ದೊರೆಸ್ವಾಮಿ ಹೆಸರನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಳ್ಳುತ್ತಿದೆ: ಸಚಿವ ಕೆ.ಎಸ್.ಈಶ್ವರಪ್ಪ

Update: 2020-02-28 12:47 GMT

ಬೆಂಗಳೂರು, ಫೆ. 28: ಶಾಸಕ ಬಸನಗೌಡ ಪಾಟೀಲ್ ಹೇಳಿಕೆ ನೆಪದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಹೆಸರನ್ನು ಕಾಂಗ್ರೆಸ್ ತನ್ನ ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಯತ್ನಾಳ್ ಕ್ಷಮೆ ಕೇಳದಿದ್ದರೆ ಕಲಾಪ ನಡೆಯಲು ಬಿಡುವುದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದು ಹೇಗೆ ಕಲಾಪ ನಡೆಸಲು ಬಿಡುವುದಿಲ್ಲ ಎಂದು ನಾವು ನೋಡ್ತಿವಿ ಎಂದು ತಿರುಗೇಟು ನೀಡಿದರು.

ದೊರೆಸ್ವಾಮಿ ಅವರ ಬಗ್ಗೆ ನಮಗೆ ಗೌರವವಿದೆ. ಆದರೆ, ಅವರು ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ್ ಮತ್ತು ಪ್ರಗತಿಪರರ ಜತೆ ಯಾವ ರೀತಿ ಸಂಬಂಧ ಹೊಂದಿದ್ದಾರೆ ಎಂದು ಫೋಟೋವೊಂದನ್ನು ಇದೇ ವೇಳೆ ಪ್ರದರ್ಶಿಸಿದರು. ಸಿಎಎ ವಿರುದ್ಧದ ಹೋರಾಟಕ್ಕೆ ನಮ್ಮ ವಿರೋಧವಿಲ್ಲ ಎಂದರು.

ಹೊಸದಿಲ್ಲಿ ಗಲಭೆಗೆ ಬಿಜೆಪಿ ಖಂಡಿತ ಕಾರಣವಲ್ಲ. ರಾಷ್ಟ್ರ ವಿರೋಧಿಗಳ ಕೃತ್ಯ ಅದು. ಯಾವುದೇ ಕಾರಣಕ್ಕೂ ಇಂತಹವರಿಗೆ ಬೆಂಬಲ ನೀಡಬೇಡಿ ಎಂದು ಕೋರಿದ ಈಶ್ವರಪ್ಪ, ಮೇಲ್ನೋಟಕ್ಕೆ ರಾಷ್ಟ್ರ ಭಕ್ತಿ ತೋರಿಸಬೇಡಿ. ನೀವು ರಾಷ್ಟ್ರದ ಪರವೋ ಅಥವಾ ವಿರುದ್ಧವೋ ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.

ದೊರೆಸ್ವಾಮಿ ಅವರು ಕಾಂಗ್ರೆಸ್ ತಾಳಕ್ಕೆ ತಕ್ಕಂತೆ ಕುಣಿಯಬಾರದು. ಅಮೂಲ್ಯ ಅವರ ನಿವಾಸಕ್ಕೆ ಅವರು ಏಕೆ ಹೋಗಿದ್ದು ಎಂದು ಪ್ರಶ್ನಿಸಿದ ಈಶ್ವರಪ್ಪ, ಯತ್ನಾಳ್ ಕ್ಷಮೆ ಕೋರುವ ಅಗತ್ಯವಿಲ್ಲ. ಅವರ ಹೇಳಿಕೆಯನ್ನು ನಾನು ಸಮರ್ಥನೆ ಮಾಡುತ್ತೇನೆ ಎಂದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಹುಟ್ಟಹಬ್ಬದ ನಿಮಿತ್ತ ಶಿವಮೊಗ್ಗದಲ್ಲಿ ಆರೋಗ್ಯ ಶಿಬಿರ, ವಿಶೇಷ ಪೂಜೆ, ಹವನ-ಹೋಮ, ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ’

-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News