ಆಂಗ್ಲ ಅನ್ನ ನೀಡುವ ಭಾಷೆಯಲ್ಲ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ

Update: 2020-02-28 17:47 GMT

ಬೆಂಗಳೂರು, ಫೆ.28: ಆಂಗ್ಲ ಭಾಷೆ ಅನ್ನ ನೀಡುವ ಭಾಷೆ ಎಂದು ಬಣ್ಣಿಸುವುದು ಸರಿಯಲ್ಲ. ಏಕೆಂದರೆ, ಆಂಗ್ಲರ ನಾಡಿನಲ್ಲಿಯೇ ಉದ್ಯೋಗ ದೊರೆಯುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.

ಶುಕ್ರವಾರ ನಗರದ ಸರಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ಸಾಂಸ್ಕೃತಿಕ ಸಮಿತಿ ಮತ್ತು ಕನ್ನಡ ಸಂಘ ಸಹಯೋಗದೊಂದಿಗೆ ಆಯೋಜಿಸಿದ್ದ, ಕಲಾ ಸಂಭ್ರಮ-2020 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂಗ್ಲಿಷ್ ಅನ್ನ, ಉದ್ಯೋಗ ನೀಡುವ ಭಾಷೆ ಎನ್ನುವುದು ಶುದ್ಧ ಸುಳ್ಳು. ಒಂದು ವೇಳೆ ಹಾಗೇ ಏನಾದರೂ, ನಿಜವಾಗಿದ್ದರೆ, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ನಿರುದ್ಯೋಗ ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ, ನಾವು ಕನ್ನಡವನ್ನು ಉದ್ಯೋಗ ನೀಡುವ ಭಾಷೆಯನ್ನಾಗಿ ಕಟ್ಟಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಖಾಸಗಿ ತಾಂತ್ರಿಕ ತರಬೇತಿ ಸಂಸ್ಥೆಗಳಿರಲಿ ಅಥವಾ ಶಾಲಾ-ಕಾಲೇಜುಗಳು ಇರಲಿ. ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕು. ಇಲ್ಲದಿದ್ದರೆ, ರಾಜ್ಯದಿಂದ ಗಂಟು ಮೂಟೆ ಕಟ್ಟಬೇಕಾಗುತ್ತದೆ ಎಂದ ಅವರು, ನಮಗೆ ಮೆಕಾಲೆ ಶಿಕ್ಷಣ ಪದ್ಧತಿ ಅವಶ್ಯಕತೆ ಇಲ್ಲ. ನಮ್ಮದು ಗುರು ಪರಂಪರೆಯ ಶಿಕ್ಷಣ ವ್ಯವಸ್ಥೆ ಎಂದು ನುಡಿದರು.

ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳವುದು ಅಷ್ಟು ಸುಲಭದ ಮಾತಲ್ಲ. ಒಂದು ವೇಳೆ ಸುಲಭವಾಗಿದ್ದರೆ, ಲಕ್ಷಾಂತರ ಮಂದಿ ಸಿನಿಮಾ ಕ್ಷೇತ್ರದಲ್ಲಿರುತ್ತಿದ್ದರು. ಇನ್ನು, ಒಬ್ಬ ಉತ್ತಮವಾದ ಗುರು ಇದ್ದರೆ ತನಗೆ ತಾನೆ ನಮ್ಮನ್ನ ಗುರಿಯ ಹತ್ತಿರ ಕರೆದುಕೊಂಡು ಹೋಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಎಂ.ಎ.ನೀಲಾವತಿ, ನೃತ್ಯ ನಿರ್ದೇಶಕ ಬಿ.ಜೆ.ವೆಂಕಟೇಶ್, ಗಾಯಕ ಡಾ.ಬಂಡ್ಲಹಳ್ಳಿ ವಿಜಯಕುಮಾರ್, ಅರುಣ ಚಂದ್ರಶೇಖರ್, ಸುನೀತಾ ಮೋಹನ್ ರಾಜ್, ಕಲಾ ಕಾಲೇಜಿನ ಹಿರಿಯ ಕನ್ನಡ ಪ್ರಾಧ್ಯಾಪಕ ರುದ್ರೇಶ್ ಅದರಂಗಿ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News