"ನಾನು ಕೂಡಾ ಒಬ್ಬ ಸಂಸದ ಎಂದು ಅವರಿಗೆ ಹೇಳಿ" ಅಮಿತ್ ಶಾಗೆ ಮಿತ್ರಪಕ್ಷದ ಸಂಸದ ಪತ್ರ

Update: 2020-02-28 05:53 GMT

ಹೊಸದಿಲ್ಲಿ, ಫೆ.28: ಈಶಾನ್ಯ ದಿಲ್ಲಿಯಲ್ಲಿ ಕಳೆದ ರವಿವಾರದಿಂದ ನಡೆಯುತ್ತಿರುವ ಹಿಂಸಾಚಾರದ ಸಂಬಂಧದ ದೂರುಗಳ ಬಗ್ಗೆ ದಿಲ್ಲಿ ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎಂದು ಬಿಜೆಪಿ ಮಿತ್ರಪಕ್ಷವಾದ ಶಿರೋಮಣಿ ಅಕಾಲಿದಳ ಸಂಸದ ನರೇಶ್ ಗುಜ್ರಾಲ್ ಅವರು ಗೃಹಸಚಿವ ಅಮಿತ್ ಶಾ ಮತ್ತು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಪತ್ರ ಬರೆದಿದ್ದಾರೆ.

"ದಿಲ್ಲಿಯ ಮೌಜ್‌ಪುರ ಪ್ರದೇಶದ ಮನೆಯೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದ 16 ಮಂದಿ ಮುಸ್ಲಿಮರಿಗೆ ನೆರವು ನೀಡುವಂತೆ ಪೊಲೀಸರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬುಧವಾರ ರಾತ್ರಿ ಈ ಮನೆಯ ಬಾಗಿಲು ಮುರಿಯಲು ಉದ್ರಿಕ್ತರ ಗುಂಪು ಪ್ರಯತ್ನಿಸುತ್ತಿದೆ ಎಂದು ಮಾಹಿತಿ ನೀಡಿದರೂ ಪೊಲೀಸರು ತಲೆ ಕೆಡಿಸಿಕೊಳ್ಳಲಿಲ್ಲ. ನಾನೂ ಒಬ್ಬ ಸಂಸದ ಎಂದು ಹೇಳಿದಾಗ ಕೂಡಾ ಪೊಲೀಸರು ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಪರಿಸ್ಥಿತಿಯ ತುರ್ತಿನ ಬಗ್ಗೆ ಪೊಲೀಸರಿಗೆ ಸಂಸದನಾಗಿ ನಾನು ಮನವರಿಕೆ ಮಾಡಿದ್ದೆ. ರಾತ್ರಿ 11:43ಕ್ಕೆ ದಿಲ್ಲಿ ಪೊಲೀಸರಿಗೆ ದೂರು ನೀಡಿರುವ ಬಗ್ಗೆ ದೃಢೀಕರಣ (ಉಲ್ಲೇಖ ಸಂಖ್ಯೆ 946603) ಬಂದಿದೆ. ಆದಾಗ್ಯೂ ಬೇಸರ ವಿಚಾರವೆಂದರೆ, ದೂರಿನ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. 16 ಮಂದಿಗೆ ದಿಲ್ಲಿ ಪೊಲೀಸರಿಂದ ಯಾವ ನೆರವೂ ಸಿಕ್ಕಿಲ್ಲ" ಎಂದು ಗುಜ್ರಾಲ್ ಆಕ್ಷೇಪಿಸಿದ್ದಾರೆ.

16 ಮಂದಿ ಮುಸ್ಲಿಮರು ನೆರೆಯ ಹಿಂದೂ ಕುಟುಂಬಗಳ ನೆರವಿನೊಂದಿಗೆ ತಪ್ಪಿಸಿಕೊಳ್ಳುವುದು ಸಾಧ್ಯವಾಯಿತು ಎಂದು ಅಕಾಲಿದಳ ಸಂಸದರು ವಿವರಿಸಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಒಬ್ಬ ಸಂಸದ ಸ್ವತಃ ದೂರು ನೀಡಿದರೂ ಕ್ರಮ ಕೈಗೊಳ್ಳದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಕೂಡಾ ಗುಜ್ರಾಲ್ ಅವರು ಮುಸ್ಲಿಂ ಸಮುದಾಯವನ್ನು ಪೌರತ್ವ ಕಾಯ್ದೆಯ ವ್ಯಾಪ್ತಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದ್ದು, ಉಭಯ ಪಕ್ಷಗಳ ನಡುವಿನ ವಿರಸಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News