ರಾಜ್ಯದ ಅಭಿವೃದ್ಧಿಗೆ ಕೆ.ಸಿ.ರೆಡ್ಡಿ ಕೊಡುಗೆ ಅಪಾರ: ಉಪಮುಖ್ಯಮಂತ್ರಿ ಕಾರಜೋಳ

Update: 2020-02-27 12:23 GMT

ಬೆಂಗಳೂರು, ಫೆ. 27: ರಾಜ್ಯದ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಕೊಡುಗೆ ಅಪಾರ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಇಂದಿಲ್ಲಿ ಸ್ಮರಿಸಿದ್ದಾರೆ.

ಗುರುವಾರ ಮಾಜಿ ಮುಖ್ಯಮಂತ್ರಿ ಕ್ಯಾಸಂಬಳ್ಳಿ ಚೆಂಗಲ ರಾಯರೆಡ್ಡಿಯವರ ಪುಣ್ಯತಿಥಿಯ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕೆ.ಸಿ.ರೆಡ್ಡಿ ಅವರು ಮುಖ್ಯಮಂತ್ರಿ ಆಗಿ ನಾಲ್ಕೂವರೆ ವರ್ಷ ಕಾಲ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ ಎಂದು ನೆನಪು ಮಾಡಿಕೊಂಡರು.

ಕೆ.ಸಿ.ರೆಡ್ಡಿ ಕೇಂದ್ರ ಸಚಿವರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಮಧ್ಯಪ್ರದೇಶದ ರಾಜ್ಯಪಾಲರಾಗಿಯೂ ತಮ್ಮ ಹೆಜ್ಜೆ ಗುರುತು ದಾಖಲಿಸಿದ್ದಾರೆ. ಮಹಾತ್ಮಾ ಗಾಂಧಿ ಅವರ ದರ್ಶನ ಭಾಗ್ಯದಿಂದ ಪ್ರಭಾವಿತರಾಗಿದ್ದರು. ರಾಜ್ಯದಲ್ಲಿ ಅನೇಕ ಕಾರ್ಖಾನೆಗಳ ಸ್ಥಾಪನೆಗೆ ಕೆ.ಸಿ.ರೆಡ್ಡಿ ಅವರು ಕಾರಣೀಭೂತರಾಗಿದ್ದಾರೆ ಎಂದರು.

ಬೆಂಗಳೂರಿನ ಐಟಿಐ, ಎಚ್‌ಎಂಟಿ, ಬಿಎಚ್‌ಇಎಲ್, ಸಿಎಫ್‌ಟಿಆರ್‌ಐ, ಬಿಇಎಂಎಲ್ ಹಾಗೂ ಶಿವಮೊಗ್ಗದ ಜೋಗ ಜಲಪಾತದಡಿ ಮಹಾತ್ಮಾ ಗಾಂಧಿ ಹೈಡ್ರೋ ಎಲೆಕ್ಟ್ರಿಕ್ ಸ್ಟೇಷನ್ ಸ್ಥಾಪನೆಯಲ್ಲಿ ಕೆ.ಸಿ.ರೆಡ್ಡಿ ಅವರ ಪರಿಶ್ರಮವಿದೆ ಎಂದು ಕಾರಜೋಳ ಉಲ್ಲೇಖಿಸಿದರು.

ಕೇಂದ್ರ ಸಚಿವರಾಗಿ ಮಧ್ಯಪ್ರದೇಶದ ಬಿಲಾಯ್, ಒರಿಸ್ಸಾದ ರೂರ್ಕೆಲಾ ಮತ್ತು ಅಂದಿನ ಬಿಹಾರದ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ತಮಿಳುನಾಡಿನ ನೈವೇಲಿಯಲ್ಲಿ ಲಿಗ್ನೈಟ್ ಕಾರ್ಖಾನೆಯ ಸ್ಥಾಪನೆಗೆ ಕಾರಣರಾಗಿ ನಾಡುಕಟ್ಟಿದವರು. ನಮ್ಮ ಹೆಮ್ಮೆಯ ಕೆ.ಸಿ.ರೆಡ್ಡಿ ಅವರು ಯುವ ಸಮುದಾಯಕ್ಕೆ ಪ್ರೇರಣೆಯಾಗಿದ್ದರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News