ಹೊರವರ್ತುಲ ರಸ್ತೆಗೆ ಭೂಸ್ವಾಧೀನ, ರೈತರಿಗೆ ಪರಿಹಾರ ವಿತರಣೆ ಸಮಸ್ಯೆಗೆ ವಾರದಲ್ಲಿ ಸ್ಪಷ್ಟತೆ: ಡಾ.ಅಶ್ವಥ್ ನಾರಾಯಣ

Update: 2020-02-28 13:14 GMT

ಬೆಂಗಳೂರು, ಫೆ. 28: ನಗರದಲ್ಲಿ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಹಾಗೂ ರೈತರಿಗೆ ಪರಿಹಾರ ವಿತರಣೆ ಕುರಿತ ಸಮಸ್ಯೆಗೆ ಸಿಎಂ ಜತೆ ಚರ್ಚಿಸಿ, ವಾರದಲ್ಲಿ ಸ್ಪಷ್ಟತೆ ಕಂಡುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಬಿಡಿಎ ಅಭಿವೃದ್ಧಿಪಡಿಸುತ್ತಿರುವ ಹೊರವರ್ತುಲ ರಸ್ತೆಯ ಭೂ ಪರಿಹಾರ ವಿತರಣೆ ಹಾಗೂ ಇತರ ಸಂಬಂಧಿತ ವಿಷಯಗಳ ಬಗ್ಗೆ ರೈತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಮೂಲಸೌಕರ್ಯ ಕೊರತೆ ಹಾಗೂ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಹೊರವರ್ತುಲ ರಸ್ತೆ ನಿರ್ಮಾಣ ಕಾರ್ಯ ತ್ವರಿತವಾಗಿ ಆಗಬೇಕು ಎಂದರು.

ಭೂ ಸ್ವಾಧೀನ ಹಾಗೂ ಪರಿಹಾರ ವಿತರಣೆ ಕುರಿತು ರೈತ ಪ್ರತಿನಿಧಿಗಳ ಸಲಹೆ ಪಡೆಯಲಾಗಿದೆ. ಅವರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಇನ್ನೊಂದು ವಾರದಲ್ಲಿ ಹೆಚ್ಚಿನ ಸ್ಪಷ್ಟತೆ ಕಂಡುಕೊಳ್ಳಲಾಗುವುದು ಎಂದು ಹೇಳಿದರು. ಹೊರವರ್ತುಲ ರಸ್ತೆ ನಿರ್ಮಾಣಕ್ಕಾಗಿ ಈಗಾಗಲೇ ಭೂಸ್ವಾಧೀನಕ್ಕೆ ಅಧಿಸೂಚನೆ ಪ್ರಕಟಿಸಿ 15ವರ್ಷಕ್ಕೂ ಹೆಚ್ಚು ಕಾಲವಾಗಿದೆ. 2013ರ ಒಪ್ಪಂದಕ್ಕೆ ರೈತರ ಸಹಮತ ಇಲ್ಲ. ಬದಲಾದ ಪರಿಸ್ಥಿತಿಯಲ್ಲಿ ಅವರ ಬೇಡಿಕೆಗಳು ಬದಲಾಗಿದ್ದು, ಪರಿಹಾರದ ವಿಚಾರದಲ್ಲಿ ತಕರಾರಿದೆ. ಈ ನಿಟ್ಟಿನಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಸೇರಿ ಸ್ಥಳೀಯ ರೈತ ಪ್ರತಿನಿಧಿಗಳೊಂದಿಗೆ ಸರಕಾರ ಹಲವು ಸುತ್ತಿನ ಸಮಾಲೋಚನೆ ನಡೆಸಿದೆ ಎಂದರು.

ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದು, ಎಲ್ಲರ ಸಹಮತದಲ್ಲಿ ಭೂ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ. ಈ ಜಟಿಲ ಸಮಸ್ಯೆಗೆ ಆದಷ್ಟು ಬೇಗ ಸೂಕ್ತ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದ್ದು, ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ತುಮಕೂರು ರಸ್ತೆ ಮೂಲಕ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 68 ಕಿ.ಮೀ.ಉದ್ದದ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ 1800 ಎಕರೆ ಭೂಮಿ ಅಗತ್ಯವಿದ್ದು, ಆ ಪೈಕಿ 200 ಎಕರೆ ಸರಕಾರಿ, ಉಳಿದ 1600 ಎಕರೆ ಖಾಸಗಿ ಭೂಮಿಯಾಗಿದೆ. ಈ ಹಿಂದೆ ಉದ್ದೇಶಿತ ಯೋಜನೆಗೆ 4,500 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿತ್ತು. ಇದೀಗ ಆ ಮೊತ್ತ 15,500 ಕೋಟಿ ರೂ.ಗಳಾಗಲಿದೆ. ರೈತರಿಗೆ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಬೇಕೆಂಬ ಬಗ್ಗೆ ಸರಕಾರದೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್, ಬಿಡಿಎ ಆಯುಕ್ತ ಪ್ರಕಾಶ್, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

‘ಹೊರ ವರ್ತುಲ ರಸ್ತೆಗೆ ರೈತರಿಂದ ವಶಪಡಿಸಿಕೊಳ್ಳುವ ಭೂಮಿಗೆ ಪ್ರಸ್ತುತ ಮಾರುಕಟ್ಟೆ ವೌಲ್ಯವನ್ನು ನೀಡಬೇಕು. ಮೂಲಸೌಕರ್ಯ ಅಭಿವೃದ್ಧಿ ದೃಷ್ಟಿಯಿಂದ ರೈತರು ಸಹಕಾರ ನೀಡಲು ಸಿದ್ಧ. ಆದರೆ, ಅನ್ಯಾಯವಾದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’

-ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News