×
Ad

ಇನ್ನುಮುಂದೆ ಬೆಂಗಳೂರು ಟೌನ್ ಹಾಲ್ ಮುಂದೆ ಪ್ರತಿಭಟನೆಗೆ ಅವಕಾಶವಿಲ್ಲ

Update: 2020-02-29 20:11 IST

ಬೆಂಗಳೂರು, ಫೆ.29: ನಗರದ ಟೌನ್ ಹಾಲ್ ಎದುರು ಇನ್ನು ಮುಂದೆ ಯಾವುದೇ ರೀತಿಯ ಮುಷ್ಕರ, ಪ್ರತಿಭಟನೆ ಹಾಗೂ ಇನ್ನಿತರ ಚಟುವಟಿಕೆಗೆ ಅನುಮತಿ ನೀಡಬಾರದು ಎಂಬ ನಿರ್ಣಯವನ್ನು ಬಿಬಿಎಂಪಿ ಕೈಗೊಂಡಿದೆ.

ಶನಿವಾರ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯವನ್ನು ಅಂಗೀಕರಿಸಲಾಯಿತು.
ಸಾರ್ವಜನಿಕರು ಸಭೆ ಸಮಾರಂಭ ಅಥವಾ ಕಾರ್ಯಕ್ರಮ ನಡೆಸಲು ಪುಟ್ಟಣ್ಣಚೆಟ್ಟಿ ಪುರಭವನ(ಟೌನ್ ಹಾಲ್)ವನ್ನು ಮುಂಗಡವಾಗಿ ಹಣ ಪಾವತಿಸಿ ಕಾಯ್ದಿರಿಸಿರುತ್ತಾರೆ. ಆದರೆ, ಇಲ್ಲಿ ಅನೇಕ ಸಂಘ ಸಂಸ್ಥೆಗಳು ಅನುಮತಿಯನ್ನು ಪಡೆಯದೆ ಪ್ರತಿಭಟನೆ ನಡೆಸುತ್ತಿರುವುದರಿಂದ ಕಾರ್ಯಕ್ರಮಗಳಿಗೆ ಅಡಚಣೆಯಾಗುತ್ತಿದೆ. ಹೀಗಾಗಿ, ಪುರಭವನವನ್ನು ಕಾಯ್ದಿರಿಸಲು ಹಿಂದೇಟು ಹಾಕುತ್ತಿರುವುದರಿಂದ ಪಾಲಿಕೆಗೆ ಆರ್ಥಿಕವಾಗಿ ನಷ್ಟವಾಗುತ್ತಿದೆ ಎಂದು ಮೇಯರ್ ಗೌತಮ್‌ ಕುಮಾರ್ ಹೇಳಿದರು.

ಪುರಭವನದ ಸುತ್ತಮುತ್ತ ವಾಹನಗಳ ದಟ್ಟಣೆಯೂ ಹೆಚ್ಚಿರುವುದರಿಂದ ಇಲ್ಲಿ ಪ್ರತಿಭಟನೆ ನಡೆಸಿದರೆ ಸಂಚಾರ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾುತ್ತದೆ ಎಂದು ಅವರು ಹೇಳಿದರು.

ಫ್ರೀಡಂ ಪಾರ್ಕ್‌ನಲ್ಲಿ ವ್ಯವಸ್ಥೆ: ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾಕಾರರಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಸುಮಾರು 5 ಸಾವಿರ ಜನ ಸೇರಿ ಧರಣಿ, ಮುಷ್ಕರ, ಸತ್ಯಾಗ್ರಹ, ಪ್ರತಿಭಟನೆ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. ಸುಮಾರು 560ಕ್ಕೂ ಹೆಚ್ಚು ವಾಹನಗಳ ನಿಲುಗಡೆಗೆ ಅವಕಾಶ ಮಾಡಲಾಗುತ್ತದೆ. ಅಲ್ಲದೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗುತ್ತದೆ ಎಂದು ಮೇಯರ್ ಹೇಳಿದರು.

ಕಡಿಮೆ ಸಂಖ್ಯೆಯಲ್ಲಿ ಪ್ರತಿಭಟನಾಕಾರರಿದ್ದರೆ ಮೌರ್ಯ ವೃತ್ತದಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗುತ್ತದೆ. ವಾಹನಗಳ ನಿಲುಗಡೆಗೂ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಪಾಲಿಕೆ ನಿರ್ಣಯ ಆಧರಿಸಿ, ನಗರ ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆಯಲಾಗುವುದು. ತಕ್ಷಣದಿಂದ ಈ ನಿರ್ಬಂಧ ಜಾರಿಗೆ ಬರಲಿದೆ ಎಂದು ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News