ಶಾಹೀನ್‌ಬಾಗ್

Update: 2020-03-01 07:46 GMT

ಭಾರತ ಮಾತೆಯ ಮಗಳು ಅವಳು

ಆಡಮ್ ಹವ್ವಾ ಅವಳ ಪೂರ್ವಜರು

ಸಾತ್ವಿಕ ಸೀತೆಯ ಸೋದರಿಯವಳು

ದಿಟ್ಟ ದ್ರೌಪದಿಯ ಕ್ಷಾತ್ರ ತೇಜಸ್ಸು ಅವಳು

ಆಕೆಯದಾಖಲೆ ಕೇಳುತ್ತಿರುವಿಯಲ್ಲ

ನಿನ್ನ ದಾಖಲೆ ಎಲ್ಲಿದೆ ತೋರಿಸು?

ಮಂಜಿನ ಚಾದರ ಹೊದ್ದಿರುವ ಬಾಗ್

ಜೀವ ಮರಗಟ್ಟುವ ಜೀರೋ ಡಿಗ್ರಿ ಚಳಿ

ಬಯಲ ತುಂಬಾ ಅಮಾವಾಸ್ಯೆ ಕತ್ತಲು

ಯಾವ ಕಿಟಕಿ ಬಾಗಿಲುಗಳೂ ಇಲ್ಲ.

ಬಟಾ ಬಯಲು ಅಲ್ಲಮನ ನೆಲಮುಗಿಲು

ಧರಣಿ ಕುಳಿತಿರುವ ಹೆಂಗಳೆಯರು

ಏರು ಧ್ವನಿಯಲ್ಲಿ ಕೇಳುತ್ತಿದ್ದಾರೆ

ಎಲ್ಲಿದೆ ತೋರಿಸು ನಿನ್ನ ದಾಖಲೆ?

ನೂರರ ಗಡಿ ದಾಟಿದ ನೂರ್‌ಜಹಾನ್

ಎಂಬತ್ತು ದಾಟಿದ ಸೇವಂತಿಬಾಯಿ

ಧರಣಿ ಕುಳಿತ್ತಿದ್ದಾರೆ ಶಾಹೀನ್‌ಬಾಗ್‌ನಲ್ಲಿ

ಒಕ್ಕೊರಲ ಆಜಾದಿ ಕೂಗುತ್ತಿದ್ದಾರೆ

ಮುಗಿಲು ಮುಟ್ಟಿದೆ ಹೆಂಗಳೆಯರ ಕೂಗು

ಅವರ ಪೂರ್ವಜರ ಮೂಳೆಗಳು

ಇದೇ ಪುಣ್ಯಭೂಮಿಯ ಮಣ್ಣಿನಲ್ಲಿ ಒಂದಾಗಿವೆ

ಅವರದೇ ದಾಖಲೆ ಕೇಳುತ್ತಿರುವೆಯಲ್ಲ

ಈಗ ಅವರು ನಿನ್ನ ದಾಖಲೆ ಕೇಳುತ್ತಿದ್ದಾರೆ

ಎಲ್ಲಿದೆ ತೋರಿಸು ನಿನ್ನ ದಾಖಲೆ.

ಪುಟ್ಟ ಮಕ್ಕಳ ತಾಯಂದಿರು,

ಹಸಿಹಸಿ ಬಾಣಂತಿಯರು,ಯುವಜನ

ವಿದ್ಯಾರ್ಥಿಗಳು ಪಾಠಶಾಲೆ ತೊರೆದಿದ್ದಾರೆ

ಬೆಂಕಿ ಜ್ವಾಲೆಗಳಾಗಿ ಸಿಡಿಯುತ್ತಿದ್ದಾರೆ

ಕೆಂಡದುಂಡೆಗಳ ಮುಂದೆ ನಿನ್ನ

ಬಂದೂಕು, ಗುಂಡುಗಳು ಯಾವ ಲೆಕ್ಕ?

ತೇರಿ ಜಾಗೀರ್ ನಹೀ ಹೈ

ಎ ಹಿಂದೂಸ್ಥಾನ್ ಹಮಾರಾ ಹೈ

ಮುಗಿಲು ಮುಟ್ಟಿದೆ ಹೆಂಗಳೆಯರ ಜಯಕಾರ.

ನಿನಗೆ ಓಟು ಕೊಟ್ಟವರನ್ನೇ ಗುರುತು ಕೇಳುವಿಯಲ್ಲ!

ಎಲ್ಲಿದೆ ತೋರಿಸು ನಿನ್ನ ಗುರುತು?

ರಾಷ್ಟ್ರಧ್ವಜ ಹಾರಿಸುವ ಕೆಂಪುಕೋಟೆ

ವಿದೇಶಿಯರಿಗೆ ದರ್ಶಿಸುವ ತಾಜಮಹಲು

ಇಮಾರತ್ತುಗಳ ಕಟ್ಟಿಸಿದವರು ಇವರು

ಅವರದೇ ದಾಖಲೆ ಕೇಳುತ್ತಿರುವೆಯಲ್ಲ

ಮೊದಲು ತೋರಿಸುನಿನ್ನ ದಾಖಲೆ

ಸೋತದ್ದು, ಗೆದ್ದದ್ದು ಕ್ರೌರ್ಯದ ಬೀಜ

ಉತ್ತಿದ್ದು ಬಿತ್ತಿದ್ದು ದಿಕ್ಕೆಟ್ಟ ಅಲ್ಲಮ ಉಲಿದು

ಭಸ್ಮಾಸುರನ ನೃತ್ಯ ಸಾಕುಮಾಡು.

ಹೋರಾಟಗಾರ್ತಿ ಅಜ್ಜಿಯರ ಕಣ್ಣಲ್ಲಿರುವ

ತೇಜವೆಂತಹದು ನೋಡಿದೆಯಾ?

ಹಗಲು ರಾತ್ರಿ ಮೂರು ತಿಂಗಳಿಂದಲೂ

ಧರಿಣಿ ಕುಳಿತಮಾಗಿದ ಜೀವಗಳು

ಎದೆಹಾಲು ನಂಜಾಗಬಾರದಿತ್ತೆ ಎಂದು ಶಪಿಸುತ್ತ

ತನ್ನದೇ ಪೌರತ್ವ ಕೇಳುವ ಇವನ ಸಂತತಿ

ನಿರ್ನಾಮವಾಗಲೆಂದು ಹಿಡಿ ಶಾಪ ಹಾಕುವ

ಮುದುಕಿಯರು ಮಾತೆಯರು ಕೇಳುತ್ತಿದ್ದಾರೆ

ಮೊದಲು ತೋರಿಸು ನಿನ್ನ ಪೌರತ್ವದ ದಾಖಲೆ.

ದೇಶದೆಲ್ಲೆಡೆ ಈಗಾಗಲೇ ಹುಟ್ಟಿಕೊಂಡಿವೆ

ಸಾವಿರಾರು ಶಾಹೀನ್‌ಬಾಗ್‌ಗಳು

ಬೆಂಗಳೂರಿನಲ್ಲಿಯೂ ಬಿಲಾಲ್‌ಬಾಗ್

ಹುಟ್ಟಿಕೊಳ್ಳುತ್ತವೆ ನೆಲದ ತುಂಬಾ

ಹಲವಾರು ಲಕ್ಷಾಂತರ ಬಾಗ್‌ಗಳು

ಹರಲಿಗಳ ಹೊತ್ತು ನಿಲ್ಲುತ್ತಾರೆ ಅವರು

ಅಜ್ಜಿ,ಮುತ್ತಜ್ಜಿ,ಮತ್ತವರಮಗಳು, ಮೊಮ್ಮಗಳು

ಕೋಟಿ ಕೋಟಿ ಮಹಿಳೆಯರು.

ಬೀದಿ ಬೀದಿಯಲಿ ನಿಂತು ಕೇಳುತ್ತಾರೆ

ಮೊದಲು ತೋರಿಸು ನಿನ್ನ ಪೌರತ್ವ.

Writer - ಡಾ.ಕೆ.ಷರೀಫಾ

contributor

Editor - ಡಾ.ಕೆ.ಷರೀಫಾ

contributor

Similar News