ಯಡಿಯೂರಪ್ಪರ ಹೋರಾಟದ ಬದುಕಿನ ಬಗ್ಗೆ ವಿವರಿಸಿದ ಸಿದ್ದರಾಮಯ್ಯ

Update: 2020-02-27 16:59 GMT

ಬೆಂಗಳೂರು, ಫೆ.27: ಮುಂದಿನ ಮೂರುವರೆ ವರ್ಷಗಳಲ್ಲಿ ಎಲ್ಲರ ಸಹಕಾರದಿಂದ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವುದು ನನ್ನ ಗುರಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದ್ದಾರೆ.

ಗುರುವಾರ ನಗರದ ಅರಮನೆ ಮೈದಾನದಲ್ಲಿ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಂತಸ ಹಂಚಿಕೊಂಡು ಮಾತನಾಡಿದ ಅವರು, ನಮ್ಮ ಸರಕಾರ ಅಧಿಕಾರವಿದ್ದಷ್ಟು ದಿನಗಳಲ್ಲಿ ರೈತರಿಗೆ ವೈಜ್ಞಾನಿಕ ಬೆಂಬಲ ಬೆಲೆ, ನೀರಾವರಿಗೆ ಆದ್ಯತೆ ಸೇರಿದಂತೆ ಕರ್ನಾಟಕವನ್ನು ಮಾದರಿ ರಾಜ್ಯ ಮಾಡುವುದು ನನ್ನ ಕನಸಾಗಿದೆ ಎಂದು ತಿಳಿಸಿದರು.

ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಒಟ್ಟಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದ ಅವರು, ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆಯುತ್ತಿದೆ. ಆದರೂ, ಇನ್ನೂ ರೈತರ ಬದುಕು ಹಸನಾಗಿಲ್ಲ. ಹೀಗಾಗಿ, ಅವರ ಅಭಿವೃದ್ಧಿಗಾಗಿ, ರಾಜ್ಯದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಯಡಿಯೂರಪ್ಪ ನುಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ, ಅಭಿನಂದನಾ ನುಡಿಗಳನ್ನಾಡಿದ್ದು ಖುಷಿ ತಂದಿದೆ. ವಿಧಾನಸೌಧದ ಒಳಗೆ ಹಾಗೂ ಹೊರಗೆ ಟೀಕೆ-ಟಿಪ್ಪಣಿ ಸ್ವಾಭಾವಿಕವಾದುದು. ಆದರೆ, ಅದನ್ನು ಮೀರಿದ ಸ್ನೇಹ ದೊಡ್ಡದು ಎಂದ ಅವರು, ನಾವಿಂದು ಇಬ್ಬರೂ ಒಟ್ಟಿಗೆ ಸೇರಿರುವುದು ಅಪರೂಪದ ಸಂಗತಿ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಏಕಾಏಕಿ ಮುಖ್ಯಮಂತ್ರಿಯಾದವರಲ್ಲ, ಸಾಕಷ್ಟು ಹೋರಾಟದ ಬದುಕು ಸವೆಸಿದ್ದಾರೆ. ಶಿಕಾರಿಪುರದಲ್ಲಿ ನಗರಸಭೆ ಸದಸ್ಯರಾಗಿ, ಅಧ್ಯಕ್ಷರಾಗಿ, ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅನಂತರ ಉಪಮುಖ್ಯಮಂತ್ರಿಯಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿದ್ದಾರೆ. ಅವರ ಈ ಹಾದಿಯು ಅಷ್ಟು ಸುಲಭವಾಗಿರಲಿಲ್ಲ ಎಂದು ತಿಳಿಸಿದರು.

ರಾಜಕೀಯ ಕ್ಷೇತ್ರ ಯಾರನ್ನೂ ಕೈ ಬೀಸಿ ಕರೆಯುವುದಿಲ್ಲ. ನಾವೇ ಸೇವೆ ಮಾಡಬೇಕು ಎಂದುಕೊಂಡು ರಾಜಕೀಯಕ್ಕೆ ಬರುತ್ತೇವೆ. ಅದೇ ಮಾದರಿಯಲ್ಲಿ ಬಂದವರು ನಾವೂ ಸಹ. ನಾನು ಮತ್ತು ಯಡಿಯೂರಪ್ಪ ಒಟ್ಟಿಗೆ ವಿಧಾನಸೌಧವನ್ನು ಪ್ರವೇಶಿಸಿದೆವು. ಆದರೆ, ಅವರು ನನಗಿಂತ ಐದು ವರ್ಷ ಮೊದಲೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅಲ್ಲದೆ, ಅವರು 4 ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರೆ, ನಾನು ಒಂದೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ, ಇಡೀ ದೇಶದ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಯಡಿಯೂರಪ್ಪ ಹುಟ್ಟು ಹೋರಾಟಗಾರ. ಹಣಕಾಸು ಸಚಿವರಾಗಿ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ತಂದಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಶೂನ್ಯ ಬಂಡವಾಳ ಕೃಷಿ ಬಗ್ಗೆ ಮೊದಲು ಮಾತನಾಡಿದ್ದು ಯಡಿಯೂರಪ್ಪ ಎಂದು ಅವರು ಹೇಳಿದರು. ಕೇಂದ್ರ ಸರಕಾರವು ತನ್ನ ಬಜೆಟ್‌ನಲ್ಲಿ ಶೂನ್ಯ ಬಂಡವಾಳ ಕೃಷಿ ಯೋಜನೆಯನ್ನು ಸೇರ್ಪಡೆ ಮಾಡಿಕೊಂಡಿದೆ. ಯಡಿಯೂರಪ್ಪ ಹುದ್ದೆಯಿಂದ ಬೆಳೆದವರಲ್ಲ, ತಮ್ಮ ಕೆಲಸದಿಂದ ಹಂತ ಹಂತವಾಗಿ ಇವತ್ತು ಇಷ್ಟು ದೊಡ್ಡಮಟ್ಟದಲ್ಲಿ ಬೆಳೆದಿದ್ದಾರೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ, ಕೇಂದ್ರ ಸಚಿವರಾದ ಸದಾನಂದಗೌಡ, ಪ್ರಹ್ಲಾದ್ ಜೋಶಿ, ಸುರೇಶ್‌ ಅಂಗಡಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕವಿ ಸಿದ್ದಲಿಂಗಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಸಂಸದ ವಿಜಯೇಂದ್ರ ಸೇರಿದಂತೆ ಸಚಿವ ಸಂಪುಟದ ಸಹೋದರರು, ಶಾಸಕರು ಉಪಸ್ಥಿತರಿದ್ದರು.

ಅನಂತ್ ಕುಮಾರ್‌ರನ್ನು ನೆನೆದ ಯಡಿಯೂರಪ್ಪ

ಇತ್ತೀಚಿಗೆ ನಿಧನರಾದ ಅನಂತ್‌ಕುಮಾರ್ ಮತ್ತು ನಾನು ಪಕ್ಷವನ್ನು ಬಲಪಡಿಸಲು ರಾಜ್ಯದ ಎಲ್ಲ ಕಡೆಗಳಲ್ಲಿ ಸಾಕಷ್ಟು ಪ್ರವಾಸ ಮಾಡಿದ್ದೇವೆ. ಅದರ ಪರಿಶ್ರಮವೇ ಇಂದು ನಾನಿಲ್ಲಿದ್ದೇನೆ. ನಾನಿಂದು ಅವರನ್ನು ನೆನೆಯದೇ ಹೋದರೆ ತಪ್ಪಾಗುತ್ತದೆ.

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಅಭಿವೃದ್ಧಿಯ ಗುರಿ ಈಡೇರಲಿ: ಎಚ್‌ಡಿಕೆ

ಹೋರಾಟದ ಮೂಲಕವೆ ರಾಜಕೀಯ ನೆಲೆ ಕಂಡುಕೊಂಡು ಉನ್ನತ ಸ್ಥಾನಕ್ಕೇರಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ವಯಸ್ಸು 77 ಆದರೂ, ಈಗಲೂ 18ರ ಯುವಕನಂತೆ ಚೈತನ್ಯದ ಚಿಲುಮೆಯಾಗಿ ಕರ್ನಾಟಕವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಮ್ಮ ಗುರಿ ಈಡೇರಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಭ ಹಾರೈಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News