ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆ ಆರಂಭ

Update: 2020-02-28 17:22 GMT

ಬೆಂಗಳೂರು, ಫೆ.28: ಬಿಬಿಎಂಪಿ ಸದಸ್ಯರ ಆಡಳಿತಾವಧಿ ಸಪ್ಟೆಂಬರ್‌ಗೆ ಪೂರ್ಣಗೊಳ್ಳಲಿದ್ದು, ಮುಂದಿನ ಚುನಾವಣೆ ನಿಮಿತ್ತ ವಾರ್ಡ್‌ಗಳ ಮರುವಿಂಗಡಣೆ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಕೇಂದ್ರ ಭಾಗದಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ.

ಪ್ರತಿ ಚುನಾವಣೆಗೂ ವಾರ್ಡ್‌ಗಳ ಮರುವಿಂಗಡನೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶವಿದ್ದರೂ, ಕಳೆದ ಎರಡು ಚುನಾವಣೆಗಳಲ್ಲಿ ಮರು ವಿಂಗಡಣೆ ಮಾಡಿರಲಿಲ್ಲ. ಆದರೆ, ಸೆಪ್ಟೆಂಬರ್‌ಗೆ ಬಿಬಿಎಂಪಿಗೆ ಚುನಾಯಿತರಾದವರ ಅಧಿಕಾರಾವಧಿ ಮುಕ್ತಾಯವಾಗಲಿದ್ದು, ಹೊಸ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಬೇಕಿದೆ.

ವಾರ್ಡ್ ಮರು ವಿಂಗಡಣೆಗೆ ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ವಿಂಗಡಣೆ ಕರಡು ಸಿದ್ಧಪಡಿಸಲಾಗಿದ್ದು, ಅದನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.

ರಾಜ್ಯ ಚುನಾವಣಾ ಆಯೋಗವು ವಾರ್ಡ್‌ಗಳ ಮರು ವಿಂಗಡಣೆ ಕುರಿತು ಸೂಕ್ತ ಮಾಹಿತಿ ಕಲೆ ಹಾಕುವಂತೆ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದೆ. ಹಾಗಾಗಿ, ಮರು ವಿಂಗಡಣೆಗೆ ಸಂಬಂಧಿಸಿದಂತೆ ಯಾವ ವರ್ಷದ ಆಧಾರ, ನೋಟಿಫಿಕೇಶನ್ ಹೊರತುಪಡಿಸುವ ದಿನಾಂಕ ಮತ್ತು ಮೀಸಲಾತಿ ಕುರಿತು ಸ್ಪಷ್ಟೀಕರಣ ಕೇಳಿದೆ. ಮಾ.4 ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ಆಗ ಮಾಹಿತಿ ನೀಡಲಾಗುತ್ತದೆ ಎಂದು ಆಯುಕ್ತರು ಹೇಳಿದ್ದಾರೆ.

ಆಕ್ಷೇಪಣೆಗೆ ಕಾಲಾವಕಾಶ: ಬೆಂಗಳೂರು ನಗರ ಜಿಲ್ಲಾಧಿಕಾರಿ ಕರಡು ಪ್ರತಿಯನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಶೀಘ್ರ ಸರಕಾರದ ಕರಡು ಅಧಿಸೂಚನೆ ಹೊರಡಿಸಲಿದ್ದು, ಅದಕ್ಕೆ ಯಾವುದೇ ಆಕ್ಷೇಪಣೆಗಳಿದ್ದರೂ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆಕ್ಷೇಪಣಾ ಅರ್ಜಿಗಳ ವಿಚಾರಣೆ ಪೂರ್ಣವಾದ ಬಳಿಕ ವಾರ್ಡ್ ಮರುವಿಂಗಡಣೆ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಆಯುಕ್ತರು ಹೇಳಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆ ಅಸ್ತಿತ್ವದಲ್ಲಿದ್ದಾಗ 100 ವಾರ್ಡ್‌ಗಳಿದ್ದವು. 2008ರಲ್ಲಿ 7 ನಗರಸಸಭೆ, ಒಂದು ಪಟ್ಟಣ ಪಂಚಾಯತ್ ಹಾಗೂ 110 ಹಳ್ಳಿಗಳನ್ನು ಪಾಲಿಕೆಗೆ ಸೇರಿಸಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) 198 ವಾರ್ಡ್‌ಗಳನ್ನು ರಚಿಸಲಾಗಿದೆ. ಈಗ ಇಷ್ಟು ವಾರ್ಡ್‌ಗಳನ್ನು ಮರು ವಿಂಗಡಣೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಹೆಚ್ಚುವರಿ ವಾರ್ಡ್‌ಗಳ ರಚನೆ ಸದ್ಯಕ್ಕೆ ಕೈಬಿಡಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News