529 ಶಾಲೆಗಳು ಬಿಬಿಎಂಪಿಗೆ ಹಸ್ತಾಂತರಿಸಲು ಮುಂದಾದ ಜಿಲ್ಲಾ ಪಂಚಾಯತ್

Update: 2020-02-27 14:49 GMT

ಬೆಂಗಳೂರು, ಫೆ. 27: ನಗರ ಜಿಲ್ಲಾ ಪಂಚಾಯತ್ ಅಡಿಯಲ್ಲಿನ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 500 ಕ್ಕೂ ಅಧಿಕ ಶಾಲೆಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಲು ನಗರ ಜಿಲ್ಲಾ ಪಂಚಾಯತ್ ಮುಂದಾಗಿದೆ.

ನಗರದಲ್ಲಿ 529 ಸರಕಾರಿ ಶಾಲೆಗಳು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿವೆ. ಅವುಗಳನ್ನು ಬಿಬಿಎಂಪಿಗೆ ಹಸ್ತಾಂತರಿಸುವ ಸಂಬಂಧ ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಮತ್ತು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ನಿರ್ಧಾರ ಕೈಗೊಂಡಿವೆ. ಬಿಬಿಎಂಪಿಗೆ ಈ ಸರಕಾರಿ ಶಾಲೆಗಳನ್ನು ಹಸ್ತಾಂತರಿಸುವ ಸಂಬಂಧ ಈಗಾಗಲೇ ಉನ್ನತ ಮಟ್ಟದ ಸಭೆ ನಡೆಸಿ, ಈ ನಿರ್ಧಾರ ಕೈಗೊಳ್ಳಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸರಕಾರಿ ಶಾಲೆಗಳನ್ನು ನಡೆಸಲು ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ಗೆ ಹೊರೆಯಾಗಿದ್ದು, ಈ ಶಾಲೆಗಳನ್ನು ಬಿಬಿಎಂಪಿ ವ್ಯಾಪ್ತಿಗೆ ತರುವ ಮೂಲಕ ಆ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಪಾಲಿಕೆಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ ಹಾಗೂ ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಅಧ್ಯಕ್ಷ ನರಸಿಂಹಮೂರ್ತಿ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಬಿಬಿಎಂಪಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸರಕಾರದಿಂದ ಸರಿಯಾದ ಅನುದಾನ ಸಿಗುತ್ತಿರಲಿಲ್ಲ. ಇದು ಜಿಲ್ಲಾ ಪಂಚಾಯತ್‌ಗೆ ಹೊರೆಯಾಗುತ್ತಿದೆ. ಸರಕಾರಿ ಶಾಲೆಗಳಲ್ಲಿನ ವಿದ್ಯುತ್ ಹಾಗೂ ನೀರಿನ ಬಿಲ್ ಸಹ ಲಕ್ಷಾಂತರ ರೂಪಾಯಿ ಬರುತ್ತಿದೆ ಎಂದು ಹೇಳಿದರು.

ಅತಿಯಾದ ಹೊರೆಯನ್ನು ನಗರ ಜಿಲ್ಲಾ ಪಂಚಾಯತ್ ಭರಿಸಲು ಕಷ್ಟಸಾಧ್ಯವಾಗುತ್ತಿದೆ. ಒಂದು ಶಾಲೆಗೆ ಕನಿಷ್ಠ 20 ಸಾವಿರ ರೂ. ನೀರು ಮತ್ತು ವಿದ್ಯುತ್ ಬಿಲ್ ಬರುತ್ತವೆ. ಆದರೆ, ಅನುದಾನ ಸರಿಯಾಗಿ ಸಿಗದೇ ಇರುವುದರಿಂದ ಇದನ್ನು ನಿರ್ವಹಣೆ ಮಾಡುವುದೇ ಸವಾಲಿನ ಕೆಲಸವಾಗಿದೆ. ಇನ್ನು, ಕಟ್ಟಡ ಶಿಥಿಲಗೊಂಡಾಗ ದುರಸ್ಥಿಗೊಳಿಸಲು ಆಗದಂತ ಪರಿಸ್ಥಿತಿಯಿದೆ ಎಂದು ಅವರು ತಿಳಿಸಿದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ 75 ಲಕ್ಷ ರೂ. ಅನುದಾನ ಬಂದಿದೆ. 1300 ಶಾಲೆಗಳಿವೆ. ಅನುದಾನ ಶಿಕ್ಷಕರು ಮತ್ತು ಸಿಬ್ಬಂದಿಗಳ ವೇತನಕ್ಕೆ ಖರ್ಚಾಗುತ್ತಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೆ ತರಲಾಗಿದೆ. ಸರಕಾರಿ ಶಾಲೆಗಳನ್ನು ಬಿಬಿಎಂಪಿಗೆ ಹಸ್ತಾಂತರಿಸುವ ಮಾತುಕತೆ ಕೂಡ ನಡೆಸಲಾಯಿತು ಎಂದು ವಿವರಿಸಿದರು.

480 ಮೊಕದ್ದಮೆಗಳು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 600 ಶಾಲಾ ಕಟ್ಟಡಗಳಿಗೆ ದಾಖಲೆಗಳೆ ಇಲ್ಲ. ನೂರಾರು ವರ್ಷಗಳ ಹಿಂದೆ ಪೂರ್ವಿಕರು ನಿವೇಶನಗಳನ್ನು ಶಾಲೆಗಳಿಗೆ ದಾನ ಮಾಡಿದ್ದಾರೆ. ಈಗ ಅದರ ಹಕ್ಕು ಪ್ರಶ್ನಿಸಿ, ಕೆಲವರು ಮುಂದೆ ಬಂದಿದ್ದಾರೆ. 480 ಮೊಕದ್ದಮೆಗಳು ದಾಖಲಾಗಿವೆ ಎಂದು ನರಸಿಂಹಮೂರ್ತಿ ನುಡಿದರು.

ಕೌನ್ಸಿಲ್‌ನಲ್ಲಿ ಪ್ರಸ್ತಾಪ

ಜಿಲ್ಲಾ ಪಂಚಾಯತ್‌ನ 529 ಶಾಲೆಗಳನ್ನು ಪಾಲಿಕೆ ವ್ಯಾಪ್ತಿಗೆ ಹಸ್ತಾಂತರ ಮಾಡುವ ಸಂಬಂಧ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಚರ್ಚೆ ಮಾಡಿ, ನಿರ್ಧಾರ ತೆಗೆದುಕೊಳ್ಳಲಾಗುವುದು. ಅನಂತರ ಈ ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯ ಕಲ್ಪಿಸಿ, ಉತ್ತಮ ಫಲಿತಾಂಶದ ಕಡೆಗೆ ಗಮನ ಹರಿಸಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ಶಾಲೆಗಳಿಗೂ ಕೆಂಪೇಗೌಡ ಹೆಸರು ನಾಮಕರಣ ಮಾಡಲು ನಿರ್ಧರಿಸಲಾಗಿದೆ.

-ಮಂಜುಳಾ ನಾರಾಯಣಸ್ವಾಮಿ, ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News