ಕೇಂದ್ರ ಕಾರಾಗೃಹದಲ್ಲಿ 2,023 ಕೈದಿಗಳು ಮಾನಸಿಕ ಅಸ್ವಸ್ಥರಿದ್ದಾರೆ: ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಕೆ

Update: 2020-02-27 17:57 GMT

ಬೆಂಗಳೂರು, ಫೆ.27: ರಾಜ್ಯದ ಕಾರಾಗೃಹಗಳಲ್ಲಿ ಮಾನಸಿಕ ಅಸ್ವಸ್ಥರಿದ್ದು, ಬೆಂಗಳೂರು ಕೇಂದ್ರ ಕಾರಾಗೃಹವೊಂದರಲ್ಲಿಯೇ 2,023 ಕೈದಿಗಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ

ಈ ಕುರಿತು ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ನ್ಯಾಯಪೀಠವು, ರಾಜ್ಯದ ಕಾರಾಗೃಹಗಳಲ್ಲಿರುವ ಮಾನಸಿಕ ಅಸ್ವಸ್ಥ ಕೈದಿಗಳಿಗೆ ಈ ಕೂಡಲೇ ರಾಜ್ಯ ಸರಕಾರ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದೆ. ಅಲ್ಲದೆ, ಇಲ್ಲಿಯವರೆಗೆ 2,023 ಕೈದಿಗಳಿಗೆ ಚಿಕಿತ್ಸೆ ನೀಡಿರುವ ಬಗ್ಗೆ ಹಾಗೂ ಯಾವ ಸಂಸ್ಥೆಯವರು ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಬಗ್ಗೆ ವಿವರವಾದ ವರದಿ ಸಲ್ಲಿಸಲು ಕಾರಾಗೃಹದ ವೈದ್ಯಕೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ಸರಕಾರದ ಪರ ವಾದಿಸಿದ ವಕೀಲರು, ಕಾರಾಗೃಹಗಳಲ್ಲಿರುವ ಮಾನಸಿಕ ಅಸ್ವಸ್ಥ ಕೈದಿಗಳ ಬಗ್ಗೆ ವೌಲ್ಯಮಾಪನ ನಡೆಸಲಾಗುತ್ತಿದೆ. ಮೌಲ್ಯಮಾಪನ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ ಎಂದು ಪೀಠಕ್ಕೆ ತಿಳಿಸಿದರು. 

ಬೆಂಗಳೂರು ಕೇಂದ್ರ ಕಾರಾಗೃಹಗಳಲ್ಲಿ 2,023 ಕೈದಿಗಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಅದರಲ್ಲಿ ತೀವ್ರ ಮಾನಸಿಕ ಅಸ್ವಸ್ಥತೆ 84, ಸಾಮಾನ್ಯ ಮಾನಸಿಕ ಅಸ್ವಸ್ಥತೆ 189, ಗಮನ ಕೊರತೆ ಡಿಸಾರ್ಡರ್ 2, ಮಾನಸಿಕ ಕುಂಠಿತ 5, ನರದೋಷ ಅಸ್ವಸ್ಥತೆ 16, ಆಲ್ಕೊಹಾಲ್ 236, ನಿಕೋಟಿನ್ 928, ಗಾಂಜಾ 362, ಒಪಾಯಿಡ್ 46, ಪಾಲಿಸೆಬ್ಸಟನ್ಸ್ 72 ಮಂದಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News