ಇವಿ ಮೋಟಾರು ವಾಹನ ತಯಾರಿಕೆಗೆ ಆದ್ಯತೆ: ಸಚಿವ ಜಗದೀಶ್ ಶೆಟ್ಟರ್

Update: 2020-02-27 14:36 GMT

ಬೆಂಗಳೂರು, ಫೆ. 27: ರಾಜ್ಯದಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಕ್ಲಸ್ಟರ್ ಅಭಿವೃದ್ಧಿಪಡಿಸಿ, ಸ್ಥಳೀಯ ಎಲೆಕ್ಟ್ರಿಕ್ ವೆಹಿಕಲ್ ಮೋಟಾರು ತಯಾರಿಕೆಗೆ ಆದ್ಯತೆ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಗುರುವಾರ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಉದ್ಯೋಗ್ ಭಾರತಿ ಮತ್ತು ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮದ ಸಹಯೋಗದಲ್ಲಿ ಆಯೋಜಿಸಿದ್ದ ಇ-ಮೊಬಿಲಿಟಿ ಮತ್ತು ಚಾರ್ಜಿಂಗ್ ಇನ್ಫ್ರಾಸ್ಟ್ರಕ್ಚರ್ ಕುರಿತು ಕಾರ್ಯಾಗಾರ ಮತ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳು ದುಬಾರಿ ಎಂಬ ಮಾತಿದೆ. ಏಕೆಂದರೆ ಎಲೆಕ್ಟ್ರಿಕ್ ವಾಹನ ಖರೀದಿಯ ವೆಚ್ಚದಲ್ಲಿ ಶೇ.30ರಷ್ಟು ಎಲೆಕ್ಟ್ರಿಕ್ ಬ್ಯಾಟರಿಗೆ ತಗಲುತ್ತದೆ. ಈ ಮೊತ್ತ ಕಡಿತವಾದರೆ ಇವಿ ವಾಹನಗಳು ಅಗ್ಗದ ದರದಲ್ಲಿ ಲಭ್ಯವಾಗಲಿದೆ. ಹೀಗಾಗಿ ಎಲೆಕ್ಟ್ರಿಕ್ ಮೋಟಾರು ತಯಾರಿಕೆಯನ್ನು ಪ್ರಾರಂಭಿಸಲು ಆದ್ಯತೆ ನೀಡಲಾಗಿದೆ. ಬ್ಯಾಟರಿ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. ಜೊತೆಗೆ ಇವಿ ಕ್ಲಸ್ಟರ್ ತೆರೆಯಲು ಸರಕಾರ ಪ್ರತ್ಯೇಕ ಅನುದಾನ ಮೀಸಲಿಟ್ಟಿದೆ ಎಂದರು.

ಭಾರತವು ವಿಶ್ವದಲ್ಲಿ ವಾಹನ ಉದ್ಯಮ, ಇ-ಮೊಬಿಲಿಟಿ ರೂಪಿಸುವಲ್ಲಿ ಪ್ರಮುಖ ಸ್ಥಾನ ಅಲಂಕರಿಸಿದೆ. ಅದರಲ್ಲೂ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಅಳವಡಿಕೆಗೆ ಬೇಕಾದ ಸೂಕ್ತ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಓಲಾ ಮೊಬಿಲಿಟಿ ಸಂಸ್ಥೆ ಸಹಯೋಗದೊಂದಿಗೆ ವಿಶ್ವ ಆರ್ಥಿಕ ವೇದಿಕೆ ಪ್ರಕಟಿಸಿದ ಇತ್ತೀಚಿನ ವರದಿಯ ಪ್ರಕಾರ, ಭಾರತವು ವಿಶ್ವದ ಅತಿದೊಡ್ಡ ವಿದ್ಯುತ್ ವಾಹನ ಮಾರುಕಟ್ಟೆಯಾಗುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಅಭಿಪ್ರಾಯ ಹೊರಹಾಕಿದೆ. ಎಲೆಕ್ಟ್ರಿಕ್ ಮೊಬಿಲಿಟಿ ಭವಿಷ್ಯ ರೂಪಿಸುವಲ್ಲಿ ಕರ್ನಾಟಕ ಮಹತ್ವದ ಪಾತ್ರ ವಹಿಸಲಿದೆ. ಪ್ರಸ್ತುತ ಬೆಂಗಳೂರು ನಗರ 9 ಸಾವಿರ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದೆ. ಮಹೀಂದ್ರಾ ಎಲೆಕ್ಟ್ರಿಕ್, ಅಥರ್ ಎನರ್ಜಿ, ಯೂಲೂ, ವೊಗೊ, ಎನ್‌ಡಿಎಸ್ ಇಕೋ ಮೋಟಾರ್ಸ್ ಮತ್ತು ಇತರ ದೇಶದ ಅತಿದೊಡ್ಡ ಇವಿ ಕಂಪೆನಿಯು ಇಲ್ಲಿ ಮಾರುಕಟ್ಟೆ ಸೃಷ್ಟಿಸುತ್ತಿವೆ ಎಂದರು.

ಜೊತೆಗೆ 12 ಸ್ಥಳಗಳಲ್ಲಿ ಇವಿ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳು ಕಾರ್ಯಾರಂಭ ಮಾಡಿವೆ. ಮುಂದಿನ ದಿನಗಳಲ್ಲಿ ಇತರೆ 80 ಸ್ಥಳಗಳಲ್ಲಿ 100 ಚಾರ್ಜಿಂಗ್ ಪಾಯಿಂಟ್‌ಗಳನ್ನು ಬೆಸ್ಕಾಂ ಸ್ಥಾಪಿಸಲಿದೆ. ಚಾರ್ಜಿಂಗ್ ಕೇಂದ್ರಗಳನ್ನು ಅಪ್ಲಿಕೇಶನ್ ಮೂಲಕ ಸುಲಭವಾಗಿ ಪ್ರವೇಶಿಸಬಹುದು. ಅಷ್ಟೆ ಅಲ್ಲದೆ ಚಾರ್ಜಿಂಗ್ ಮಾಡಿಸಲು ಮುಂಗಡವೇ ಕಾಯ್ದಿರಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದು ಹೇಳಿದರು.

ಶಾಪಿಂಗ್ ಮಾಲ್, ಪಾರ್ಕಿಂಗ್ ಲಾಟ್, ಅಪಾರ್ಟ್‌ಮೆಂಟ್ ಇತರೆ ಖಾಸಗಿ ಸ್ಥಳಗಳಲ್ಲೂ ಕಡ್ಡಾಯವಾಗಿ ಇವಿ ಚಾರ್ಜಿಂಗ್ ಕೇಂದ್ರ ತೆರೆಯುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಸುತ್ತೋಲೆ ಹೊರಡಿಸಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News