ಪೆಡಂಭೂತಗಳು ಜೀವಂತವಾಗಿದ್ದರೆ ಏನಾಗುತ್ತಿತ್ತು!

Update: 2020-02-29 18:57 GMT

ಸಾನ್ವಿ ಮತ್ತು ಶಿವು ಕಾರಿನಲ್ಲಿ ಅಪ್ಪ ಅಮ್ಮನ ಜೊತೆ ರಜೆಗೆಂದು ಬೆಂಗಳೂರಿಗೆ ಹೊರಟಿದ್ದಾರೆ. ಬೆಂಗಳೂರು ನಗರಕ್ಕೆ ಕಾರು ಬರುತ್ತಿದ್ದಂತೆ ಟ್ರಾಫಿಕ್ ಜಾಮ್ ಆಯಿತು. ವೀಕೆಂಡ್ ಆಗಿದ್ದರಿಂದ ವಾಹನ ದಟ್ಟಣೆ ಇದೆಯೆಂದು ಕಾರಿನಲ್ಲಿಯೇ ಕುಳಿತರು. ಸ್ವಲ್ಪ ಸಮಯದ ನಂತರ ಇದ್ದಕ್ಕಿದ್ದಂತೆ ಜನರೆಲ್ಲಾ ಚೀರಾಡುತ್ತಾ ಎಲ್ಲೆಂದರಲ್ಲಿ ಓಡತೊಡಗಿದರು. ಏನಾಯ್ತು ಎಂದು ಹೇಳುವವರಿಲ್ಲ. ಎಲ್ಲರೂ ಗಾಬರಿಯಲ್ಲಿ ಜೀವಭಯದಿಂದ ಓಡುತ್ತಿದ್ದಾರೆ. ಮುಂದಿನ ಕೆಲವು ವಾಹನಗಳು, ಅದರಲ್ಲಿನ ಜನರು ಗಾಳಿಯಲ್ಲಿ ತೂರಾಡುತ್ತಿರುವುದು ಕಾಣುತ್ತಿದೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಭಾರೀ ಗಾತ್ರದ ಪ್ರಾಣಿಗಳು ಸಾನ್ವಿ ಮತ್ತು ಶಿವು ಇರುವ ಕಾರಿನಲ್ಲಿ ಬರುತ್ತಿವೆ. ಅವು ಏನೆಂದು ತಿಳಿಯುವಾಸೆ ಸಾನ್ವಿ ಮತ್ತು ಶಿವು ಅವರಿಗೆ. ಆದರೆ ಎತ್ತ ಹೋಗಬೇಕೆಂದು ತಿಳಿಯದೇ ಜೀವ ಉಳಿಸಿಕೊಳ್ಳಬೇಕೆಂದು ತಂದೆ ಮತ್ತು ತಾಯಿ ಇಬ್ಬರೂ ಮಕ್ಕಳ ಕೈಹಿಡಿದುಕೊಂಡು ಕಾರಿನಿಂದ ಇಳಿದು ಓಡುತ್ತಿದ್ದಾರೆ. ಇವರಷ್ಟೇ ಅಲ್ಲ, ಅಲ್ಲಿದ್ದ ಎಲ್ಲರೂ ಓಡುತ್ತಿದ್ದಾರೆ. ಜನರ ಚೀರಾಟ, ಕೂಗಾಟ ಆಕ್ರಂದನ ಮುಗಿಲು ಮುಟ್ಟಿದೆ. ಕೆಲವರು ಕಾಲ್ತುಳಿತಕ್ಕೆ ಸಿಕ್ಕಿಹಾಕಿಕೊಂಡು ತತ್ತರಿಸಿ ಹೋಗಿದ್ದಾರೆ. ಅಲ್ಲಿ ಏನಾಗುತ್ತಿದೆ ಎಂದು ಯಾರಿಗೂ ತಿಳಿದಿಲ್ಲ. ಸಾನ್ವಿ ಮತ್ತು ಶಿವು ಅವರು ತಂದೆ ತಾಯಿಯೊಂದಿಗೆ ಓಡಿ ಹೋಗಿ ಹತ್ತಿರದಲ್ಲಿದ್ದ ಮೆಟ್ರೋ ರೈಲು ನಿಲ್ದಾಣ ಏರಿದರು. ಮೇಲೆ ನಿಂತು ಭಯ ಮತ್ತು ಕಾತುರತೆಯಿಂದ ಅಲ್ಲೇನಾಗುತ್ತಿದೆ ಎಂದು ನೋಡುತ್ತಿದ್ದರೆ. ಬೃಹತ್ ಗಾತ್ರದ ಡೈನೋಸರ್‌ಗಳು ಅಲ್ಲಿದ್ದ ಜನರನ್ನು ಹಾಗೂ ವಾಹನಗಳನ್ನು ಮನಸ್ಸಿಗೆ ಬಂದಂತೆ ಎತ್ತಿ ಬಿಸಾಕುತ್ತಿವೆ. ಕೈಗೆ ಸಿಕ್ಕ ಮಾನವರನ್ನೆಲ್ಲಾ ಬಾಳೆಹಣ್ಣು ನುಂಗುವಂತೆ ನುಂಗುತ್ತಿವೆ. ಸಾನ್ವಿ ಮತ್ತು ಶಿವು ಈ ದೃಶ್ಯವನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ. ಇದು ಯಾವುದೋ ಹಾರರ್ ಅಥವಾ ಹಾಲಿವುಡ್ ಸಿನೆಮಾದ ದೃಶ್ಯವಲ್ಲ. ಒಂದು ವೇಳೆ ಪೆಡಂಭೂತಗಳು ಬದುಕಿದ್ದರೆ ಏನಾಗುತ್ತಿತ್ತು ಎಂಬುದರ ಕಲ್ಪನೆ ಮಾತ್ರ. ಹೌದು ಇಂತದ್ದೊಂದು ಪ್ರಶ್ನೆ ಕಾಡದೇ ಇರದು. ಪೆಡಂಭೂತಗಳು ಇಂದಿಗೂ ಜೀವಂತವಾಗಿದ್ದರೆ ಏನಾಗುತ್ತಿತ್ತು!.

ಭೂ ಚರಿತ್ರೆಯಲ್ಲಿ ಸುಮಾರು 6.5 ಕೋಟಿ ವರ್ಷಗಳ ಹಿಂದೆ ಬದುಕಿದ್ದ ಪೆಡಂಭೂತಗಳ ಕಾಲ ವಿಶಿಷ್ಟವಾದದ್ದು. ಡೈನೋಸರ್ ಎಂದು ಕರೆಯಲ್ಪಡುತ್ತಿದ್ದ ಪೆಡಂಭೂತಗಳು ಕೋಳಿಯ ಗಾತ್ರದಿಂದ ಬೃಹತ್ ತಿಮಿಂಗಲಗಳನ್ನು ಮೀರಿಸುವಂತಹ ಗಾತ್ರದವರೆಗೂ ವೈಶಿಷ್ಟತೆಯನ್ನು ಪಡೆದಿದ್ದವು. ಕೆಲವು ಸಸ್ಯಹಾರಿಗಳಾಗಿ ಮತ್ತೆ ಕೆಲವು ಮಾಂಸಾಹಾರಿಗಳಾಗಿದ್ದವು. ಕೆಲವು ಡೈನೋಸರ್‌ಗಳು ಎರಡು ಪಾದಗಳನ್ನು ಹೊಂದಿದ್ದರೆ, ಕೆಲವು ಡೈನೋಸರ್ ಚತುಷ್ಪಾದಿಯಾಗಿದ್ದವು. ಕೆಲವು ಡೈನೋಸರ್‌ಗಳು 30 ಆನೆಗಳ ತೂಕ ಹೊಂದಿದ್ದು, 6 ಮೀಟರ್‌ಗಿಂತ ಹೆಚ್ಚು ಎತ್ತರವಾಗಿದ್ದವು. 15 ಸೆಂಟಿ ಮೀಟರ್ ಗರಗಸದಂತಹ ಹಲ್ಲುಗಳನ್ನು ಹೊಂದಿದ್ದ ಮಾಂಸಹಾರಿ ಡೈನೋಸರ್‌ಗಳು ಎಲ್ಲಾ ಜೀವಿಗಳನ್ನು ತಿಂದು ಹಾಕುತಿದ್ದವು. ಅಮೆರಿಕದ ಕೊಲರಾಡೋ ಪ್ರಾಂತದಲ್ಲಿ, ಗೋಬಿ ಮರುಭೂಮಿಯಲ್ಲಿ ಪೆಡಂಭೂತಗಳ ಕುರುಹುಗಳು ದೊರೆತಿವೆ. ಅಷ್ಟೇ ಅಲ್ಲದೇ ನಮ್ಮ ದೇಶದ ಗುಜರಾತ್‌ನ ಅನೇಕ ಭಾಗಗಳಲ್ಲಿ, ಮಧ್ಯಪ್ರದೇಶ ಮತ್ತು ಗೋದಾವರಿ ಕಣಿವೆಗಳಲ್ಲಿ ಪೆಡಂಭೂತಗಳ ಅವಶೇಷಗಳು ಕಂಡು ಬಂದಿವೆ. ಭೂ ಇತಿಹಾಸದಲ್ಲಿ ನೆಲ-ಜಲ ಬಾನಿನಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸಿ ಆರುವರೆ ಕೋಟಿ ವರ್ಷಗಳ ಹಿಂದೆ ಸಂಪೂರ್ಣವಾಗಿ ಮರೆಯಾಗಿ ಹೋದವು. ಇವುಗಳ ಸಾಮೂಹಿಕ ನಿರ್ಗಮನಕ್ಕೆ ವಿಜ್ಞಾನಿಗಳು ಅನೇಕ ಕಾರಣಗಳನ್ನು ನೀಡಿದ್ದಾರೆ. ಅವುಗಳ ನಿರ್ನಾಮಕ್ಕೆ ನಿಖರ ಕಾರಣ ಇನ್ನೂ ನಿಗೂಢವಾಗಿಯೇ ಇದೆ. ಆದಾಗ್ಯೂ ಇಂತಹ ಬೃಹತ್ ಜೀವಿಗಳು ಇಂದಿಗೂ ಜೀವಂತವಾಗಿದ್ದರೆ ಏನಾಗುತ್ತಿತ್ತು! ಊಹಿಸಿದರೆ ಉತ್ತರ ನಮ್ಮನ್ನು ತತ್ತರಿಸುವಂತೆ ಮಾಡುತ್ತದೆ. ನಾವೆಲ್ಲ ಡೈನೋಸರ್‌ಗಳನ್ನು ಕಾಲ್ಪನಿಕ ಸಿನೆಮಾ ಅಥವಾ ವಸ್ತು ಸಂಗ್ರಹಾಲಯದಲ್ಲಿನ ಪಳೆಯುಳಿಕೆಗಳಿಂದ ಅವುಗಳ ಗಾತ್ರವನ್ನು ಊಹಿಸಿಕೊಂಡಿದ್ದೇವೆ. ಪುಸ್ತಕಗಳಲ್ಲಿ ಅವುಗಳ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೇವೆ. ಒಂದುವೇಳೆ ಅವು ಬದುಕಿದ್ದರೆ ಜೀವಂತವಾಗಿ ಅವುಗಳನ್ನು ನೋಡಬಹುದಿತ್ತು. ಅವುಗಳ ಕುರಿತ ಇನ್ನಷ್ಟು ಅಧ್ಯಯನ ಮಾಡಬಹುದಿತ್ತು. ಜೀವಜಗತ್ತಿನ ಇನ್ನಷ್ಟು ರಹಸ್ಯಗಳನ್ನು ತಿಳಯಬಹುದಿತ್ತು. ಡೈನೋಸರ್ ಬದುಕಿದ್ದರೆ ಜುರಾಸಿಕ್ ಪಾರ್ಕ್ ಮತ್ತು ಜುರಾಸಿಕ್ ವರ್ಲ್ಡ್‌ನಂತಹ ಸಿನೆಮಾ ನೋಡುವ ಅಗತ್ಯವಿರಲಿಲ್ಲ. ಎಲ್ಲವನ್ನೂ ನೈಜವಾಗಿಯೇ ಬನ್ನೇರುಘಟ್ಟ ಅಥವಾ ನಾಗರಹೊಳೆ ಅಭಯಾರಣ್ಯದಲ್ಲಿ ಪ್ರಾಣಿಗಳನ್ನು ನೋಡುವಂತೆ ಡೈನೋಸರ್‌ಗಳನ್ನು ನೋಡಬಹುದಿತ್ತು. ಕಾಂಗರೂ, ಆನೆ, ಹುಲಿ, ಸಿಂಹ, ಕರಡಿ, ರಣಹದ್ದುಗಳು ವಿವಿಧ ದೇಶಗಳ ರಾಷ್ಟ್ರೀಯ ಪ್ರಾಣಿಯಾದಂತೆ ಡೈನೋಸರ್‌ಗಳು ಯಾವುದಾದರೂ ಒಂದು ದೇಶದ ರಾಷ್ಟ್ರೀಯ ಪ್ರಾಣಿಯಾಗಿರುತ್ತಿತ್ತು.

ಬಹುತೇಕ ಡೈನೋಸರ್‌ಗಳು ಮಾಂಸಾಹಾರಿಗಳು. ಅವು ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳನ್ನು ಆಹಾರಕ್ಕಾಗಿ ತಿಂದು ಹಾಕುತ್ತಿದ್ದವು. ಆಗ ನಮಗೆ ಕೋಳಿ, ಕುರಿ, ಹಂದಿ ಅಥವಾ ಇನ್ನಿತರ ಪ್ರಾಣಿಗಳು ಆಹಾರಕ್ಕಾಗಿ ಸಿಗುತ್ತಿರಲಿಲ್ಲ. ಡೈನೋಸರ್‌ಗಳು ಬದುಕಿದ್ದರೆ ನಾವು ಯಾವುದೇ ಪ್ರಾಣಿಗಳನ್ನು ಬೇಟೆಯಾಡುವುದಾಗಲೀ, ಕೊಲ್ಲುವುದಾಗಲೀ ಸಾಧ್ಯವಿರಲಿಲ್ಲ. ಆಗ ನಾವು ಮಾಂಸಹಾರಕ್ಕಾಗಿ ಕೇವಲ ಮೀನು ಮತ್ತು ಇನ್ನಿತರ ಜಲಚರಗಳನ್ನು ಅವಲಂಬಿಸಬೇಕಾಗುತ್ತಿತ್ತು. ಡೈನೋಸರ್‌ಗಳು ಬದುಕಿದ್ದರೆ ಪ್ರತಿಕ್ಷಣವೂ ನಾವು ಎಚ್ಚರಿಕೆಯಿಂದ ಜೀವನ ನಿರ್ವಹಣೆ ಮಾಡಬೇಕಾಗುತ್ತಿತ್ತು. ಈಗಿನಂತೆ ಅಂಗಡಿ, ಮಾರ್ಕೆಟ್‌ಗೆ ಹೋಗಿ ಬೇಕಾದ ಸಾಮಾನು ನಿರ್ಭಯವಾಗಿ ತರುವುದಾಗಲೀ, ನಿರ್ಭಯವಾಗಿ ಸಿನೆಮಾ ನೋಡುವುದಾಗಲೀ, ತಿರುಗಾಡುವುದಾಗಲೀ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಅವು ಯಾವುದೇ ಕ್ಷಣದಲ್ಲಿ ನಮ್ಮ ಮೇಲೆ ದಾಳಿ ಮಾಡಬಹುದು ಎಂಬ ಭಯ ಸದಾ ಕಾಡುತ್ತಲೇ ಇರುತ್ತಿತ್ತು. ವಯಸ್ಸಾದವರು ವಾಕಿಂಗ್ ಮಾಡಲು ಹೆದರಬೇಕಾಗುತ್ತಿತ್ತು. ಮಕ್ಕಳು ಆಟವಾಡಲು ಹೊರಗೆ ಬಾರದಂತೆ ಒಳಗೆ ಕೂರಬೇಕಿತ್ತು. ಕತ್ತಲನ್ನು ಓಡಿಸಲು ಕೈಯಲ್ಲಿ ಟಾರ್ಚ್ ಹಿಡಿದು ಓಡಾಡುವಂತೆ ರಕ್ಷಣೆಗಾಗಿ ಸದಾ ಜೇಬಿನಲ್ಲಿ ಪಿಸ್ತೂಲು ಇಟ್ಟುಕೊಂಡು ತಿರುಗಾಡಬೇಕಿತ್ತು.

ಡೈನೋಸರ್‌ಗಳು ಇಂದು ಬದುಕಿದ್ದರೆ ನಿಸ್ಸಂದೇಹವಾಗಿ ಗಂಭೀರವಾದ ಹಾನಿಯನ್ನುಂಟು ಮಾಡುತ್ತಿದ್ದವು. ಅವುಗಳ ಭಾರೀ ಗಾತ್ರಕ್ಕೆ ಭೂಮಿ ಅಲ್ಲಾಡಿ ಅಲ್ಲಾಡಿ ಅಲ್ಲಲ್ಲಿ ಬಿರುಕುಗಳು ಉಂಟಾಗುತ್ತಿದ್ದವು. ವಿದ್ಯುತ್ ಕಂಬಗಳನ್ನು ಬಾಲದಿಂದಲೇ ಬೀಳಿಸಿ ಹಾಕುತ್ತಿದ್ದವು. ವಿದ್ಯುತ್ ತಂತಿಗಳು ಪರಸ್ಪರ ತಾಕಿಕೊಂಡು ವಿದ್ಯುತ್ ಸರ್ಕಿಟ್‌ನಿಂದ ಸಾಕಷ್ಟು ಜೀವ ಹಾಗೂ ಪರಿಸರ ಹಾನಿಯಾಗುತ್ತಿತ್ತು. ಡೈನೋಸರ್‌ಗಳು ಬದುಕಿದ್ದರೆ ಪರಿಸರದಲ್ಲಿ ಅವ್ಯವಸ್ಥೆ ಉಂಟಾಗುತ್ತಿತ್ತು. ಪ್ರಾಣಿಗಳಿಗೆ ಇದ್ದ ರೋಗರುಜಿನಗಳು ಡೈನೋಸರ್‌ಗಳಿಗೂ ಹರಡುತ್ತಿದ್ದವು ಅಥವಾ ಡೈನೋಸರ್‌ಗಳ ರೋಗಗಳು ಇನ್ನಿತರ ಜೀವಿಗಳಿಗೆ ತಗಲುವ ಭಯ ಇರುತ್ತಿತ್ತು. ವಿಜ್ಞಾನಿಗಳ ಅಭಿಪ್ರಾಯದಂತೆ ಭೂಮಿಯ ಮೇಲಿನ ಅತ್ಯಂತ ಬುದ್ಧ್ದಿವಂತ ಡೈನೋಸರ್ ಎಂದರೆ ಟ್ರೂಡಾನ್. ಅದರ ಮೆದುಳು ದೇಹದ ತೂಕಕ್ಕೆ ಅನುಪಾತದಲ್ಲಿತ್ತು. ಇತರ ಡೈನೋಸರ್‌ಗಳ ಮೆದುಳು ಅವುಗಳ ದೇಹದ ಅನುಪಾತಕ್ಕಿಂತ ತೀರಾ ಚಿಕ್ಕದಾಗಿತ್ತು. ಟ್ರೂಡಾನ್‌ನ ಬುದ್ಧಿಮತ್ತೆ ಇಂದು ವಿಕಾಸಗೊಳ್ಳಲು ಅವಕಾಶ ಇದ್ದರೆ ಅದು ನಮ್ಮ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲು ಉನ್ನತ ಸ್ಥಾನ ಗಳಿಸುತ್ತಿತ್ತು. ಬುದ್ಧ್ದಿಮತ್ತೆಯಲ್ಲಿ ಪ್ರಾಬಲ್ಯ ಇದ್ದುದರಿಂದ ಅದು ನಮ್ಮ ಜನನಾಯಕ ಆಗಬಹುದಿತ್ತು.

ಕಾಗೆ ಹಾರಿಬಂದು ರೊಟ್ಟಿಯ ಚೂರನ್ನು ಕಚ್ಚಿ ಒಯ್ಯುವಂತೆ ಕೆಲವು ಡೈನೋಸರ್‌ಗಳು ಹಾರಿಬಂದು ನಮ್ಮನ್ನೆಲ್ಲಾ ಎತ್ತಿಕೊಂಡು ಹೋಗಿ ನುಂಗುತ್ತಿದ್ದವು. ಬಹುತೇಕ ಭೂಮಿಯ ಮೇಲಿನ ಮಾನವರೆಲ್ಲಾ ಒಂದಲ್ಲ ಒಂದು ಡೈನೋಸರ್‌ಗೆ ಆಹಾರವಾಗುತ್ತಿದ್ದರು. ಇಂದು ಪ್ರಪಂಚದ ಜನಸಂಖ್ಯೆ 776 ಕೋಟಿ ಹಾಗೂ ಭಾರತದ ಜನಸಂಖ್ಯೆ 137 ಕೋಟಿಯನ್ನು ದಾಟುತ್ತಿದೆ. ಡೈನೋಸರ್‌ಗಳು ಬದುಕಿದ್ದರೆ ಭೂಮಿಯ ಮೇಲೆ ಮಾನವರ ಜನಸಂಖ್ಯೆ ತೀರಾ ಇಳಿಮುಖವಾಗುತ್ತಿತ್ತು. ಮಾನವರ ಸಂಖ್ಯೆ ಮಾತ್ರವಲ್ಲ ಪ್ರಾಣಿಗಳು ಹಾಗೂ ಸಸ್ಯಗಳ ಸಂಖ್ಯೆಯೂ ಕಡಿಮೆಯಾಗುತ್ತಿತ್ತು. ಒಂದುವೇಳೆ ಡೈನೋಸರ್ ಬದುಕಿದ್ದರೆ ಆನೆಗಳನ್ನು ಪಳಗಿಸಿದಂತೆ ವಿಶೇಷ ತಂತ್ರಗಾರಿಕೆಯಿಂದ ಸಾಕುಪ್ರಾಣಿಗಳನ್ನಾಗಿ ಮಾಡಿಕೊಂಡು, ಜೆಸಿಬಿ, ಕ್ರೇನ್‌ಗಳು ಮಾಡುವ ಬೃಹತ್ ಕಾರ್ಯಗಳನ್ನು ಮಾಡಿಸಿಕೊಳ್ಳಬಹುದಾಗಿತ್ತು. ಭಾರೀ ಸಾಧನ ಸಲಕರಣೆಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದಿತ್ತು. ಕಾರ್ಖಾನೆಗಳಲ್ಲೂ ಅವುಗಳನ್ನು ಬಳಸಿಕೊಳ್ಳಬಹುದಿತ್ತು. ಅವುಗಳು ವಿಪರೀತ ಹಾವಳಿ ಮಾಡದಂತೆ ಚುಚ್ಚುಮದ್ದು ನೀಡಿ ನಾಯಿ, ಬೆಕ್ಕು, ಹಸುಗಳಂತೆ ಸಾಕಿಕೊಳ್ಳಬಹುದಿತ್ತೇ!?

Writer - ಆರ್.ಬಿ ಗುರುಬಸವರಾಜ

contributor

Editor - ಆರ್.ಬಿ ಗುರುಬಸವರಾಜ

contributor

Similar News