ಬಿಬಿಎಂಪಿ: ಕಾಮಗಾರಿಯಲ್ಲಿ ಅಧಿಕಾರಿಗಳು ಶಾಮೀಲು ಆರೋಪ; ಎಸಿಬಿ ತನಿಖೆಗೆ ಸರಕಾರ ಆದೇಶ

Update: 2020-02-27 14:46 GMT

ಬೆಂಗಳೂರು, ಫೆ.27: ಬಿಬಿಎಂಪಿ ವ್ಯಾಪ್ತಿಯ ಹೂಳೆತ್ತುವ ಕಾಮಗಾರಿಯಲ್ಲಿ ಅಧಿಕಾರಿಗಳು ಶಾಮೀಲಾಗಿ ಕಾಮಗಾರಿಗಳನ್ನು ನಡೆಸದೆ ಕಾನೂನಿಗೆ ವಿರುದ್ಧವಾಗಿ ಜಾಬ್ಕೋಡ್ ನೀಡಿ ಸುಮಾರು 7.5 ಕೋಟಿಯಷ್ಟು ಹಣವನ್ನು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಎಸ್.ಅಮರೇಶ್ ಅವರು ದಾಖಲೆ ಸಮೇತ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎಸಿಬಿ ತನಿಖೆಗೆ ಸೂಚಿಸಿದೆ.

ರಾಜಕಾಲುವೆ ಹೂಳೆತ್ತುವ ಕಾಮಗಾರಿಯ ಬಿಲ್ ಪಾವತಿ ಮಾಡಿರುವ ಬಿಬಿಎಂಪಿಯ ನೀರುಗಾಲುವೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಹಾಗೂ ಕಾಮಗಾರಿ ಗುಣಮಟ್ಟದ ಮೇಲುಸ್ತುವಾರಿ ಜವಾಬ್ದಾರಿ ಹೊಂದಿರುವ ಬಿಬಿಎಂಪಿ ಅಭಿಯಂತರರ ಮೇಲೂ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸರಕಾರ ಆದೇಶಿಸಿದೆ.

ಕಾಮಗಾರಿ ನಡೆಸದೆಯೇ ಹಣ ಪಡೆಯಲಾಗಿದೆ. ಬೃಹತ್ ಮಳೆ ನೀರುಗಾಲುವೆ ಕಾಮಗಾರಿಯಾಗಿರುವುದರಿಂದ ಹೂಳನ್ನು ತೆಗೆಯಲು ದೊಡ್ಡ ಮಟ್ಟದ ಯಂತ್ರೋಪಕರಣಗಳ ಅವಶ್ಯಕತೆ ಇದ್ದು, ಇಷ್ಟೊಂದು ಪ್ರಮಾಣದ ಹೂಳನ್ನು ಎಲ್ಲಿ ಡಂಪ್ ಮಾಡಿರುತ್ತಾರೆ ಎಂಬ ಮಾಹಿತಿಯಿಲ್ಲ. ಹಾಗಾಗಿ ನಡೆಯದ ಕಾಮಗಾರಿಗೆ ಹಣ ಪಡೆದು ಪಾಲಿಕೆಗೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಎಸಿಬಿಗೆ ಅಮರೇಶ್ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News