ಸಂಗೀತ, ಧರ್ಮ ಮತ್ತು ಅಭಿಪ್ರಾಯ ಸ್ವಾತಂತ್ರ್ಯ

Update: 2020-02-29 16:45 GMT

ಈ ದೇಶದ ಸಂಗೀತಗಾರರು ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ವೈವಿಧ್ಯ ಬೆಳೆಯಲು ನೀಡುತ್ತಿರುವ ಕೊಡುಗೆ ಅಸಾಮಾನ್ಯವಾದುದು. ಅವರನ್ನು ಅವರ ಹುಟ್ಟು ಧರ್ಮದ ಚೌಕಟ್ಟಿನೊಳಗೆ ಇಟ್ಟು ನೋಡುವುದು ಅಥವಾ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅವರು ತಮಗೆ ಅನ್ನಿಸಿದ್ದನ್ನು ಹೇಳಿದಾಗ ಅವರನ್ನು ಹೀಗಳೆಯುವುದು ಭಾರತೀಯ ಸಂಸ್ಕೃತಿಗೆ ದ್ರೋಹ ಬಗೆದಂತೆ.

ಈ ವರ್ಷದ ಆರಂಭದಲ್ಲಿ ಮಂಗಳೂರಿನ ಕರಾವಳಿ ಉತ್ಸವದ ಅಂಗವಾಗಿ ಕದ್ರಿ ಉದ್ಯಾನವನದಲ್ಲಿ ಜರುಗಿದ್ದ ಮೈಸೂರು ನಾಗರಾಜ ಮತ್ತು ಮಂಜುನಾಥರ ವಯಲಿನ್ ವಾದನವನ್ನು ಕೇಳುತ್ತಿದ್ದಂತೆ ಸಂಗೀತದ ವೈಶಿಷ್ಟಗಳ ಬಗ್ಗೆ ಏನೂ ಗೊತ್ತಿಲ್ಲದವನೂ ಅದನ್ನು ಮೆಚ್ಚಬಹುದು ಎಂಬ ಅನುಭವ ಮತ್ತೊಮ್ಮೆ ಆಯಿತು. ಅಷ್ಟು ಅದ್ಭುತವಾಗಿತ್ತು ಆ ಸಹೋದರರ ಸಂಗೀತ. ಅದರ ಜೊತೆಗೆ ಭಾರತೀಯ ಸಂಗೀತ ಕ್ಷೇತ್ರಕ್ಕೂ ಪ್ರವೇಶಿಸುತ್ತಿರುವ ಆಘಾತಕಾರಿ ಧ್ರುವೀಕರಣದ ಘಟನೆಗಳು ನೆನಪಾದವು. ಮೈಸೂರು ಸಹೋದರರು ಸದ್ಯಕ್ಕೆ ಯಾವುದೇ ವಿವಾದಕ್ಕೆ ಸಿಲುಕಿಲ್ಲ ಎಂಬುದು ಸಂತೋಷದ ವಿಷಯ. ಆದರೆ ಸಮಕಾಲೀನ ಬೆಳವಣಿಗೆಗಳ ಬಗ್ಗೆ ಅವರ ಅಭಿಪ್ರಾಯಗಳು ಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದ್ದರೆ ಅವರಿಗೆ ಉತ್ಸವಕ್ಕೆ ಆಮಂತ್ರಣ ಸಿಗುತ್ತಿತ್ತೇ ಎಂಬ ಜಿಜ್ಞಾಸೆ ಮೂಡಿತು.

 2018ರಲ್ಲಿ ಇಂದಿನ ಶ್ರೇಷ್ಠ ಕರ್ನಾಟಕ ಸಂಗೀತ ವಿದ್ವಾಂಸರಲ್ಲಿ ಒಬ್ಬರೆಂದು ಕೀರ್ತಿಗೆ ಬಾಜನರಾಗಿ ಮ್ಯಾಗ್ಸೆಸೆ ಪ್ರಶಸ್ತಿಯನ್ನು ತಮ್ಮ ಗರಿಗೇರಿಸಿದ ಟಿ.ಎಂ.ಕೃಷ್ಣರ ಪೂರ್ವನಿರ್ಧಾರಿತವಾಗಿದ್ದ ಎರಡು ಕಛೇರಿಗಳನ್ನು ಪ್ರಾಯೋಜಕರು ಕೊನೆ ಘಳಿಗೆಯಲ್ಲಿ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಈ ಪ್ರಶ್ನೆ ಪ್ರಸ್ತುತವಾಗುತ್ತದೆ. ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ (Airports Authority of India) ಪ್ರಾಯೋಜಕತ್ವದಲ್ಲಿ ಯುವಜನರಲ್ಲಿ ಭಾರತೀಯ ಸಂಸ್ಕೃತಿಯ ಕುರಿತಂತೆ ಅರಿವು ಮತ್ತು ಅಭಿಮಾನ ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡ ‘‘ಸ್ಪಿಕ್ ಮೆಕೇ’’  (SPICMACAY-Society for Promotion of Indian Classical Music and Culture Among Youth) ದಿಲ್ಲಿಯಲ್ಲಿ ಒಂದು ಕಛೇರಿಯನ್ನು ಆಯೋಜಿಸಿತ್ತು. ಕಾರ್ಯಕ್ರಮದ ಕೆಲವು ದಿನಗಳ ಹಿಂದೆ ಕೃಷ್ಣರು ಕರ್ನಾಟಕ ಶಾಸ್ತ್ರೀಯ ಸಂಗೀತದ ಕುರಿತಂತೆ ಇನ್ನೂ ರೂಢಿಯಲ್ಲಿರುವ ಕೆಲವು ಸಂಪ್ರದಾಯಗಳ ಬಗ್ಗೆ ಪ್ರಶ್ನಿಸಿದ್ದರು. ಯೇಸು ಹಾಗೂ ಅಲ್ಲಾರ ಕುರಿತು ಭಕ್ತಿಗೀತೆಗಳನ್ನು ಶಾಸ್ತ್ರೀಯವಾಗಿ ಹಾಡುವ ಸೂಚನೆಯನ್ನು ನೀಡಿದ್ದರು. ತಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಅತ್ಯಂತ ಕಟುವಾದ ಟೀಕೆಗಳು ಬಂದವು. ಅವರನ್ನು ಧರ್ಮದ್ರೋಹಿ, ನಗರ ನಕ್ಸಲೈಟ್ ಎಂದು ಹೀಗಳೆಯಲಾಯಿತು, ಅವರ ಅಸಾಮಾನ್ಯ ಸಾಧನೆ ನಗಣ್ಯವಾಯಿತು. ಕಾರ್ಯಕ್ರಮವನ್ನು ಸರಕಾರಿ ಸಂಸ್ಥೆಯೊಂದು ಆಯೋಜಿಸುವುದನ್ನು ಪ್ರಶ್ನಿಸಿ ಪ್ರಧಾನ ಮಂತ್ರಿಗೂ ಜಾಲತಾಣದಲ್ಲಿ ಸಂದೇಶವನ್ನು ರವಾನಿಸಲಾಯಿತು. ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು, ಕಲಾವಿದರಿಗೆ ತಿಳಿಸದೆ ಕಾರ್ಯಕ್ರಮವನ್ನು ರದ್ದುಗೊಳಿಸಿತು. ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹರು ಪ್ರಾಧಿಕಾರದ ಈ ವರ್ತನೆಯನ್ನು ಅನಾಗರಿಕ ಎಂದು ಬಣ್ಣಿಸಿದ್ದರು.

ಇದಕ್ಕೆ ಮೊದಲು ಅಮೆರಿಕದ ಮೇರಿಲ್ಯಾಂಡ್‌ನ ಒಂದು ಹಿಂದೂ ದೇವಾಲಯದಲ್ಲಿ ಅವರ ಕಛೇರಿ ನಿಗದಿಯಾಗಿತ್ತು. ಆದರೆ ಕಟ್ಟಾ ಹಿಂದೂಗಳ ಆಕ್ಷೇಪಕ್ಕೆ ಮಣಿದು ಪ್ರಾಯೋಜಕರು ಕಾರ್ಯಕ್ರಮವನ್ನು ರದ್ದುಪಡಿಸಿದ್ದರು. ಈ ಜನವರಿಯಲ್ಲಿ ಹಮ್ಮಿಕೊಂಡಿದ್ದ ಅವರ ಮೃದಂಗ ತಯಾರಕರ ಜೀವನದ ಕುರಿತಂತೆ ಬರೆದ ಪುಸ್ತಕ (‘‘ಸೆಬಾಸ್ಟಿಯನ್ ಆ್ಯಂಡ್ ಸನ್ಸ್’’) ಬಿಡುಗಡೆಯ ಕಾರ್ಯಕ್ರಮವನ್ನು ಚೆನ್ನೈಯ ಸಂಸ್ಥೆಯೊಂದು ರದ್ದುಗೊಳಿಸಿತು.

ಸಂಗೀತಕ್ಕೆ ಧರ್ಮ ಮತ್ತು ಅಧಿಕಾರಿಶಾಹಿಯ ಸೆರೆ ಬೇಕೇ?

ಸಂಗೀತದ ಉದ್ದೇಶ ಸಾಮಾನ್ಯ ಕೇಳುಗರನ್ನು ರಂಜಿಸುವುದು, ಪ್ರಾಜ್ಞ ಕೇಳುಗರನ್ನು ತಮ್ಮ ಪ್ರೌಢಿಮೆಯ ಮೂಲಕ ಬಾಹ್ಯಪ್ರಪಂಚದಿಂದ ಭಾವಲೋಕಕ್ಕೆ ಒಯ್ಯುವುದು. ಭಕ್ತಿಸಂಗೀತವಾದರೆ ತಾನು ಕಲ್ಪಿಸಿಕೊಂಡ ಭಗವಂತನನ್ನು ಸಂಗೀತದ ಮೂಲಕ ಆರಾಧಿಸುವುದೂ ಅವನ ಒಂದು ಉದ್ದೇಶವಾಗಿರಬಹುದು. ಆಗ ಕೇಳುಗರಲ್ಲಿಯೂ ಭಕ್ತಿಭಾವವನ್ನು ಉತ್ತೇಜಿಸುವ ಪ್ರಯತ್ನ ಕಲಾವಿದನು ಮಾಡುತ್ತಾನೆ. ಸಂಗೀತಕಾರನ ಧರ್ಮ ಮತ್ತು ಸಮಾಜದ ಆಗುಹೋಗುಗಳ ಬಗ್ಗೆ ಅವರ ಅಭಿಪ್ರಾಯ ಇಲ್ಲಿ ಗೌಣ.

ವಿಶ್ವವಿಖ್ಯಾತ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನರ ಜೀವನದ ಒಂದೆರಡು ಘಟನೆಗಳು ಈ ಸಂದರ್ಭದಲ್ಲಿ ನೆನಪಾಗುತ್ತವೆ. ಅನೇಕ ವರ್ಷಗಳ ಹಿಂದೆ ಹಿರಿಯ ಪತ್ರಕರ್ತ ಶೇಖರ ಗುಪ್ತ್ತಾರೊಡನೆ ನಡೆಸಿದ ಸಂಭಾಷಣೆಯಲ್ಲಿ ಖಾನರು ಒಂದು ಘಟನೆಯನ್ನು ಉಲ್ಲೇಖಿಸಿದ್ದರು. ಇರಾಕಿನ ವೌಲಾನಾ ಒಬ್ಬರು ಸಂಗೀತ ನುಡಿಸುವುದು ಧರ್ಮಬಾಹಿರ ಎಂದಾಗ ಆ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸುತ್ತಾ ಖಾನ್ ಸಾಹೇಬರು ಹೇಳಿದರು: ‘‘ನೀವು ನ್ಯಾಯಪಕ್ಷಪಾತಿಯಾಗಿರಬೇಕು; ನನ್ನ ಸಂಗೀತವನ್ನು ಕೇಳಿ ಮತ್ತೆ ಹೇಳಿ ಎಂದೆ. ಕಛೇರಿಯ ಬಳಿಕ ಅವರಿಗೆ ನನ್ನ ಸಂಗೀತದಲ್ಲಿ ಧರ್ಮದ್ರೋಹದ ಅಂಶ ಏನಿದೆ ಎಂದು ಕೇಳಿದಾಗ ವೌಲಾನಾ ಅವರು ನಿರುತ್ತರರಾದರು. ಇನ್ನು ಮುಂದೆ ನೀವು ಈ ತರದ ತಪ್ಪುಗಳನ್ನು ಮಾಡಬಾರದು, ಎಂದು ಅವರಿಗೆ ಸಲಹೆ ನೀಡಿದೆ. ಬಿಸ್ಮಿಲ್ಲಾ ಖಾನರು ಅವರ ಗುರುಗಳಂತೆಯೇ ಕಾಶಿಯ ವಿಶ್ವನಾಥನ ಭಕ್ತರು. ಸ್ವಾತಂತ್ರದ ಬೆನ್ನಿನಲ್ಲೇ ದೇಶವು ಧರ್ಮದ ಆಧಾರದಲ್ಲಿ ವಿಭಜನೆಯಾದಾಗ ಪಾಕಿಸ್ತಾನಕ್ಕೆ ಹೋಗದೆ ವಿಶ್ವನಾಥನಿರುವಲ್ಲಿಯೇ ತಾನಿರುತ್ತೇನೆ ಎಂದ ಮಹಾ ಚೇತನ ಅವರು. 1947ರ ಅಗಸ್ಟ್ 15ರಂದು ದಿಲ್ಲಿಯ ಕೆಂಪುಕೋಟೆಯಲ್ಲಿ ನಡೆದ ಸಂಭ್ರಮದ ಸಂದರ್ಭದಲ್ಲಿ ಪ್ರಧಾನಿ ನೆಹರೂ ಅವರೇ ಬಿಸ್ಮಿಲ್ಲಾ ಖಾನರನ್ನು ಶಹನಾಯಿ ನುಡಿಸಲು ವಿನಂತಿಸಿದ್ದು ಖಾನರ ಹಾಗೂ ನೆಹರೂ ಅವರ ಭಾರತೀಯತೆಯ ಕಲ್ಪನೆಗೆ ಸಾಕ್ಷಿ. 1974ರಲ್ಲಿ ಮುಂಬೈ ಮಹಾನಗರದಲ್ಲಿ ಅವರ ಒಂದು ಕಛೇರಿಗೆ ನಾನು ಹೋಗುವ ಅವಕಾಶ ಲಭಿಸಿತ್ತು. ಸಂಗೀತ ಪ್ರೇಮಿಗಳ ಅದ್ಭುತ ಜಾತ್ರೆಯನ್ನು ಖಾನ್ ಸಾಹೇಬರು ಕೇಳುಗರೊಂದಿಗೆ ಮುಕ್ತವಾಗಿ ಸಂವಹಿಸುವುದನ್ನು ನೋಡಿ ವಿಸ್ಮಯ ಪಟ್ಟಿದ್ದೆ. 1990ರ ದಶಕದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ಪಿಕ್ ಮೆಕೇ ಆಯೋಜಿಸಿದ್ದ ಶೇಖ್ ಚಿನ್ನ ವೌಲಾನಾ ಸಾಹೇಬರ ನಾಗಸ್ವರ ವಾದನ ಕಛೇರಿಗೆ ಹೋಗಿದ್ದೆ, ಅವರ ರಮ್ಯ ಸಂಗೀತದಲ್ಲಿ ಮುಳುಗಿದವನಿಗೆ ಅವರ ಧರ್ಮ ಗೌಣವಾಗಿತ್ತು. ಆದರೂ ಕುತೂಹಲಕ್ಕಾಗಿ ಅವರಿಗೆ ಒಂದು ಪ್ರಶ್ನೆ ಕೇಳಿದೆ. ‘‘ನೀವು ಶ್ರೀರಂಗಂ ದೇವಸ್ಥಾನದಲ್ಲಿ ನಾಗಸ್ವರ ನುಡಿಸುವುದಕ್ಕೆ ನಿಮ್ಮ ಧರ್ಮೀಯರ ಆಕ್ಷೇಪವಿಲ್ಲವೇ?’’ ‘‘ಸಂಗೀತಕ್ಕೆ ಧರ್ಮದ ಸೋಂಕಿಲ್ಲ, ದೇವರೆಲ್ಲಾ ಒಬ್ಬನೇ ಅಲ್ಲವೇ?’’ ಎಂಬ ಉತ್ತರ ಕೇಳಿ ಹೆಮ್ಮೆ ಪಟ್ಟುಕೊಂಡೆ. ಅವರ ಮೊಮ್ಮಕ್ಕಳಾದ ಕಾಸಿಮ್ ಮತ್ತು ಸುಬಾನ್ ಅದೇ ಪರಂಪರೆಯನ್ನು ಮುಂದುವರಿಸಿದ್ದಾರೆ. ಹೊಸ ತಲೆಮಾರಿನ ಅವರ ಪ್ರಕಾರವೂ ಹಾಡಲು ದೇವಸ್ಥಾನ, ಮಸೀದಿ ಅಥವಾ ಇಗರ್ಜಿ ಎಲ್ಲವೂ ಒಂದೇ. ತನಗೆೆ ಒಂಬತ್ತು ವರ್ಷವಾಗಿದ್ದಾಗ, ಆಂಧ್ರದಿಂದ ತಮಿಳ್ನಾಡಿನ ಶ್ರೀರಂಗಂಗೆ ವಲಸೆ ಬರುವ ಸನ್ನಿವೇಶದಲ್ಲಿ ರಂಗನಾಥ ಸ್ವಾಮಿಯೇ ಅವರನ್ನು ಶ್ರೀರಂಗಂಗೆ ಕರೆಸಿಕೊಂಡ ಎಂದು ಅಜ್ಜ ಹೇಳುತ್ತಿದ್ದ ಮಾತನ್ನು ಕಾಸಿಮರು ಒಂದು ಸಂದರ್ಭದಲ್ಲಿ ಹೇಳಿದ್ದರು. ಇಡೀ ಕುಟುಂಬಕ್ಕೆ ತ್ಯಾಗರಾಜರೇ ಆರಾಧ್ಯ ದೈವ. ಶ್ರೀರಂಗಂನಲ್ಲಿ ಚಿನ್ನ ವೌಲಾನಾ ಸಾಹೇಬರು ಆರಂಭಿಸಿದ ‘‘ಶಾರದಾ ನಾದಸ್ವರ ಸಂಗೀತ ಆಶ್ರಮ’’, ಕಲೆ ಧರ್ಮದ ಚೌಕಟ್ಟನ್ನು ಮೀರಿ ನಿಲ್ಲುತ್ತದೆ ಎಂಬುದಕ್ಕೆ ಒಂದು ಜ್ವಲಂತ ಉದಾಹರಣೆ.

1980ರ ದಶಕದಲ್ಲಿ ಆಕಾಶವಾಣಿಯಲ್ಲಿ ಆಗಾಗ ಪ್ರಸಾರವಾಗುತ್ತಿದ್ದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ನಾನು ತಪ್ಪದೆ ಕೇಳುತ್ತಿದ್ದ ಭಜನೆ ಬೇಗಂ ಪರ್ವೀನ್ ಸುಲ್ತಾನಾ ಅವರದು. ಅವರ ಮಧುರ ಕಂಠ ಮತ್ತು ಭಜನೆಗಳಲ್ಲಿ ತುಂಬುವ ಭಾವಪೂರ್ಣತೆ ಅವರ ಸಂಗೀತವನ್ನು ಮತ್ತೆ ಮತ್ತೆ ಕೇಳುವಂತೆ ಮಾಡುತ್ತಿದ್ದವು. ಮಹಿಷಾಸುರ ಮರ್ದಿನಿಯ ಕುರಿತಂತೆ ಅವರು ಹಾಡುತ್ತಿದ್ದ ‘‘ಭವಾನಿ ದಯಾನಿ’’ ಎಂಬ ಭಜನೆ ಇಂದಿಗೂ ನೆನಪಿಗೆ ಬರುತ್ತದೆ.

ಭಾವೈಕ್ಯದ ಪರಾಕಾಷ್ಠೆಯನ್ನು ಆ ಕಾಲದ ಜನಪ್ರಿಯ ಸಿನೆಮಾ ‘‘ಬೈಜು ಬಾವ್ರಾ’’ದಲ್ಲಿ ನಾನು ಕಂಡೆ. ಯಾವತ್ತೂ ಉರ್ದುವಿನಲ್ಲಿಯೇ ಹಾಡುಗಳನ್ನು ಬರೆಯುವ ಕವಿ ಶಕೀಲ್ ಬದಾಯುನಿ ಅವರು, ಸಂಗೀತ ನಿರ್ದೇಶಕ ನೌಷಾದರ ವಿನಂತಿಯಂತೆ ಹಿಂದಿಯಲ್ಲಿಯೇ ರಚಿಸಿದ ಅತ್ಯಂತ ಅರ್ಥಗರ್ಭಿತ ಮತ್ತು ಭಾವಪೂರ್ಣವಾದ ಹಾಡು ಮನ ತಡಪತ ಹರಿದರುಶನ ಕೇಲಿಯೇ ಆಜ್.. ಮುಹಮ್ಮದ್ ರಫಿಯವರ ಕಂಠದಲ್ಲಿ ಶಾಸ್ತ್ರೀಯ ಧಾಟಿಯಲ್ಲಿ ಮೂಡಿಬಂತು. ಹರಿಯ ದರ್ಶನಕ್ಕೆ ಕಾತರ ಪಡುವ ಭಕ್ತನ ಭಾವಪರವಶತೆಯನ್ನು ಹಾಡು, ಸಂಗೀತ ಮತ್ತು ಸ್ವರದ ಮೂಲಕ ಮೂವರು ಮಹಾನ್ ಕಲಾವಿದರು ಪ್ರೇಕ್ಷಕರಿಗೆ ಕುಡಿಸಿದ್ದರು ಆಗ ಕಲಾಕಾರರಿಗಾಗಲೀ, ರಸಿಕರಿಗಾಗಲೀ ಪರಸ್ಪರರ ಧರ್ಮ ಅಡ್ಡಿ ಬರಲಿಲ್ಲ. ಅವರ ಹಾಡುಗಳನ್ನೂ 1970ರ ದಶಕದಲ್ಲಿ ಆಕಾಶವಾಣಿಯಲ್ಲಿ ಪ್ರಸಾರಮಾಡಿದ್ದು ಸಂಗೀತ ಪ್ರೇಮಿಗಳಿಗೆ ಅಪ್ರತಿಮ ವಿದೇಶಿ ಕಲಾವಿದನ ಸ್ವರದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಸವಿಯಲು ಅವಕಾಶ ಮಾಡಿಕೊಟ್ಟಂತಾಗಿತ್ತು. ಅಂದು ನಾನು ಕೇಳುತ್ತಿದ್ದ ಅವರ ‘‘ಕೃಷ್ಣಾ ನೀ ಬೇಗನೆ ಬಾರೊ..’’ ಇಂದಿಗೂ ನೆನಪಾಗುತ್ತದೆ.

ಕೇರಳದ ಯೇಸುದಾಸರು ಹುಟ್ಟಾ ಕ್ರಿಶ್ಚಿಯನ್‌ರಾದರೂ, ಇಂದಿಗೂ ಗುರುವಾಯೂರು ಮತ್ತು ಕೊಲ್ಲೂರು ದೇವಾಲಯಗಳಲ್ಲಿ ವರ್ಷಕ್ಕೊಮ್ಮೆಯಾದರೂ ಭಕ್ತಿಗೀತೆಗಳನ್ನು ಹಾಡಿ ಹಿಂದೂ ದೇವರನ್ನು ಆರಾಧಿಸುತ್ತಾರೆ. ಅನ್ಯಧರ್ಮೀಯರಾದುದರಿಂದ ಅವರಿಗೆ ಗುರುವಾಯೂರು ದೇವಸ್ಥಾನದ ಒಳಗೆ ಪ್ರವೇಶವಿಲ್ಲದಿದ್ದರೂ ಹೊರಗಿದ್ದೇ ಹಾಡುಗಳ ಮೂಲಕ ಗೋಪಾಲಕೃಷ್ಣನನ್ನು ಭಜಿಸುತ್ತಾರೆ. ಅಷ್ಟೇ ಅಲ್ಲ, ಶಬರಿಮಲೆಯ ಅಯ್ಯಪ್ಪನ ಬಗ್ಗೆ ಅವರು ಹಾಡಿದ ‘‘ಹರಿವರಾಸನಂ..’’ ಇಂದಿಗೂ ಭಕ್ತರ ಮನಸ್ಸಿನಲ್ಲಿ ಸಂಚಲನವನ್ನು ಉಂಟುಮಾಡುತ್ತದೆ.

ಕರ್ನಾಟಕದವರೇ ಆದ ಪಯಾಝ್ ಖಾನರ ದಾಸವಾಣಿ ದೇಶದ ಅವಿಚ್ಛಿನ್ನವಾದ ಸಂಗೀತಪರಂಪರೆಗೆ ಇನ್ನೊಂದು ಉದಾಹರಣೆ. ಅವರು ಹಾಡಿದ ‘‘ಕರುಣಿಸೊ ರಂಗ’’, ‘‘ಕಲಿಯುಗದಲಿ ಹರಿ ನಾಮವ ನೆನೆದರೆ’’ ಮುಂತಾದ ಪದಗಳು ಕೇಳುಗರನ್ನು ಮೈಮರೆಯುವಂತೆ ಮಾಡುತ್ತವೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ರಾಗಸಂಯೋಜಕರೆಂದು ಖ್ಯಾತಿವೆತ್ತ ಎ.ಆರ್.ರೆಹಮಾನ್‌ರನ್ನು ಯಾವ ಸಂಗೀತಪ್ರೇಮಿಯೂ ಮುಸಲ್ಮಾನರೆಂದು ನೋಡಲಿಲ್ಲ; ಭಾರತದ ಸಂಗೀತಪರಂಪರೆಯ ಅನನ್ಯತೆಗೆ ರೆಹಮಾನರ ಕೊಡುಗೆ ಅಪಾರವಾದುದು.

ಈ ದೇಶದ ಸಂಗೀತಗಾರರು ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ವೈವಿದ್ಯ ಬೆಳೆಯಲು ನೀಡುತ್ತಿರುವ ಕೊಡುಗೆ ಅಸಾಮಾನ್ಯವಾದುದು. ಅವರನ್ನು ಅವರ ಹುಟ್ಟು ಧರ್ಮದ ಚೌಕಟ್ಟಿನೊಳಗೆ ಇಟ್ಟು ನೋಡುವುದು ಅಥವಾ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅವರು ತಮಗೆ ಅನ್ನಿಸಿದ್ದನ್ನು ಹೇಳಿದಾಗ ಅವರನ್ನು ಹೀಗಳೆಯುವುದು ಭಾರತೀಯ ಸಂಸ್ಕೃತಿಗೆ ದ್ರೋಹ ಬಗೆದಂತೆ. ಹಿಂದೂ ಕಲಾವಿದರು ಯೇಸುವಿನ ಮತ್ತು ಅಲ್ಲಾನ ಭಜನೆಯನ್ನು ಹಾಡುವುದು ಮತ್ತು ಅನ್ಯಧರ್ಮೀಯ ಸಂಗೀತಕಾರರು ಹಿಂದೂ ದೇವರ ಕುರಿತಾದ ಹಾಡುಗಳನ್ನು ಹಾಡುವುದು, ಅವುಗಳಿಗೆ ರಾಗಸಂಯೋಜಿಸುವುದು ಶತಮಾನಗಳಿಂದ ಆಚರಿಸಿಕೊಂಡು ಬಂದಿರುವ ನಮ್ಮ ದೇಶದ ಸರ್ವಧರ್ಮ ಸಮಭಾವದ ಪ್ರತೀಕ.

Writer - ಟಿ.ಆರ್ ಭಟ್

contributor

Editor - ಟಿ.ಆರ್ ಭಟ್

contributor

Similar News