ಹಿಟ್ಲರ್ ಗ್ಯಾಸ್ ಚೇಂಬರ್ ನಿರ್ಮಾಣ ಮಾಡಿದ್ದ, ಇಲ್ಲಿ ಡಿಟೆನ್ಷನ್ ಸೆಂಟರ್ ಕಟ್ಟುತ್ತಿದ್ದಾರೆ: ಮಾರ್ಗರೇಟ್ ಆಳ್ವ

Update: 2020-02-27 14:33 GMT

ಬೆಂಗಳೂರು, ಫೆ.27: ಎನ್‌ಆರ್‌ಸಿ ಜಾರಿಯಿಂದಾಗಿ ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಸಮಸ್ಯೆಯಾಗುತ್ತದೆ. ನಾನು ಬ್ರಿಟಿಷ್ ಇಂಡಿಯಾದಲ್ಲಿ ಹುಟ್ಟಿದ್ದು, 70 ವರ್ಷದ ಮೊದಲು ನಮಗೆ ಸಂವಿಧಾನ ಬಂದಿದೆ. ಈಗ ನನ್ನ ಮನೆಗೆ ಬಂದು ನಾನು ಭಾರತೀಯಳು ಎಂದು ಸಾಬೀತುಪಡಿಸಿ ಎಂದರೆ ಏನು ಮಾಡಬೇಕು ಎಂದು ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಪ್ರಶ್ನಿಸಿದರು.

ಗುರುವಾರ ನಗರದ ಮಾಗಡಿ ರಸ್ತೆಯಲ್ಲಿರುವ ಕಾಸಿಯಾ ಭವನದಲ್ಲಿ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಸಂವಿಧಾನ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನನ್ನ ಪೂರ್ವಜರು ಮೃತಪಟ್ಟಿದ್ದಾರೆ. ಅವರು ಎಲ್ಲಿ ಹುಟ್ಟಿದ್ದು, ಅವರ ಜನನ ಪ್ರಮಾಣಪತ್ರ, ಶಾಲೆಯ ಪ್ರಮಾಣಪತ್ರವನ್ನು ಇವತ್ತು ನನ್ನ ಬಳಿ ಕೇಳಿದರೆ ನಾನು ಎಲ್ಲಿಂದ ತರಬೇಕು. ಆ ಕಾಲದಲ್ಲಿ ಆಸ್ಪತ್ರೆಯಲ್ಲಿ ಹುಟ್ಟಿದ್ರಾ? ಶಾಲೆಗೆ ಹೋಗಿದ್ರಾ? ಮತ್ತೆ ಎಲ್ಲಿಂದ ನಾನು ದಾಖಲೆಗಳನ್ನು ತರಬೇಕು ಎಂದು ಆಳ್ವ ಪ್ರಶ್ನಿಸಿದರು.

ನಾನು ಯಾರಿಗೂ ದಾಖಲೆ ಕೊಡಲು ಸಿದ್ಧಳಿಲ್ಲ. ನನ್ನ ಬಳಿ ಯಾರಾದರೂ ಕಾಗದ ತೆಗೆದುಕೊಂಡು ಬಂದು ಪ್ರಶ್ನಿಸಿದರೆ ನಾನು ಆ ಕಾಗದವನ್ನು ಹರಿದು ಹಾಕುತ್ತೇನೆ. ಯಾವುದೇ ಕಾರಣಕ್ಕೂ ನನ್ನ ಪೌರತ್ವವನ್ನು ಸಾಬೀತುಪಡಿಸುವುದಿಲ್ಲ ಎಂದ ಅವರು, ನನ್ನ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಮಾಡಿದ್ದರು ಎಂದರು. ಮೋದಿ ಹಾಗೂ ಅಮಿತ್ ಶಾಗೆ ನಮ್ಮ ಕುಟುಂಬದ ಹಿನ್ನೆಲೆ ಬೇಕಿದ್ದರೆ ಮುಂಬೈನಲ್ಲಿರುವ ಆರ್ಥರ್ ರೋಡ್‌ನಲ್ಲಿರುವ ಜೈಲು ಅಥವಾ ಯರವಾಡ ಜೈಲಿಗೆ ಹೋಗಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿ ನೋಡಿದರೆ ಅವರಿಗೆ ಆಳ್ವಗಳ ಹೆಸರು ಸಿಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರು, ಅವರ ಕುಟುಂಬದವರು ತಾವು ಈ ದೇಶದ ನಾಗರಿಕರು ಎಂದು ಸಾಬೀತುಪಡಿಸಬೇಕಾ? ಎಂದು ಅವರು ಆಕ್ರೊಶ ವ್ಯಕ್ತಪಡಿಸಿದರು.

ನಾವು ಮತದಾರರು, ನಮ್ಮ ಬಳಿ ಮತದಾನದ ಗುರುತಿನ ಚೀಟಿ ಇದೆ. ನಾವು ಮತ ಚಲಾಯಿಸಿದಕ್ಕೆ ಸಂಸದರು, ಪ್ರಧಾನಿ ಆಯ್ಕೆಯಾಗಿರುವುದು. ಇವತ್ತು ಅದೇ ಮತದಾನದ ಗುರುತಿನ ಚೀಟಿ ಪೌರತ್ವದ ದಾಖಲೆ ಅಲ್ಲ ಎನ್ನುತ್ತಿದ್ದಾರೆ. ಹಾಗಾದರೆ, ಪೌರತ್ವ ಹೊಂದಿರದೆ ಇರುವವರ ಮತ ಪಡೆದು ಆಯ್ಕೆಯಾಗಿರುವ ಈ ಸಂಸತ್ತು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾರ್ಗರೇಟ್ ಆಳ್ವ ಪ್ರಶ್ನಿಸಿದರು.

ಬಂಗಾಳದಲ್ಲಿ ಹುಟ್ಟಿದ ಮಹಿಳೆ, ಬಿಹಾರದಲ್ಲಿ ಮದುವೆಯಾದರೆ, ಆಕೆಯ ಪತಿ ಮಹಾರಾಷ್ಟ್ರದಲ್ಲಿ ಕೆಲಸಕ್ಕೆ ಸೇರಿ ಕುಟುಂಬ ಅಲ್ಲಿಗೆ ಸ್ಥಳಾಂತರವಾಗಿದ್ದರೆ, ಅಂತಹ ಕುಟುಂಬಗಳ ಬಳಿ ಯಾವ ರೀತಿ ದಾಖಲೆ ಸಂಗ್ರಹ ಮಾಡುತ್ತೀರಾ? ದೇಶದ ಕೋಟ್ಯಂತರ ಜನರನ್ನು ನೇಪಾಳ, ಟಿಬೆಟ್, ಶ್ರೀಲಂಕಾ ಎಲ್ಲಿಗೆ ಕಳುಹಿಸುತ್ತೀರಾ ಎಂದು ಅವರು ಕೇಳಿದರು.

ದೇಶದಲ್ಲಿ 12 ಡಿಟೆನ್ಷನ್ ಸೆಂಟರ್ ಕಟ್ಟುತ್ತಿದ್ದಾರೆ. ಹಿಟ್ಲರ್ ಯಹೂದಿಗಳನ್ನು ಕೊಲ್ಲಲು ಗ್ಯಾಸ್ ಚೆಂಬರ್ ನಿರ್ಮಾಣ ಮಾಡಿದ್ದ. ಡಿಟೆನ್ಷನ್ ಸೆಂಟರ್‌ಗೆ ಕಳುಹಿಸುವವರಿಗೆ ಹೇಗೆ ಊಟ ಹಾಕುತ್ತೀರಾ? ಎಲ್ಲಿ ನೌಕರಿ, ಶಾಲೆ, ಆರೋಗ್ಯ ಸೇವೆ ಒದಗಿಸುತ್ತೀರಾ? ಬೇರೆ ದೇಶದವರು ನಮ್ಮ ಜನರನ್ನು ಸ್ವೀಕರಿಸುವುದಿಲ್ಲ. ನಮ್ಮ ಜನರನ್ನು ಅಂಡಮಾನ್‌ಗೆ ಕಳುಹಿಸುತ್ತೀರಾ ಅಥವಾ ಸಮುದ್ರಕ್ಕೆ ಹಾಕುತ್ತೀರಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಾವು ಪ್ರಜಾಪ್ರಭುತ್ವ ಜಾತ್ಯತೀತ ರಾಷ್ಟ್ರದಲ್ಲಿದ್ದೇವೆ. ಸಂವಿಧಾನ ಎಲ್ಲರಿಗೂ ಸಮಾನ ಅಧಿಕಾರ ನೀಡಿದೆ. ಕೇವಲ ಶೇ.31ರಷ್ಟು ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿರುವ ಬಿಜೆಪಿ, ಈ ದೇಶವನ್ನು ಏನು ಮಾಡಲು ಹೊರಟಿದೆ. ಮತದಾನದ ಗುರುತಿನ ಚೀಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಎಲ್ಲವೂ ಇದ್ದರೂ ನಾವು ದೇಶದ ನಾಗರಿಕರಲ್ಲ ಎಂದರೇ ಹೇಗೆ ಎಂದು ಮಾರ್ಗರೇಟ್ ಆಳ್ವ ತಿಳಿಸಿದರು.

2 ಲಕ್ಷ ರೂ.ನೀಡಿದರೆ ನಿಮ್ಮ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿ ನೀಡುವುದಾಗಿ ಏಜೆಂಟ್‌ಗಳು ಹೇಳುತ್ತಿದ್ದಾರೆ ಎಂದು ಬಡ ಮುಸ್ಲಿಮ್ ಮಹಿಳೆಯರು ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ. ಭ್ರಷ್ಟಾಚಾರ ಇಲ್ಲಿಂದ ಆರಂಭವಾಗುತ್ತಿದೆ. ಈ ಮೊತ್ತದಲ್ಲಿ ಬಿಜೆಪಿಗೆ ಎಷ್ಟು ಹೋಗುತ್ತೋ ನನಗೆ ಗೊತ್ತಿಲ್ಲ ಎಂದು ಅವರು ಹೇಳಿದರು.

ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಯಾವಾಗ ಬಂದು ನಮ್ಮನ್ನು ಹಿಡಿದುಕೊಂಡು ಹೋಗುತ್ತಾರೋ ಎಂಬ ಆತಂಕ ಬಡವರಲ್ಲಿದೆ. ಈ ಹುಚ್ಚರ ಆಟವನ್ನು ನಾವು ಬಯಲು ಮಾಡಬೇಕಿದೆ ಎಂದು ಮಾರ್ಗರೇಟ್ ಆಳ್ವ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News