ಕ್ರೂರಿಗಳ, ಮನುಷ್ಯತ್ವವೇ ಇಲ್ಲದವರ ಕೈಯಲ್ಲಿ ಅಧಿಕಾರ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Update: 2020-02-27 13:34 GMT

ಬೆಂಗಳೂರು, ಫೆ.27: ಬಿಜೆಪಿ ಅಧಿಕಾರದಲ್ಲಿರುವ ಬಿಹಾರದಲ್ಲಿಯೆ ಎನ್‌ಆರ್‌ಸಿ ಜಾರಿ ಮಾಡುವುದಿಲ್ಲ ಎಂದು ನಿರ್ಧಾರ ಕೈಗೊಂಡಿದ್ದಾರೆ. ಆದರೂ ಇದನ್ನು ದೇಶಾದ್ಯಂತ ಜಾರಿ ಮಾಡಲು ಹೊರಟಿದ್ದಾರಲ್ಲ. ಇವರ ಹುಂಬತನಕ್ಕೆ ಏನು ಹೇಳಬೇಕು? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ನಗರದ ಮಾಗಡಿ ರಸ್ತೆಯಲ್ಲಿರುವ ಕಾಸಿಯಾ ಭವನದಲ್ಲಿ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಸಂವಿಧಾನ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಮೋದಿ-ಶಾ ಎಂಬ ವಿನಾಶಕಾರಿ ಶಕ್ತಿಗಳನ್ನು ಅಧಿಕಾರಮುಕ್ತವಾಗಿಸದಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಉಳಿಗಾಲವಿಲ್ಲ. ದೇಶದ ಅಧಿಕಾರ ಕ್ರೂರಿಗಳ ಕೈಯಲ್ಲಿದ್ದು ಜನಾಭಿಪ್ರಾಯಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ದಿಲ್ಲಿಯಲ್ಲಿ ವಿಶ್ವವಿದ್ಯಾಲಯಗಳ ಒಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರ ಮೇಲೆ ಈವರೆಗೆ ಪ್ರಕರಣ ದಾಖಲಾಗಿಲ್ಲ. ಸಂಘಪರಿವಾರದವರು ಪೊಲೀಸ್ ಸಮವಸ್ತ್ರ ಧರಿಸಿ ವಿದ್ಯಾರ್ಥಿಗಳನ್ನು ಹೊಡೆದರೂ ಪ್ರಕರಣ ದಾಖಲಾಗಿಲ್ಲ. ಮನುಷ್ಯತ್ವವೇ ಇಲ್ಲದವರ ಕೈಯಲ್ಲಿ ಅಧಿಕಾರವಿದೆ ಎಂದು ಅವರು ಹೇಳಿದರು.

ದಿಲ್ಲಿಯಲ್ಲಿ ಹಿಂಸಾಚಾರ ನಡೆದು 35 ಮಂದಿ ಬಲಿಯಾಗಿದ್ದಾರೆ. ಹಿಂಸೆಗೆ ಪ್ರಚೋದನೆ ನೀಡಿದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಮೇಲೆ ಇದುವರೆಗೂ ಪ್ರಕರಣ ದಾಖಲಾಗಿಲ್ಲ. ಇದನ್ನು ಪ್ರಶ್ನಿಸಿದ ಹೈಕೋರ್ಟ್ ನ್ಯಾಯಾಧೀಶರನ್ನೆ ವರ್ಗಾವಣೆ ಮಾಡಲಾಗಿದೆ ಎಂದು ಅವರು ದೂರಿದರು.

ಬಿಜೆಪಿ ಆಡಳಿತದಲ್ಲಿ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಸುರಕ್ಷಿತವಾಗಿಲ್ಲ. ಸಂವಿಧಾನದ ಮೂಲ ಆಶಯವಾದ ಜಾತ್ಯತೀತ ಸಿದ್ಧಾಂತಕ್ಕೆ ವಿರುದ್ಧವಾಗಿ ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ವ್ಯವಸ್ಥಿತ ಸಂಚು ನಡೆಯುತ್ತಿದೆ. ಬಿಜೆಪಿಯವರು ಸಮಾಜದಲ್ಲಿ ಧರ್ಮ ಸಂಘರ್ಷ ಉಂಟು ಮಾಡಿ, ಮತ ಧ್ರುವೀಕರಣ ಮಾಡಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ಅಸ್ಸಾಂನಲ್ಲಿರುವ 3.5 ಕೋಟಿ ಜನಸಂಖ್ಯೆಗೆ ಎನ್‌ಆರ್‌ಸಿ ಜಾರಿ ಮಾಡಲು 1600 ಕೋಟಿ ರೂ.ಖರ್ಚಾಗಿದೆ. ಇನ್ನು ಇದನ್ನು ದೇಶಾದ್ಯಂತ ಜಾರಿ ಮಾಡಲು ಹೊರಟರೆ ಕನಿಷ್ಠ 1 ಲಕ್ಷ ಕೋಟಿ ರೂ.ಬೇಕಾಗುತ್ತದೆ. ದೇಶ ಆರ್ಥಿಕವಾಗಿ ದಿವಾಳಿ ಹಂತ ತಲುಪಿರುವ ಈ ಸನ್ನಿವೇಶದಲ್ಲಿ ಸಿಎಎ, ಎನ್‌ಆರ್‌ಸಿ ಜಾರಿಯ ಅಗತ್ಯವೇನಿದೆ? ಎಂದು ಅವರು ಪ್ರಶ್ನಿಸಿದರು.

ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಮತ್ತು ಸಂಘ ಪರಿವಾರದವರ ಮನುಸ್ಮತಿಯ ನಡುವಿನ ಸಂಘರ್ಷ. ಸಂವಿಧಾನ ಇಲ್ಲದೆ ಹೋಗಿದ್ದರೆ ಮೋದಿ ಪ್ರಧಾನಿಯಾಗಲು ಸಾಧ್ಯವಿತ್ತೇ? ಈಗ ಅದೆ ಸಂವಿಧಾನವನ್ನು ಇವರು ನಾಶಮಾಡಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು..

ಕಾಂಗ್ರೆಸ್ ಪಕ್ಷ ಜನಪರವಾದ ಈ ಹೋರಾಟದ ಮುಂಚೂಣಿಯಲ್ಲಿ ನಿಂತು ಜನರ ಬಳಿ ಹೋಗಬೇಕು. ಪ್ರಜಾಪ್ರಭುತ್ವ, ಸಂವಿಧಾನದ ಚೌಕಟ್ಟಿನಲ್ಲಿ ನಾವು ಶಾಂತಿಯುತವಾಗಿ ಈ ದುಷ್ಟ ಆಡಳಿತದ ವಿರುದ್ಧ ಹೋರಾಡಬೇಕಿದೆ ಎಂದು ಅವರು ಹೇಳಿದರು.

ನನಗೆ ನನ್ನ ಜನ್ಮ ದಿನಾಂಕದ ದಾಖಲೆಯೇ ಇಲ್ಲ. ಶಾಲೆಯ ಶಿಕ್ಷಕರು ಬರೆದುಕೊಂಡಿದ್ದೇ ನನ್ನ ಜನ್ಮ ದಿನಾಂಕ. ಇವರ ಪ್ರಕಾರ ನಾನು ಅನುಮಾನಾಸ್ಪದ ನಾಗರಿಕ. ಹಾಗಿದ್ದಲ್ಲಿ, ನನ್ನನ್ನೂ ಜೈಲಿಗೆ ಕಳುಹಿಸುತ್ತಾರಾ? ನನ್ನ ಮತದಾನದ ಅಧಿಕಾರ ಕಿತ್ತುಕೊಳ್ಳುತ್ತಾರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ವಿಚಾರ ಸಂಕಿರಣದಲ್ಲಿ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ರಾಜ್ಯಸಭಾ ಸದಸ್ಯರಾದ ಪ್ರೊ.ರಾಜೀವ್‌ ಗೌಡ, ಡಾ.ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್, ಚಿಂತಕ ಶಿವಸುಂದರ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಸಲೀಮ್ ಅಹ್ಮದ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಯಾವುದೇ ಸರಕಾರ ಎಷ್ಟೇ ಬಹುಮತವನ್ನು ಹೊಂದಿದ್ದರೂ, ಅದು ನ್ಯಾಯಸಮ್ಮತವಲ್ಲದ, ಸಂವಿಧಾನಕ್ಕೆ ವಿರುದ್ಧವಾದ ಕಾನೂನು, ತೀರ್ಮಾನ ಕೈಗೊಂಡಾಗ ಅದನ್ನು ಶಾಂತ ರೀತಿಯಲ್ಲಿ ವಿರೋಧಿಸುವ ಹಕ್ಕು ಜನರಿಗೆ ಇದೆ ಎಂದು ಮಹಾತ್ಮಗಾಂಧೀಜಿ ಹೇಳಿದ್ದರು. ಆದರೆ, ಈಗ ಸರಕಾರದ ಕಾನೂನು ವಿರೋಧಿಸಿದರೆ ನಗರ ನಕ್ಸಲ್, ದೇಶದ್ರೋಹಿಗಳು ಎಂಬ ಪಟ್ಟ ಕಟ್ಟುತ್ತಾರೆ. ದೇಶದ್ರೋಹದ ಪ್ರಕರಣ ಹಾಕಿ ಜೈಲಿಗೆ ಅಟ್ಟಲಾಗುತ್ತಿದೆ.

-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News