ಅನರ್ಹ ಶಾಸಕ ಮುನಿರತ್ನ ಆಯ್ಕೆ ಅಸಿಂಧು ಕೋರಿ ಅರ್ಜಿ: ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Update: 2020-02-28 17:42 GMT

ಬೆಂಗಳೂರು, ಫೆ.28: ರಾಜರಾಜೇಶ್ವರಿನಗರ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ಆಯ್ಕೆ ಅಸಿಂಧು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತು.

ಈ ಕುರಿತು ಮುನಿರಾಜುಗೌಡ ಸಲ್ಲಿಸಿದ್ದ ಚುನಾವಣೆ ತಕರಾರು ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಮುನಿರತ್ನ ಪರ ವಾದಿಸಿದ್ದ ವಕೀಲರು, ಮುನಿರಾಜುಗೌಡನಿಗೆ ತಮಗೆ ಒಟ್ಟು ಎಷ್ಟು ಮತಗಳು ಬೀಳಲಿದ್ದವು ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಚುನಾವಣಾ ಅಕ್ರಮ ಕೇಳಿ ಬಂದ ಹಿನ್ನೆಲೆಯಲ್ಲಿ ಎಷ್ಟು ಮತದಾರರು ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಹೇಳಿಲ್ಲ. ಹೀಗಾಗಿ, ಅರ್ಜಿಯನ್ನು ವಜಾಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ಅವರು ರಾಜರಾಜೇಶ್ವರಿ ನಗರದಲ್ಲಿ ನಕಲಿ ವೋಟರ್ ಐಡಿ ಕಾರ್ಡ್‌ಗಳನ್ನು ಮುದ್ರಿಸಿ ಹಂಚುತ್ತಿದ್ದಾರೆ ಎಂದು ಮುನಿರತ್ನ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಆರೋಪಿಸಿದ್ದರು. ಈ ಬಗ್ಗೆ ಅವರು ಚುನಾವಣೆ ಆಯೋಗಕ್ಕೂ ದೂರು ನೀಡಿದ್ದರು. ಇದನ್ನು ಪರಿಗಣಿಸಿದ್ದ ಆಯೋಗ ಕೆಲಕಾಲ ಕ್ಷೇತ್ರದ ಚುನಾವಣೆಯನ್ನೂ ಮುಂದೂಡಿತ್ತು. ಬಳಿಕ ಮುನಿರತ್ನ ಅವರು ಗೆಲುವು ಸಾಧಿಸಿದ್ದರು.

ಇದೀಗ ಮುನಿರತ್ನ ಬಿಜೆಪಿಗೆ ಸೇರ್ಪಡೆಯಾಗಿದ್ದು, ಪರಾಜಿತ ಅಭ್ಯರ್ಥಿ ಮುನಿರಾಜು ಗೌಡ ಚುನಾವಣಾ ತಕರಾರು ಅರ್ಜಿುನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News