ಬೆಂಗಳೂರು: ಉಪಸಮಿತಿ ರಚಿಸಲು ಮೇಯರ್‌ಗೆ ಏನು ಅಧಿಕಾರವಿದೆ?

Update: 2020-02-29 18:06 GMT

ಬೆಂಗಳೂರು, ಫೆ.29: ಕಸದ ವಿಲೇವಾರಿಗಾಗಿ ಟೆಂಡರ್ ಕರೆಯಲು ರಚಿಸಲಾಗಿದ್ದ ಉಪಸಮಿತಿಗಳನ್ನು ಹಿಂದಿನ ರಾಜ್ಯ ಸರಕಾರ ರದ್ದುಗೊಳಿಸಿರುವ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ, ಬಿಜೆಪಿ ಸದಸ್ಯ ಉಮೇಶ್ ಶೆಟ್ಟಿ, ಉಪಸಮಿತಿ ರಚಿಸಲು ಮೇಯರ್‌ಗೆ ಏನು ಅಧಿಕಾರವಿದೆ ಎಂದು ಪ್ರಶ್ನಿಸಿದರು. ಇದನ್ನು ಖಂಡಿಸಿದ ವಿರೋಧ ಪಕ್ಷದ ಸದಸ್ಯರು, ಉಮೇಶ್ ಶೆಟ್ಟಿ ಮೇಯರ್ ಘನತೆಗೆ ಕುಂದು ತರುವಂತೆ ವರ್ತಿಸಿದ್ದಾರೆ. ಆ ಸ್ಥಾನಕ್ಕೆ ಅಗೌರವ ತೋರಿಸಿದ್ದಾರೆ. ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಮೇಯರ್‌ಗೆ ಅಧಿಕಾರವಿದೆಯೇ ಎಂದು ಅವರು ಕೇಳಿದರೆ ವಿನಃ, ಪ್ರಶ್ನಿಸಲಿಲ್ಲ. ಅವರು ಯಾವುದೇ ಅಗೌರವ ತೋರಲಿಲ್ಲ ಎಂದು ಮೇಯರ್ ಹೇಳಿದರೂ, ಪ್ರತಿಪಕ್ಷ ಸದಸ್ಯರು ಪಟ್ಟು ಸಡಿಲಿಸಲಿಲ್ಲ. ಸಭೆಯನ್ನು ಹದಿನೈದು ನಿಮಿಷ ಮುಂದೂಡಿದ ನಂತರವೂ ಗಲಾಟೆ ಮುಂದುವರಿಯಿತು.
ಉಪಸಮಿತಿಯನ್ನು ಆಗ ರದ್ದುಗೊಳಿಸಿದ್ದು ಏಕೆ, ಯಾರು ಸರಕಾರಕ್ಕೆ ಪತ್ರ ಬರೆದಿದ್ದರು ಎಂಬ ಬಗ್ಗೆ ಕಡತ ತರಿಸಿ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು. ಉಮೇಶ್ ಶೆಟ್ಟಿ ಮಾತನಾಡಿರುವುದು ತಪ್ಪು ಎಂದಾದರೆ ಅವರ ಮಾತುಗಳನ್ನು ಕಡತದಿಂದ ತೆಗೆಸಲಾಗುವುದು ಎಂದು ಮೇಯರ್ ಹೇಳಿದರು. ನಂತರ ಸಹ ಕಸದ ಸಮಸ್ಯೆ ಸೇರಿದಂತೆ ಯಾವುದೇ ವಿಷಯಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿಲ್ಲ.

ಕುಡಿಯುವ ನೀರಿನ ಯೋಜನೆ ಕಾಮಗಾರಿ ಚುರುಕುಗೊಳಿಸಿ: ಬೇಸಿಗೆಗೂ ಮುನ್ನವೇ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನಗರದ ಹೊರವಲಯದಲ್ಲಿ ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಕೆಲವು ಕಡೆ ಜಲಮಂಡಳಿಯು ಪೈಪ್‌ಲೈನ್ ಅಳವಡಿಸಿದ್ದರೂ ನೀರು ಸಂಪರ್ಕ ಕಲ್ಪಿಸಿಲ್ಲ. 110 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಚುರುಕುಗೊಳಿಸಬೇಕು. ಈ ಬಗ್ಗೆ ಚರ್ಚಿಸಲು ಜಲಮಂಡಳಿಯ ಅಧ್ಯಕ್ಷರನ್ನು ಮುಂದಿನ ಸಭೆಗೆ ಕರೆಸಬೇಕು ಎಂದು ಆಡಳಿತ ಪಕ್ಷದ ನಾಯಕ ಕೆ.ಎ. ಮುನೀಂದ್ರಕುಮಾರ್ ಆಗ್ರಹಿಸಿದರು.

ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಅನುದಾನದಡಿ ಪಾಲಿಕೆ ವ್ಯಾಪ್ತಿಯ ರಸ್ತೆಗಳಿಗೆ ವೈಟ್ ಟಾಪಿಂಗ್ ಕಾಮಗಾರಿ ಹೆಸರಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಆರ್.ಆರ್.ದೊಡ್ಡಿಹಾಳ್ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯನ್ನು ಸಭೆಯಲ್ಲಿ ಮಂಡಿಸಬೇಕು ಎಂದು ಪ್ರತಿಪಕ್ಷಗಳ ಸದಸ್ಯರು ಒತ್ತಾಯಿಸಿದರು.

ಕ್ವೀನ್ಸ್ ರೋಡ್‌ಗೆ ಜಾಫರ್ ಷರೀಫ್ ಹೆಸರು: ಕ್ವೀನ್ಸ್ ರಸ್ತೆಗೆ ಮಾಜಿ ಸಚಿವ ಜಾಫರ್ ಷರೀಫ್ ಹೆಸರು, ಅನುಭವ ನಗರದ ಉದ್ಯಾನಕ್ಕೆ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಹೆಸರಿಡಲು, ವಿದ್ಯಾರಣ್ಯಪುರದ ನಂಜಪ್ಪ ವೃತ್ತದಲ್ಲಿ ವಿದ್ಯಾರಣ್ಯರ ಪ್ರತಿಮೆ ಸ್ಥಾಪನೆ, ಅಬ್ಬಿಗೆರೆಯ ರಾಜಶೇಖರ್ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಸ್ಥಾಪನೆ, ಮಲ್ಲೇಶ್ವರ ವ್ಯಾಪ್ತಿಯ ಮತ್ತಿಕೆರೆ ಹಾಗೂ ಯಶವಂತಪುರ ಮಾರುಕಟ್ಟೆ ರಸ್ತೆ ಸೇರುವ ವೃತ್ತಕ್ಕೆ ಮಾಜಿ ಪ್ರಧಾನಿ ರಾಜೀವ ವೃತ್ತ ಎಂದು, ಸಂಜಯ ನಗರದ ದೇನಾ ಬ್ಯಾಂಕ್ ಪಕ್ಕದ ರಸ್ತೆಗೆ ಕನ್ನಿಕಾಪರಮೇಶ್ವರಿ ಹಾಗೂ ಶ್ರೀ ರಾಮದೇವರ ದೇವಾಲಯ ರಸ್ತೆ, ರಾಜಾಜಿ ನಗರ 2ನೇ ಹಂತದ ಬ್ಲಾಕ್‌ನ 5ನೇ ಮುಖ್ಯ ರಸ್ತೆಗೆ ಸೋಸಲೆ ನಾರಾಯಣದಾಸ್ ರಸ್ತೆ ಎಂದು, ಟ್ರಿಪ್ಲಿಕನ್ ರಸ್ತೆಗೆ ದೀನ್ ದಯಾಳ್ ನಾಯ್ಡು ರಸ್ತೆ, ವಾರ್ಡ್ 46ರ ಬಿಡಿಎ ಸಂಕಿರ್ಣ ವೃತ್ತದಿಂದ 6ನೇ ಅಡ್ಡರಸ್ತೆಗೆ ಶ್ರೀ ಚಂದ್ರಶೇಖರ ಸ್ವಾಮೀಜಿ ಹೆಸರಿಡುವುದು, ಸೇರಿದಂತೆ ನಗರದ ಹತ್ತಾರು ರಸ್ತೆ, ವೃತ್ತಗಳ ಹೆಸರು ಬದಲಿಸಲು ಸರ್ವಾನುಮತದಿಂದ ಅಂಗೀಕರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News