ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ 50ಕ್ಕೆ ಮಿತಿಗೊಳಿಸಲು ಚಿಂತನೆ

Update: 2020-02-27 17:46 GMT

ಬೆಂಗಳೂರು, ಫೆ.27: ಕಳೆದ ಎರಡು-ಮೂರು ವರ್ಷಗಳಿಂದ ಪ್ರತಿಬಾರಿಯೂ ವಿವಾದಕ್ಕೀಡಾಗುತ್ತಿರುವ ಬಿಬಿಎಂಪಿಯಿಂದ ನೀಡುವ ಪ್ರತಿಷ್ಠಿತ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ಈ ಬಾರಿ ಕೇವಲ 50 ಜನರಿಗಷ್ಟೇ ಮಿತಿಗೊಳಿಸಲು ಪಾಲಿಕೆ ಚಿಂತನೆ ನಡೆಸಿದೆ.

ರಾಜ್ಯದ ಅತ್ಯುನ್ನತ ನಾಗರೀಕಾ ಸೇವಾ ಗೌರವವಾದ ರಾಜ್ಯೋತ್ಸವ ಪ್ರಶಸ್ತಿ ಮಾದರಿಯಲ್ಲಿ ಬಿಬಿಎಂಪಿಯಿಂದ ಕೆಂಪೇಗೌಡರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಆದರೆ, ಪ್ರಶಸ್ತಿಯಲ್ಲಿ ಸಾಧಕರ ನಡುವೆ ಕೆಲವು ಅನರ್ಹರೂ ನುಸುಳುತ್ತಿದ್ದಾರೆ ಎಂಬ ಅಪವಾದವಿದೆ.

2018 ರಲ್ಲಿ 500 ಕ್ಕೂ ಅಧಿಕ ಜನರಿಗೆ ಪ್ರಶಸ್ತಿ ನೀಡಿದ್ದರಿಂದ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಹೀಗಾಗಿ, ಹಿಂದಿನ ಬಾರಿ ಮೇಯರ್ ಆಗಿದ್ದ ಗಂಗಾಂಬಿಕೆ ಮಲ್ಲಿಕಾರ್ಜುನ್ ಪ್ರಶಸ್ತಿಗಳ ಸಂಖ್ಯೆಯನ್ನು 100 ಕ್ಕೆ ಅಂತಿಮಗೊಳಿಸಿದ್ದರು. ಆರಂಭದಲ್ಲಿ 75 ನೀಡಬೇಕು ಎಂದು ತೀರ್ಮಾನ ಮಾಡಿದ್ದರೂ, ಗೊಂದಲಗಳಿಂದಾಗಿ ಅದನ್ನು ಮತ್ತೆ ಹೆಚ್ಚಳ ಮಾಡಲಾಗಿತ್ತು.

ಈ ಬಾರಿ ಪ್ರಶಸ್ತಿಗಳ ಸಂಖ್ಯೆಯನ್ನು ಕಡಿಮೆ ಮಾಡಿ, ನಿಜವಾದ ಸಾಧಕರನ್ನು ಆಯ್ಕೆ ಮಾಡಲು ಮೇಯರ್ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸಾಧಕರನ್ನು ಆಯ್ಕೆ ಮಾಡುವ ಮಾನದಂಡವನ್ನು ಬಿಗಿಗೊಳಿಸುವ ಚರ್ಚೆಗಳು ನಡೆಯುತ್ತಿವೆ.

2019-20 ನೇ ಸಾಲಿನ ಕೆಂಪೇಗೌಡ ಪ್ರಶಸ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಬಾರಿಯೂ ನಿವೃತ್ತ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ, ಕಟ್ಟುನಿಟ್ಟಾಗಿ ಶಿಫಾರಸ್ಸನ್ನು ಪಾಲನೆ ಮಾಡುವ ಮೂಲಕ ಅರ್ಹರಿಗೆ ಪ್ರಶಸ್ತಿ ಸಿಗುವಂತೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News