ಸುತ್ತೋಲೆ ಪ್ರಕಾರ ಜನಗಣತಿಯ ಕಾರ್ಯಕೈಗೊಳ್ಳಬೇಕು: ಬೆಂ.ನಗರ ಡಿಸಿ ಕೆ.ಶಿವಮೂರ್ತಿ

Update: 2020-02-27 17:33 GMT

ಬೆಂಗಳೂರು, ಫೆ. 27: ಯಾವುದೇ ಅಭಿವೃದ್ಧಿ ಕಾರ್ಯಕ್ರಮ ರೂಪಿಸಬೇಕಾದರೆ ಜನಗಣತಿ ಆಧಾರ ಮುಖ್ಯ. ಆದುದರಿಂದ ಜನಗಣತಿ ಕುರಿತು ಅಧಿಕಾರಿಗಳಿಗೆ ನೀಡುವ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಉತ್ತಮ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಶಿವಮೂರ್ತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮನೆ ಪಟ್ಟಿ ಮತ್ತು ಮನೆ ಗಣತಿ ಅನುಸೂಚಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಪರಿಷ್ಕರಣೆಯ ಜಿಲ್ಲೆ, ತಾಲೂಕು, ನಗರ ಹಾಗೂ ಪಟ್ಟಣ ಜನಗಣತಿಯ ಅಧಿಕಾರಿಗಳ ಎರಡು ದಿನದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನಗಣತಿ ಇಲಾಖೆ ಸುತ್ತೋಲೆ ಪ್ರಕಾರ ಜನಗಣತಿಯ ಕಾರ್ಯಕೈಗೊಳ್ಳಬೇಕು. ಅಲ್ಲದೆ, ನಿಯೋಜಿಸಲ್ಪಟ್ಟ ಅಧಿಕಾರಿಗಳು ಮಾತ್ರ ಕಾರ್ಯನಿರ್ವಹಿಸಬೇಕು. ಒಂದು ವೇಳೆ ಬೇರೆ ಅಧಿಕಾರಿಗಳು ಕಾರ್ಯನಿರ್ವಹಿಸಿದಾಗ ಮಾಹಿತಿ ದುರುಪಯೋಗ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಅಧಿಕಾರಿಗಳು ಜಾಗರೂಕತೆ ವಹಿಸಬೇಕು ಎಂದು ತಿಳಿಸಿದರು.

ಜನಗಣತಿಯ ಕಾರ್ಯಾಚರಣೆಯ ನಿರ್ದೇಶನಾಲಯದ ಉಪನಿರ್ದೇಶಕರು ಮತ್ತು ತರಬೇತುದಾರ ಕೇಶ್ಯಾನಾಯ್ಕ ಮಾತನಾಡಿ, 2021ರ ಜನಗಣತಿಯು ಡಿಜಿಟಲ್ ಜನಗಣತಿಯೆಂದು ಪ್ರಸಿದ್ದಿಯಾಗಿದೆ. ಹಾಗಾಗಿ ರಾಷ್ಟ್ರೀಯ ಜನಸಂಖ್ಯಾ ಪರಿಷ್ಕರಣೆಯನ್ನು ಎನ್‌ಪಿಆರ್ ಮೊಬೈಲ್ ಅಪ್ಲಿಕೇಶನ್ ಮುಖಾಂತರ ಜನಗಣತಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಜನಗಣತಿ ಮಾಡಲು ಅನುಸರಿಸಬೇಕಾದ ಪ್ರಮುಖ ವಿಷಯಗಳಾದ, ಜನಗಣತಿ ಪರಿಚಯ, ಗಣತಿದಾರರು ಮತ್ತು ಮೇಲ್ವಿಚಾರಕರ ಕರ್ತವ್ಯಗಳು, ಜವಾಬ್ದಾರಿಗಳು, ಕಾನೂನು ಅವಕಾಶಗಳು ಮತ್ತು ಗಣತಿದಾರರು ಮತ್ತು ಮೇಲ್ವಿಚಾರಕರ ಹಕ್ಕುಗಳು, ನಿವೇಶನ ನಕ್ಷೆ ತಯಾರಿಕೆ ಮತ್ತು ಕಟ್ಟಡಗಳು ಹಾಗೂ ಜನಗಣತಿ ಮನೆಗಳಿಗೆ ಸಂಖ್ಯೆ ನೀಡುವುದು, ಮನೆಪಟ್ಟಿ ಮತ್ತು ಮನೆಗಣತಿ ಅನುಸೂಚಿಗಳನ್ನು ಭರ್ತಿ ಮಾಡುವುದು, ಮನೆಪಟ್ಟಿ ಮತ್ತು ಮನೆಗಣತಿ ಗೋಷ್ವಾರೆಯನ್ನು ತಯಾರಿಸುವುದು ಮತ್ತು ದಾಖಲಾತಿಗಳನ್ನು ಸಲ್ಲಿಸುವುರ ಬಗ್ಗೆ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಯಿತು.

ಕಾರ್ಯಗಾರದಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ, ಜಿಲ್ಲಾ ನೋಡಲ್ ಅಧಿಕಾರಿ ಕ್ಷಮ, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಪ್ರಿಲ್ 15ರಿಂದ ಎನ್‌ಪಿಆರ್ ಪರಿಷ್ಕರಣೆ

2021ರಲ್ಲಿ ನಡೆಯಲಿರುವ ದೇಶದ 16ನೆ ಹಾಗೂ ಸ್ವತಂತ್ರ ಭಾರತದ ಜನಗಣತಿಯು ಕಾಗದ ರಹಿತವಾಗಿ ನಡೆಸಲಾಗುವುದು. 2021ರ ಫೆಬ್ರವರಿ 9ರಿಂದ ಫೆಬ್ರವರಿ 28ರ ವರೆಗೆ ಜನಗಣತಿ ನಡೆಯಲಿದೆ. ಅದರ ಪೂರ್ವಭಾವಿಯಾಗಿ 2020ರ ಎಪ್ರಿಲ್ 15ರಿಂದ ಮೇ 29ರ ವರೆಗೆ ಮನೆಪಟ್ಟಿ ಮತ್ತು ಮನೆಗಣತಿ ಅನುಸೂಚಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಪರಿಷ್ಕರಣೆಯು ನಡೆಯಲಿದೆ.

-ಕೇಶ್ಯಾನಾಯ್ಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News