ಮಸೀದಿಯಲ್ಲಿ ಕಡಿಮೆ ಧ್ವನಿವರ್ಧಕ ಬಳಸಲು ಕೋರಿ ಅರ್ಜಿ: ಡೆಸಿಬಲ್ ಮಾಪನದ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

Update: 2020-02-28 17:29 GMT

ಬೆಂಗಳೂರು, ಫೆ.28: ಮಸೀದಿಯಲ್ಲಿ ನಮಾಝ್ ಮಾಡುವಾಗ ಧ್ವನಿವರ್ಧಕ ಬಳಸಿ ಮಿತಿಮೀರಿದ ಶಬ್ದ ಹೊರಡಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಧ್ವನಿವರ್ಧಕದ ಡೆಸಿಬಲ್(ಶಬ್ದದ ತೀವ್ರತೆ) ಮಾಪನ ಮಾಡಲು ಅಧಿಕಾರಿಯೊಬ್ಬರನ್ನು ನೇಮಕ ಮಾಡಿ ವರದಿ ಸಲ್ಲಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ. 

ಈ ಕುರಿತು ಗೋವಿಂದರಾಜನಗರದ ಮಸೀದಿಯಲ್ಲಿ ಕಡಿಮೆ ಧ್ವನಿವರ್ಧಕ ಬಳಸಲು ನಿರ್ದೇಶಿಸಲು ಕೋರಿ ಸುಮಂಗಳ ಎ.ಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಕೆಲಕಾಲ ವಕೀಲರ ವಾದ ಆಲಿಸಿದ ನ್ಯಾಯಪೀಠವು ಡೆಸಿಬಲ್ ಮಾಪನ ಮಾಡಲು ಅಧಿಕಾರಿಯೊಬ್ಬರನ್ನು ನೇಮಕ ಮಾಡಿ ವರದಿ ಸಲ್ಲಿಸಬೇಕು. ಯಾವ ಅಧಿಕಾರ ಬಳಸಿ ಧ್ವನಿವರ್ಧಕದ ಬಳಕೆಗೆ ಲೈಸೆನ್ಸ್ ನೀಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕೆಂದು ಸರಕಾರಕ್ಕೆ ತಿಳಿಸಿತು. ಗೋವಿಂದರಾಜ ನಗರದಲ್ಲಿ ಎರಡು ಮಸೀದಿಗಳಿದ್ದು, ದಿನಕ್ಕೆ 5 ಬಾರಿ ನಮಾಝ್ ಮಾಡಲಾಗುತ್ತದೆ. ಈ ವೇಳೆ ಧ್ವನಿವರ್ಧಕಗಳ ಮೂಲಕ ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಶಬ್ದ ಉಂಟುಮಾಡುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯವಾಗುತ್ತಿದೆ. ಈ ಸಂಬಂಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಮನವಿ ಮಾಡಿದ್ದರೂ, ಇದೊಂದು ಧಾರ್ಮಿಕ ವಿಚಾರ ಎನ್ನುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸುವುದು ಸಾಧ್ಯವಿಲ್ಲ ಎನ್ನುತ್ತಾರೆ. ಹೀಗಾಗಿ ಸಂಬಂಧಿಸಿದ ಪ್ರಾಧಿಕಾರಕ್ಕೆ ಸೂಕ್ತ ನಿರ್ದೇಶನ ನೀಡಿ, ಶಬ್ದ ಮಾಲಿನ್ಯ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News