ಪ್ರತಿವಾರ ಕಡ್ಡಾಯ ಸಭೆ ನಡೆಸಿ, ನಡಾವಳಿ ರೂಪಿಸಲು ಮೇಯರ್ ಸೂಚನೆ

Update: 2020-02-28 17:23 GMT

ಬೆಂಗಳೂರು, ಫೆ.28: ಯಲಹಂಕ ವಲಯಕ್ಕೆ ಸಂಬಂಧಿಸಿದಂತೆ ವಿವಿಧ ಅಭಿವೃದ್ಧಿ ಕೆಲಸಗಳ ಕುರಿತು ಪ್ರತಿ ವಾರವೂ ಕಡ್ಡಾಯವಾಗಿ ಸಭೆ ನಡೆಸಿ ನಡಾವಳಿ ಮಾಡಬೇಕು ಎಂದು ಮೇಯರ್ ಗೌತಮ್ ಕುಮಾರ್ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಶನಿವಾರ ಯಲಹಂಕ ವಲಯ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳ ಸಭೆ ನಡೆಸಿದ ಮೇಯರ್ ಜಂಟಿ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಪಿಡಬ್ಲೂ ಕಾಮಗಾರಿಗಳನ್ನು ಪ್ರಾರಂಭಿಸಿ ಜಕ್ಕೂರು ವಾರ್ಡ್ ವ್ಯಾಪ್ತಿಯ ರೈಲ್ವೆ ಕೆಳಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ತಿಗೊಳಿಸಬೇಕೆಂದು ಹೇಳಿದರು.

ಕೊಡಿಗೇಹಳ್ಳಿ ಕೆಳಸೇತುವೆಯನ್ನು ತೀರಾ ಕಳಪೆ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ರಿಟೈನಿಂಗ್ ವಾಲ್ ಸರಿಯಾಗಿ ನಿರ್ಮಿಸಿಲ್ಲ. ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ಮಾರ್ಗ ಕಲ್ಪಿಸಿಲ್ಲ. ಹೀಗಾಗಿ, ಇದನ್ನು ಗುತ್ತಿಗೆ ನೀಡಿದ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಯಲಹಂಕ ವಲಯ ಪ್ರದೇಶದಲ್ಲಿ ಒಟ್ಟು 90 ಉದ್ಯಾನವನಗಳಿದ್ದು, 12 ಕೆರೆಗಳ ಬಳಿ ಉದ್ಯಾನವನಗಳ ಅಭಿವೃದ್ಧಿ ಮಾಡಲಾಗಿದೆ. ಒಟ್ಟಾರೆ 27 ಕೆರೆಗಳಿದ್ದು, 75 ಎಕರೆಗಿಂತಲೂ ಅಧಿಕ ಭೂಮಿ ಒತ್ತುವರಿಯಾಗಿದೆ ಎಂದು ಅಂದಾಜಿಲಾಗಿದೆ ಎಂದು ಅಧಿಕಾರಿಯೊಬ್ಬರು ಮೇಯರ್‌ಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಕೂಡಲೇ ಒತ್ತುವರಿ ಜಾಗ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ವಲಯದಲ್ಲಿ ಒಟ್ಟು 1.94 ಲಕ್ಷ ಆಸ್ತಿಗಳಿದ್ದು, 252 ಕೋಟಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಇದುವರೆಗೂ ಶೇ.88 ರಷ್ಟು ತೆರಿಗೆ ಸಂಗ್ರಹವಾಗಿದೆ. ಉಳಿದ ತೆರಿಗೆಯನ್ನು ಶೀಘ್ರದಲ್ಲಿಯೇ ಅಂತಿಮಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಮೇಯರ್‌ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಮೇಯರ್ ವಾಹನ ಸವಾರರಿಗೆ ಅಡ್ಡಿಯಾಗದಂತೆ ಕ್ರಮ ವಹಿಸಬೇಕು. ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಷರತ್ತು ವಿಧಿಸಿ ಸಮರ್ಪಕವಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ಬೃಹತ್‌ಸಾರ್ವಜನಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್, ಸ್ಥಳೀಯ ಸದಸ್ಯರಾದ ಮಂಜುನಾಥ್ ಬಾಬು, ಚೇತನ್, ಪದ್ಮಾವತಿ, ಕುಸುಮ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News