ಒಂದೇ ದೇಶ- ಒಂದೇ ದರಕ್ಕೆ ಆಗ್ರಹ: ವಿತರಕರು, ವರ್ತಕರಿಂದ ಬೃಹತ್ ಪ್ರತಿಭಟನೆ

Update: 2020-02-28 17:53 GMT

ಬೆಂಗಳೂರು, ಫೆ.28: ದಿನನಿತ್ಯ ಬಳಕೆ ಸಾಮಗ್ರಿಗಳ ಮೇಲಿನ ಬಹು ರಾಷ್ಟ್ರೀಯ ಕಂಪೆನಿಗಳ ಹಸ್ತಕ್ಷೇಪ ತಡೆಯಬೇಕು. ಜೊತೆಗೆ, ಒಂದು ದೇಶ-ಒಂದು ಬೆಲೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯದ ವಿತರಕರು ಮತ್ತು ವರ್ತಕರು ಬೃಹತ್ ಪ್ರತಿಭಟನೆ ನಡೆಸಿದರು.

ಶುಕ್ರವಾರ ನಗರದ ಸ್ವಾತಂತ್ರ್ಯ ಉದ್ಯಾನವನ ಮೈದಾನದಲ್ಲಿ ಕೆಎಫ್‌ಡಿಡಬ್ಲ್ಯೂಎ ಮತ್ತು ಕೆಆರ್‌ಟಿಡಬ್ಲ್ಯೂಎಫ್ ಹಾಗೂ ಕರ್ನಾಟಕ ವ್ಯಾಪಾರಿಗಳ ಒಕ್ಕೂಟ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.

ಇತ್ತೀಚಿನ ದಿನಗಳಲ್ಲಿ ಪಾರಂಪರಿಕ ವ್ಯಾಪಾರಸ್ಥರು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅಲ್ಲದೆ, ಆನ್‌ಲೈನ್ ವ್ಯಾಪಾರ ಹಾವಳಿಯಿಂದಾಗಿ, ವ್ಯಾಪಾರವೇ ಕುಸಿದು ಬಿದಿದ್ದು, ಇದರಿಂದ ಸಾವಿರಾರು ಕುಟುಂಬಗಳ ಬದುಕು ಬೀದಿಗೆ ಬರಲಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರಕಾರ ಒಂದು ದೇಶ-ಒಂದು ತೆರಿಗೆ ಮಾದರಿಯಲ್ಲಿ ಒಂದು ವ್ಯಾಪಾರ-ಒಂದು ದರ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಯಾವುದೇ ಸರಕಾರದ ಉದ್ಯೋಗವನ್ನು ಅಪೇಕ್ಷಿಸದೆ, ನಾವು ಸ್ವಾಭಿಮಾನಿಗಳಾಗಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ನಾಲ್ಕಾರು ಕುಟುಂಬಗಳಿಗೆ ಉದ್ಯೋಗದ ಆಶ್ರಯ ನೀಡಿ, ಬದುಕು ಕಟ್ಟಿಕೊಂಡಿದ್ದೇವೆ. ಆದರೆ, ಕೆಲ ವ್ಯವಸ್ಥೆಗಳನ್ನು ಸರಕಾರ ಸರಿಪಡಿಸಬೇಕು. ಸೂಕ್ತ ಭರವಸೆಯೊಂದಿಗೆ ರಾಜ್ಯ ಸರಕಾರದ ವತಿಯಿಂದ ವ್ಯಾಪಾರಸ್ಥರ ಉಳಿವಿಗಾಗಿ ಮತ್ತು ಏಳಿಗೆಗಾಗಿ ಒಂದು ನಿಗಮ ಮಂಡಳಿಯ ರಚನೆಗೆ ಅವಕಾಶ ಮಾಡಬೇಕೆಂದು ವ್ಯಾಪಾರಸ್ಥರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆಎಫ್‌ಡಿಡಬ್ಲ್ಯೂಎ ಅಧ್ಯಕ್ಷ ಆರ್.ಜಯಂತ್ ಗಾಣಿಗ, ಕೆಆರ್‌ಟಿಡಬ್ಲ್ಯೂಎಫ್ ಅಧ್ಯಕ್ಷ ಎಸ್.ರವಿರೆಡ್ಡಿ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News