ಇಂದಿರಾ ಕ್ಯಾಂಟೀನ್: ದರ ಹೆಚ್ಚಳಕ್ಕೆ ಬಿಬಿಎಂಪಿ ಚಿಂತನೆ

Update: 2020-02-29 15:02 GMT

ಬೆಂಗಳೂರು, ಫೆ.29: ಇಂದಿರಾ ಕ್ಯಾಂಟೀನ್‌ನಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದ ಊಟ ಮತ್ತು ಉಪಾಹಾರದ ಬೆಲೆಯನ್ನು ಹೆಚ್ಚಳ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಈ ಮೊದಲು 5 ರೂ.ಗೆ ಸಿಗುತ್ತಿದ್ದ ತಿಂಡಿ ಬೆಲೆಯನ್ನು 10 ರೂ.ಗೆ ಹಾಗೂ 10ರೂ.ಗೆ ಸಿಗುತ್ತಿದ್ದ ಊಟವನ್ನು 15ರೂ.ಗೆ ಏರಿಕೆ ಮಾಡಲು ತಯಾರಿ ನಡೆಸಿದೆ. ಬಿಬಿಎಂಪಿ ಮತ್ತು ಸರಕಾರಕ್ಕೆ ಆಗುತ್ತಿರುವ ಆರ್ಥಿಕ ಹೊರೆ ಕಡಿಮೆ ಮಾಡಲು ದರ ಪರಿಷ್ಕರಣೆ ಮಾಡಲು ಮುಂದಾಗುತ್ತಿರುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಾರಿ ಇಂದಿರಾ ಕ್ಯಾಂಟೀನ್‌ಗೆ ಹೊಸದಾಗಿ ಟೆಂಡರ್ ಆಹ್ವಾನಿಸಿದ್ದು, ಹೊಸ ಗುತ್ತಿಗೆ ಜೊತೆಗೆ ಹೊಸ ದರ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ.

ಇಂದಿರಾ ಕ್ಯಾಂಟೀನ್‌ಗೆ ಊಟ ಸರಬರಾಜು ಮಾಡುವ ಗುತ್ತಿಗೆ ಪಡೆದ ಸಂಸ್ಥೆ ಒಂದು ಊಟಕ್ಕೆ ಸದ್ಯ 32 ರೂ. ಶುಲ್ಕ ಮಾಡುತ್ತಿದೆ. ಈ ಪೈಕಿ ಸರಕಾರ ಮತ್ತು ಬಿಬಿಎಂಪಿ 22 ರೂ. ಸಬ್ಸಿಡಿ ನೀಡುತ್ತಿದ್ದು, ಗ್ರಾಹಕರು 10 ರೂ. ನೀಡುತ್ತಿದ್ದಾರೆ. ಈಗ ಸರಕಾರ ಸಬ್ಸಿಡಿ ಹೊರೆ ಇಳಿಸುವುದಕ್ಕಾಗಿ ಬಿಬಿಎಂಪಿ ಹೊಸ ದರ ಜಾರಿಗೆ ತರಲು ಮುಂದಾಗಿದೆ.

ಇದರಿಂದ ರಾಜ್ಯ ಸರಕಾರಕ್ಕೆ ಬಹುತೇಕ ಸಬ್ಸಿಡಿ ಹೊರೆ ಕಡಿಮೆಯಾಗಲಿದೆ. ಕಳೆದ ಒಂದು ವರ್ಷದಿಂದ ಇಂದಿರಾ ಕ್ಯಾಂಟೀನ್‌ಗೆ ಸರಕಾರ ಅನುದಾನ ನೀಡಿಲ್ಲ. ಸಂಪೂರ್ಣವಾಗಿ ಬಿಬಿಎಂಪಿಯೇ ನಿರ್ವಹಣೆ ಮಾಡುತ್ತಿರುವುದರಿಂದ ಹೊರೆಯಾಗಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಇಂದಿರಾ ಕ್ಯಾಂಟೀನ್‌ಗೆ ಅನುದಾನ ನಿಗದಿ ಮಾಡಿದರೆ ದರ ಏರಿಕೆಯಾಗುವ ಸಾಧ್ಯತೆ ಇಲ್ಲ. ಸರಕಾರ ಅನುದಾನ ಒದಗಿಸದಿದ್ದರೆ ದರ ಏರಿಕೆ ಮಾಡುವುದು ಬಿಬಿಎಂಪಿಗೆ ಅನಿವಾರ್ಯವಾಗಲಿದೆ.

ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಇಂದಿರಾ ಕ್ಯಾಂಟೀನ್ ಮುಚ್ಚಬೇಕೆಂದು ಯೋಜನೆ ರೂಪಿಸುತ್ತಲೇ ಇದೆ. ಬಡವರ ಬಗ್ಗೆ ಕಾಳಜಿ ಇದ್ದರೆ ಊಟದ ಗುಣಮಟ್ಟ ಹೆಚ್ಚಿಸಲಿ. ಅದನ್ನು ಬಿಟ್ಟು ಬಡವರು ತಿನ್ನುವ ಅನ್ನದ ದರವನ್ನು ಹೆಚ್ಚಿಸುವುದು ಎಷ್ಟರಮಟ್ಟಿಗೆ ಸರಿ?
-ಅಬ್ದುಲ್ ವಾಜೀದ್, ಬಿಬಿಎಂಪಿ ಪ್ರತಿಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News