ರಾಜ್ಯಾದ್ಯಂತ ರೈಲು ಸೇವೆ ಕಲ್ಪಿಸಲು ಹೆಚ್ಚಿನ ಅನುದಾನ: ಸಿಎಂ ಯಡಿಯೂರಪ್ಪ

Update: 2020-02-27 15:55 GMT

ಬೆಂಗಳೂರು, ಫೆ.27: ಮುಂದಿನ ಬಜೆಟ್‌ನಲ್ಲಿ ರಾಜ್ಯಾದ್ಯಂತ ರೈಲು ಸೇವೆಗಳನ್ನು ಕಲ್ಪಿಸಲು ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಗುರುವಾರ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಶಿವಮೊಗ್ಗದಿಂದ ಚೆನ್ನೈ ನಡುವೆ ವಾರಕ್ಕೆರಡು ಬಾರಿ ಸಂಚರಿಸಲಿರುವ ರೈಲಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದ ಎಲ್ಲ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಸರಕಾರ ತನ್ನ ಪಾಲನ್ನು ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಅನುದಾನ ನೀಡಲಾಗುವುದು. ಆ ಮೂಲಕ ಜನರಿಗೆ ಮುಕ್ತವಾಗಿ ಎಲ್ಲೆಡೆ ರೈಲ್ವೆ ಸೇವೆ ಲಭಿಸುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕೇಂದ್ರದ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಮಾತನಾಡಿ, ರಾಜ್ಯದಲ್ಲಿ ರೈಲ್ವೆ ಕ್ರಾಂತಿಯೇ ನಡೆದಿದೆ. ಕೇಂದ್ರ ಸರಕಾರ ಬೆಂಗಳೂರಿಗೆ ಸಬರ್ಬನ್ ರೈಲು ಯೋಜನೆಯನ್ನು ಘೋಷಣೆ ಮಾಡಿದೆ. ಸದ್ಯದಲ್ಲೇ ಸಬರ್ಬನ್ ರೈಲು ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ರೈಲ್ವೆಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಅಗತ್ಯವಾದ ಎಲ್ಲ ರೀತಿಯ ಸವಲತ್ತುಗಳನ್ನು ನೀಡಲು ಕೇಂದ್ರ ಸರಕಾರ ಬದ್ಧವಾಗಿದೆ. ರಾಜ್ಯದಲ್ಲಿ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ಭೂಸ್ವಾಧೀನ, ರಾಜ್ಯದ ಪಾಲಿನ ಅನುದಾನ ಒದಗಿಸಿ ರಾಜ್ಯ ಸರಕಾರ ಸಹಕರಿಸಿದರೆ, ಶೀಘ್ರದಲ್ಲಿಯೇ ಎಲ್ಲವನ್ನೂ ಪೂರ್ತಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಶಿವಮೊಗ್ಗವನ್ನು ರೈಲ್ವೆ ಜಂಕ್ಷನ್ ಆಗಿ ರೂಪಿಸಲು ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಸಂಸದ ಬಿ.ವೈ. ರಾಘವೇಂದ್ರ ಕೇಂದ್ರ ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು. ರೈಲ್ವೆ ಜಂಕ್ಷನ್‌ಗೆ ಅಗತ್ಯವಾದ ಭೂಸ್ವಾಧೀನವೂ ಮುಗಿದಿದೆ. ಕೋಚಿಂಗ್ ಸೆಂಟರ್ ಸಹ ಕಾರ್ಯಾರಂಭ ಮಾಡಲಿದೆ. ಇದರ ಜತೆಗೆ ಮಂಗಳೂರು, ರಾಣೆಬೆನ್ನೂರಿಗೂ ಶಿವಮೊಗ್ಗದಿಂದ ರೈಲು ಸಂಚಾರ ಆರಂಭವಾಗಿದೆ. ಹಾಗಾಗಿ ಶಿವಮೊಗ್ಗ ಜಂಕ್ಷನ್‌ನ್ನು ಶೀಘ್ರ ಪೂರ್ಣಗೊಳಿಸುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಗರದ ರೈಲ್ವೆ ನಿಲ್ದಾಣದ ಉನ್ನತೀಕರಣಗೊಳಿಸಿದ ಪ್ರಯಾಣಿಕರ ಲಾಂಜ್ ಹೊಸ ಡಿಸ್‌ಪ್ಲೇ ನೆಟ್‌ವರ್ಕ್ ಹೆಲ್ತ್ ಕಿಯೋಸ್ಕ್‌ಗಳಿಗೂ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ವಿಭಾಗೀಯ ವ್ಯವಸ್ಥಾಪಕ ಅಜಯ್‌ ಕುಮಾರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News