ಮೃತ ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಪರಿಹಾರ - ಸಿಎಂ ಯಡಿಯೂರಪ್ಪ

Update: 2020-02-29 07:04 GMT

ಬೆಂಗಳೂರು, ಫೆ.29: ಅಕಾಲಿಕ ಸಾವನ್ನಪ್ಪಿರುವ ನಾಲ್ವರು ಪತ್ರಕರ್ತರಿಗೆ ತಲಾ 5 ಲಕ್ಷ ರೂ. ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಮಾಡಿದ್ದಾರೆ.

ಶನಿವಾರ ತಮ್ಮನ್ನು ಭೇಟಿಯಾದ ಪತ್ರಕರ್ತರ ನಿಯೋಗದ ಮನವಿಯಂತೆ ತಲಾ 5 ಲಕ್ಷ ರೂ.ಪರಿಹಾರ ಧನ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶಕ್ತಿಭವನದಲ್ಲಿ ಹಿರಿಯ ಪತ್ರಕರ್ತರು ಮತ್ತು ರಾಜಕೀಯ ವರದಿಗಾರರ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು. ಇತ್ತೀಚೆಗೆ ನಿಧನರಾದ ರಾಜಕೀಯ ವರದಿಗಾರ ರವಿರಾಜ್ ವಳಲಂಬೆ, ಕ್ರೀಡಾ ಪತ್ರಕರ್ತ ದಿಗಂಬರ್ ಗರುಡಾ, ವರದಿಗಾರ ರೋಹೀತ್ ಬಿ.ಆರ್, ಟಿವಿ ನಿರೂಪಕರಾಗಿದ್ದ  ಗಜಾನನ ಹೆಗಡೆ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಲಾಯಿತು.

ಪತ್ರಕರ್ತರ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಕ್ಷಣವೇ ಮೃತರ ಕುಟುಂಬಗಳಿಗೆ ತಲಾ  5 ಲಕ್ಷ ರೂ ಪರಿಹಾರ ನೀಡುವಂತೆ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಪರಿಹಾರದ ಮೊತ್ತ ಮೃತರ ಕುಟುಂಬ ಸದಸ್ಯರಿಗೆ ತಕ್ಷಣ ಸಿಗುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಿದರು.

ಅಕಾಲಿಕ ಮೃತರಾಗುವ ಪತ್ರಕರ್ತರ ಕುಟುಂಬಗಳಿಗೆ ವಿಶೇಷ ನಿಧಿ ಸ್ಥಾಪಿಸುವಂತೆ ಪತ್ರಕರ್ತರ ನಿಯೋಗ ಮಾಡಿಕೊಂಡ ಮನವಿಯನ್ನು ಸಿಎಂ ಯಡಿಯೂರಪ್ಪ ಅವರಿಗೆ ಮಾಡಲಾಯಿತು. ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಮಾಡುವಂತೆಯೂ ಕೋರಲಾಯಿತು. ಈ ಮನವಿಯನ್ನು ಪರಿಗಣಿಸುವುದಾಗಿ ಸಿಎಂ ಪತ್ರಕರ್ತರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಪ್ರೆಸ್ ಕ್ಲಬ್ ಅಧ್ಯಕ್ಷರಾದ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಹೆಚ್ ವಿ ಕಿರಣ್, ಕಾರ್ಯದರ್ಶಿ ಆನಂದ ಬೈದನಮನೆ, ಟಿವಿ ನೈನ್ ಸಂಪಾದಕ ರಂಗನಾಥ್ ಭಾರದ್ವಾಜ್, ರಾಜ್ ನ್ಯೂಸ್ ಸಂಪಾದಕ ಹಮೀದ್ ಪಾಳ್ಯ, ಹಿರಿಯ ಪತ್ರಕರ್ತರಾದ ಬಿ.ವಿ.ಶಿವಶಂಕರ್, ಗುರುಲಿಂಗಸ್ವಾಮಿ, ಶಿವರುದ್ರಪ್ಪ, ವಿಲಾಸ್ ನಾಂದೋಡ್ಕರ್,   ಹೆಚ್ ಪಿ.ಸಿದ್ದೇಶಕುಮಾರ್, ನಾಗರಾಜ್ ಕೆ.ಎಸ್., ಸುನೀಲ್ ಶಿರಸಂಗಿ, ಟಿವಿ ನಿರೂಪಕರಾದ ರಾಧಾ ಹಿರೇಗೌಡರ್, ಗೌರೀಶ್ ಅಕ್ಕಿ, ಶಂಕರ್ ಪಾಗೋಜಿ ಸೇರಿದಂತೆ ಹಲವರು ನಿಯೋಗದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News