಸಾವಿಗೆ ಸಂಬಂಧಿಸಿ ಇದುವರೆಗೆ 48 ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ದಿಲ್ಲಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ಕೇಂದ್ರ ಸರಕಾರ ಹೊಂದಿದೆ. ಆದುದರಿಂದ ಕೇಂದ್ರ ಸರಕಾರವನ್ನು ಕಕ್ಷಿದಾರರನ್ನಾಗಿ ಮಾಡಬೇಕು ಎಂದು ಅವರು ತಿಳಿಸಿದರು. ಮೂವರು ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಹಾಗೂ ಪರ್ವೇಶ್ ವರ್ಮಾ ಮಾಡಿದ ದ್ವೇಷ ಭಾಷಣದ ವಿರುದ್ಧ ಎಫ್‌ಐಆರ್ ದಾಖಲಿಸಲು ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಳ್ಳಬೇಕು ಎಂದು ದಿಲ್ಲಿ ನ್ಯಾಯಾಲಯ ಬುಧವಾರ ಪೊಲೀಸರಿಗೆ ನಿರ್ದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News