ನಿಧಾನಗತಿಯ ಅಭಿವೃದ್ಧಿಗೆ ಸರಕಾರವೂ ಪರೋಕ್ಷ ಕಾರಣ: ಡಾ.ಅಶ್ವಥ್ ನಾರಾಯಣ

Update: 2020-02-27 17:54 GMT

ಬೆಂಗಳೂರು, ಫೆ.27: ನಗರಗಳ ಅಭಿವೃದ್ಧಿಗೆ ಎಷ್ಟೇ ಕಾಮಗಾರಿಗಳನ್ನು ನಡೆಸಿದರೂ ಜನರ ಗುಣಮಟ್ಟದ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎಸ್.ಅಶ್ವಥ್ ನಾರಾಯಣ ಹೇಳಿದ್ದಾರೆ.

ಮಂಗಳವಾರ ನಗರದ ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ನಗರ ಸವಾಲುಗಳು ಮತ್ತು ಸಿವಿಲ್ ಇಂಜಿನಿಯರಿಂಗ್ ಅವಕಾಶಗಳ ಕುರಿತು ಎರಡು ದಿನಗಳ ರೆಡೆಕಾನ್ 2020 ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ನಗರಗಳ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳು ರೂಪಿಸಲಾಗಿದೆ. ಹಲವಾರು ಕಾಮಗಾರಿಗಳ ಕಾರ್ಯ ಯೋಜನೆ ನಡೆದಿದೆಯಾದರೂ, ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಕ್ರಮ ತಲುಪಲಾಗುತ್ತಿಲ್ಲ ಎಂದು ಅವರು ತಿಳಿಸಿದರು.

ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆಗಾಗಿ ಗ್ತುತಿಗೆದಾರರು ಹಾಗೂ ಸರಕಾರವನ್ನು ಹೊರತುಪಡಿಸಿ ಖಾಸಗಿ ಸಂಸ್ಥೆಗಳೇ ನಿರ್ವಹಿಸುತ್ತಿವೆ. ಆದರೆ, ಸರಕಾರೇತರ ಸಂಸ್ಥೆಗಳು ಕಳಪೆ ಕಾಮಗಾರಿಗಳಲ್ಲಿ ಕೈ ಜೋಡಿಸುತ್ತಿರುವುದು ದುರಂತ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಹೊರ ದೇಶಗಳಲ್ಲಿನ ಅಭಿವೃದ್ಧಿಗೆ ಹೋಲಿಸಿದರೆ ನಮ್ಮಲ್ಲಿ ಅಭಿವೃದ್ಧಿಯು ನಿಧಾನಗತಿಯಲ್ಲಿ ಸಾಗುತ್ತಿದ್ದು, ಅದಕ್ಕೆ ಸರಕಾರವೂ ಪರೋಕ್ಷವಾಗಿ ಕಾರಣವಾಗಿದೆ. ಇಂದು ನಿರ್ಮಾಣ ಕ್ಷೇತ್ರದಲ್ಲಿ ಯಾರು ಬೇಕಾದರೂ ಗುತ್ತಿಗೆದಾರರು ಆಗಬಹುದು. ಆದರೆ ಶೈಕ್ಷಣಿಕ ಹಿನ್ನೆಲೆ ಹೊಂದಿರುವವರು ಗುತ್ತಿಗೆದಾರರು ಆಗಬೇಕಾಗಿರುವುದು ಅತಿ ಅಗತ್ಯ ಎಂದು ಅವರು ತಿಳಿಸಿದರು.

ಕಾಮಗಾರಿಗಳ ನಿರ್ಮಾಣ ಕಾರ್ಯಗಳಲ್ಲಿ ಗುಣಮಟ್ಟ ಕಾಪಾಡಲು ಕೇವಲ ಓದುವುದರಿಂದ ಬರುವುದಿಲ್ಲ. ಓದಿನ ಜತೆ ಅನುಭವವೂ ಅತಿಮುಖ್ಯ. ಈ ನಿಟ್ಟಿನಲ್ಲಿ ಸಿವಿಲ್ ಎಂಜಿನಿಯರ್‌ಗಳ ಸಂಘಕ್ಕೆ ಉದ್ಯೋಗ ಕೌಶಲಕ್ಕೆ ಸಂಬಂಧಿಸಿದ ತರಬೇತಿ ನೀಡಲು ಸರಕಾರ ಸಹಾಯ ಮಾಡಲು ಸಿದ್ಧವಿದೆ ಎಂದು ಭರವಸೆ ನೀಡಿದರು.

ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಸಂಸ್ಥೆ ಅಧ್ಯಕ್ಷ ಡಾ.ಎಂ.ಯು.ಅಶ್ವಥ್ ಮಾತನಾಡಿ, ನಿರ್ಮಾಣ ಕ್ಷೇತ್ರದಲ್ಲಿ ತಂತ್ರಜ್ಞಾನ ಹೆಚ್ಚುತ್ತಿದ್ದಂತೆ ಅವಕಾಶಗಳ ಜೊತೆಗೆ ಸವಾಲುಗಳು ಹೆಚ್ಚುತ್ತಿವೆ. ಸರಕಾರ ಸಿವಿಲ್ ಇಂಜಿನಿಯರ್‌ಗಳ ಜೊತೆ ಕೈ ಜೋಡಿಸಿದಾಗ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಎರಡು ದಿನಗಳ ಸಮಾವೇಶದಲ್ಲಿ ತಂತ್ರಜ್ಞಾನದ ಮೂಲಕ ಇಂಜಿನಿಯರಿಂಗ್ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳವ ಉದ್ದೇಶದಿಂದ 11ಕ್ಕೂ ಹೆಚ್ಚು ತಾಂತ್ರಿಕ ಪರಿಣತರಿಂದ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಐಒಟಿ, ಬಿಐಎಂ ಇತ್ಯಾದಿ ವಿಭಾಗಕ್ಕೆ ಸಂಬಂಧಿಸಿದ ಇತ್ತೀಚಿನ ತಾಂತ್ರಿಕತೆಗಳ ಅಭಿವೃದ್ಧಿಗಳ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News