ಅನುದಾನದ ಅಸಮರ್ಪಕ ಬಳಕೆ ಆರೋಪ: ಸರಕಾರದ ವಿರುದ್ಧ ಚಾಲಕರ ಪ್ರತಿಭಟನೆ
ಬೆಂಗಳೂರು, ಮಾ.1: ಕಳೆದ ಸಾಲಿನ ಬಜೆಟ್‌ನಲ್ಲಿ ಚಾಲಕರ ಸಮುದಾಯಕ್ಕೆ ನೀಡಿದ 80 ಕೋಟಿ ರೂ.ಗಳ ಅನುದಾನವನ್ನು ಸಮರ್ಪಕ ರೀತಿಯಲ್ಲಿ ಚಾಲಕರ ಕಲ್ಯಾಣಕ್ಕೆ ಬಳಸದಿರುವ ಸರಕಾರದ ಕ್ರಮವನ್ನು ಖಂಡಿಸಿ ನಮ್ಮ ಚಾಲಕರ ಟ್ರೇಡ್ ಯೂನಿಯನ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ರವಿವಾರ ಆನಂದ್ ರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಯೂನಿಯನ್‌ನ ನೂರಾರು ಸದಸ್ಯರು ಕಳೆದ ಬಜೆಟ್‌ನಲ್ಲಿ ನೀಡಿದ್ದ 80 ಕೋಟಿ ರೂ.ಅನುದಾನವನ್ನು ಈಗಿನ ಸರಕಾರ ಚಾಲಕರ ಅಭಿವೃದ್ಧಿಗೆ ಬಳಸದೇ ನಿರ್ಲಕ್ಷ್ಯ ಮಾಡಿದೆ ಎಂದು ಆಪಾದಿಸಿದರು.
ಯೂನಿಯನ್ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಅನುದಾನವನ್ನು ಸಮರ್ಪಕ ಜಾರಿ ಮಾಡದಿರುವ ಬಗ್ಗೆ ಕಳೆದ ಸೆಪ್ಟೆಂಬರ್‌ನಲ್ಲಿ ಪ್ರತಿಭಟನೆ ನಡೆಸಿ ಸರಕಾರದ ಮೇಲೆ ಒತ್ತಡ ಏರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಪಾದಿಸಿದರು. ಕೆಲವೇ ದಿನಗಳಲ್ಲಿ ಮಂಡಿಸಲಿರುವ ರಾಜ್ಯ ಬಜೆಟ್ ಸಂಬಂಧ ಆಟೋ ಟ್ಯಾಕ್ಸಿ ಚಾಲಕರ ಸಭೆ ನಡೆಸದೇ ಸರಕಾರ ನಿರ್ಲಕ್ಷ್ಯ ಮಾಡಿದೆ. ಕೂಡಲೇ ಚಾಲಕರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಅದನ್ನು ಸಮರ್ಪ ಜಾರಿಗೊಳಿಸುವಂತೆ ಒತ್ತಾಯಿಸಿದರು.