ಇಂದಿರಾ ಕ್ಯಾಂಟೀನ್ ಬೆಲೆ ಏರಿಕೆ ಬಡಜನತೆಯ ಮೇಲಿನ ಬರೆ: ಎಎಪಿ

Update: 2020-02-29 17:53 GMT

ಬೆಂಗಳೂರು, ಫೆ.29: ದೇಶದ ಬಡ ಜನತೆಯ ಮಹತ್ವದ ಆಹಾರ ಭದ್ರತಾ ಕಾಯ್ದೆಯ ಇಂದಿರಾ ಕ್ಯಾಂಟೀನ್ ಯೋಜನೆಗಾಗಿ ರಾಜ್ಯ ಸರಕಾರವು ಪ್ರತಿ ವರ್ಷ ನೀಡುವ ನೂರು ಕೋಟಿ ರೂ.ಗಳನ್ನು ಎರಡು ವರ್ಷಗಳಿಂದ ಬಿಡುಗಡೆ ಮಾಡದೆ ಸತಾಯಿಸಿ ಕೊಂಡು ಬಂದಿದೆ ಎಂದು ಆಮ್ ಆದ್ಮಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಆರೋಪಿಸಿದ್ದಾರೆ.

ಮಹಾನಗರ ಪಾಲಿಕೆಯೂ ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗಲು ನಮ್ಮಲ್ಲಿ ಆರ್ಥಿಕ ಕೊರತೆ ಇದೆ ಎಂಬ ಸಬೂಬು ಹೇಳಿಕೊಂಡು ಬಂದಿದೆ. ಇಂದು ಇಂದಿರಾ ಕ್ಯಾಂಟೀನುಗಳಲ್ಲಿ ಬಡಜನತೆ ಇರಲಿ ಯಾವ ಪ್ರಾಣಿ ಪಕ್ಷಿಗಳು ತಿನ್ನಲು ಆಗದಷ್ಟು ಕಳಪೆ ಆಹಾರ ಗುಣಮಟ್ಟಕ್ಕೆ ಕುಸಿದಿರುವುದು, ಆಳುವ ಸರಕಾರಗಳಿಗೆ ಬಡ ಜನತೆಯ ಮೇಲಿನ ಅಸಡ್ಡೆ ಹಾಗೂ ನಿರಾಸಕ್ತಿಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನ ಬಡವರ ಹಸಿವನ್ನು ನೀಗಿಸಲು ಲಕ್ಷಾಂತರ ಕೋಟಿ ರೂ.ಗಳನ್ನು ತೆರಿಗೆ ಮೂಲಕ ಸಂಗ್ರಹಿಸುವ, 2.5 ಲಕ್ಷ ಕೋಟಿ ರೂ.ಗೂ ಹೆಚ್ಚು ಬಜೆಟ್ ಮಂಡಿಸುವ ಸರಕಾರಗಳಿಗೆ ಕೇವಲ ನೂರು ಕೋಟಿ ರೂ.ಗಳನ್ನು ಬಡ ಜನತೆಯ ಹಸಿವನ್ನು ನೀಗಿಸುವ ಈ ಮಹತ್ವದ ಆಹಾರ ಯೋಜನೆಗೆ ಖರ್ಚು ಮಾಡಲಾರದಷ್ಟು ಪಾಲಿಕೆ ಹಾಗೂ ಸರಕಾರಗಳು ದಿವಾಳಿಯಾಗಿವೆಯೆ ಎಂಬ ಭಾವನೆ ಬೆಂಗಳೂರಿಗರಿಗೆ ಮೂಡುತ್ತಿದೆ ಎಂದು ಜಗದೀಶ್ ತಿಳಿಸಿದ್ದಾರೆ.

ಇದರ ಜೊತೆಗೆ ಇದೀಗ ಬೆಳಗಿನ ಉಪಾಹಾರವನ್ನು 5 ರೂ. ಗಳಿಂದ 10 ರೂ.ಗಳಿಗೆ ಹಾಗೂ ಮಧ್ಯಾಹ್ನದ ಊಟವನ್ನು 10.ರೂಗಳಿಂದ 15 ರೂ.ಗಳಿಗೆ ಹೆಚ್ಚಿಸಲು ಹೊರಟಿರುವುದು ಇವರ ಮತಿಹೀನ ಹಾಗೂ ಅಂಧಾದುಂದಿ ಆಡಳಿತಕ್ಕೆ ಹಿಡಿದ ಕನ್ನಡಿಯಂತಿದೆ ಎಂದು ಅವರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನಿನ ಆಹಾರಗಳ ಬೆಲೆಗಳನ್ನು ಹೆಚ್ಚಿಸದೆ, ಉತ್ತಮ ಗುಣಮಟ್ಟದ ಆಹಾರ ಪೂರೈಸುವಲ್ಲಿ ಸರಕಾರವು ಗಮನ ನೀಡಬೇಕು ಹಾಗೂ ಆರ್ಥಿಕ ಹೊರೆ ಎಂಬ ಪೊಳ್ಳು ನೆಪವನ್ನು ತೆಗೆದು ಹಾಕಿ ಬೆಂಗಳೂರಿಗರ ಕೆಂಗಣ್ಣಿಗೆ ಗುರಿಯಾಗದೆ, ಬಡವರ ಪಾಲಿನ ಅನ್ನಪೂರ್ಣೇಶ್ವರಿಯಂತೆ ಇಂದಿರಾ ಕ್ಯಾಂಟೀನ್‌ಗಳನ್ನು ಮಾರ್ಪಾಡು ಮಾಡುವ ಅಗತ್ಯತೆ ಹೆಚ್ಚಿದೆ ಎಂದು ರಾಜ್ಯ ಸರಕಾರಕ್ಕೆ ಜಗದೀಶ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News