ಬಂಗಾಳ ಬೀಸಿದ ಬಲೆಗೆ ಬಿದ್ದ ಕರ್ನಾಟಕ

Update: 2020-03-01 19:05 GMT

ಕೋಲ್ಕತಾ, ಮಾ.1: ರಣಜಿ ಟ್ರೋಫಿ ಎರಡನೇ ಸೆಮಿ ಫೈನಲ್‌ನಲ್ಲಿ ಆತಿಥೇಯ ಬಂಗಾಳ ಬೀಸಿದ ಬಲೆಗೆ ಸಿಲುಕಿರುವ ಕರ್ನಾಟಕ ಸಂಕಷ್ಟದಲ್ಲಿದೆ. ಐದು ವಿಕೆಟ್ ಗೊಂಚಲು ಪಡೆದ ಇಶಾನ್ ಪೊರೆಲ್ ಬೌಲಿಂಗ್‌ನಲ್ಲಿ ಮಿಂಚಿದರೆ, ಅನುಸ್ತುಪ್ ಮಜುಂದಾರ್ ಔಟಾಗದೆ ಶತಕ ಸಿಡಿಸಿ ತನ್ನ ತಂಡ ಉತ್ತಮ ಮೊತ್ತ ಕಲೆ ಹಾಕಲು ನೆರವಾದರು.

ಒಂದು ಹಂತದಲ್ಲಿ 67 ರನ್‌ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಬಂಗಾಳ ತಂಡಕ್ಕೆ ಆಸರೆಯಾದ ಮಜುಂದಾರ್ ಔಟಾಗದೆ 149 ರನ್ ಗಳಿಸಿ 312 ರನ್ ಗಳಿಸಲು ನೆರವಾದರು. 21ರ ಹರೆಯದ ಪೊರೆಲ್ 39 ರನ್‌ಗೆ ಐದು ವಿಕೆಟ್‌ಗಳನ್ನು ಉರುಳಿಸಿ ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿರುವ ಕರ್ನಾಟಕ ತಂಡವನ್ನು 36.2 ಓವರ್‌ಗಳಲ್ಲಿ 122 ರನ್‌ಗೆ ನಿಯಂತ್ರಿಸಿದರು. ಇತ್ತೀಚೆಗೆ ನ್ಯೂಝಿಲ್ಯಾಂಡ್ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿರುವ ಭಾರತದ ಓಪನರ್ ಕೆ.ಎಲ್.ರಾಹುಲ್ 67 ಎಸೆತಗಳನ್ನು ಎದುರಿಸಿದ್ದರೂ 2 ಬೌಂಡರಿಗಳ ಬೆಂಬಲದಿಂದ 26 ರನ್ ಗಳಿಸಿ ಔಟಾದರು.

 ಸ್ಪಿನ್ನರ್ ಕೃಷ್ಣಪ್ಪ ಗೌತಮ್(31)ಕರ್ನಾಟಕದ ಪರ ಸರ್ವಾಧಿಕ ಸ್ಕೋರ್ ಗಳಿಸಿದರು. ಅಭಿಮನ್ಯು ಮಿಥುನ್(24)ಅವರೊಂದಿಗೆ 8ನೇ ವಿಕೆಟ್‌ಗೆ 56 ರನ್(46 ಎಸೆತ)ಜೊತೆಯಾಟ ನಡೆಸಿ ಕರ್ನಾಟಕ ಫಾಲೋ-ಆನ್‌ನಿಂದ ಪಾರಾಗಲು ನೆರವಾದರು. ಆದರೆ, ಕರುಣ್ ನಾಯರ್ ಬಳಗ ಬಂಗಾಳ ತಂಡಕ್ಕೆ ಮೊದಲ ಇನಿಂಗ್ಸ್ ನಲ್ಲಿ 190 ರನ್ ಮುನ್ನಡೆ ಬಿಟ್ಟುಕೊಟ್ಟಿತು. ಎರಡನೇ ದಿನವಾದ ರವಿವಾರ ಒಟ್ಟು 15 ವಿಕೆಟ್‌ಗಳು ಪತನಗೊಂಡವು. ಎರಡನೇ ಇನಿಂಗ್ಸ್ ಆರಂಭಿಸಿದ ಬಂಗಾಳ ದಿನದಾಟದಂತ್ಯಕ್ಕೆ 4 ವಿಕೆಟ್‌ಗಳ ನಷ್ಟಕ್ಕೆ 72 ರನ್ ಗಳಿಸಿತು. ಸುದೀಪ್ ಚಟರ್ಜಿ(ಔಟಾಗದೆ 40) ಹಾಗೂ ಮಜುಂದಾರ್(ಔಟಾಗದೆ 1)ಕ್ರೀಸ್ ಕಾಯ್ದುಕೊಂಡಿದ್ದಾರೆ. ಆತಿಥೇಯ ತಂಡ ಒಟ್ಟಾರೆ 262 ರನ್ ಮುನ್ನಡೆಯಲ್ಲಿದೆ.

ರೋನಿತ್ ಮೋರೆ ನೋ-ಬಾಲ್ ಎಸೆತದಿಂದಾಗಿ ಮೊದಲ ಇನಿಂಗ್ಸ್‌ನ ಶತಕವೀರ ಮಜುಂದಾರ್ ಔಟಾಗುವುದರಿಂದ ಬಚಾವಾದರು. ಈಗಾಗಲೇ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಬಿಟ್ಟುಕೊಟ್ಟಿರುವ ಕರ್ನಾಟಕ ಎರಡನೇ ಇನಿಂಗ್ಸ್ ನಲ್ಲಿ ಬಂಗಾಳವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರೆ ಸತತ ಮೂರನೇ ಬಾರಿ ಸೆಮಿ ಫೈನಲ್ ಸೋಲಿನಿಂದ ಪಾರಾಗಬಹುದು.

ಇದಕ್ಕೂ ಮೊದಲು ಐದು ಗಂಟೆಗಳ ಕಾಲ ಕ್ರೀಸ್ ಆಕ್ರಮಿಸಿಕೊಂಡಿದ್ದ ಮಜುಂದಾರ್ 207 ಎಸೆತಗಳ ಇನಿಂಗ್ಸ್‌ನಲ್ಲಿ 21 ಬೌಂಡರಿ ಹಾಗೂ 3 ಸಿಕ್ಸರ್‌ಗಳನ್ನು ಒಳಗೊಂಡ ಔಟಾಗದೆ 149 ರನ್ ಗಳಿಸಿದರು. ಕೊನೆಯ ನಾಲ್ವರು ಬ್ಯಾಟ್ಸ್‌ಮನ್‌ಗಳೊಂದಿಗೆ 245 ರನ್ ಸೇರಿಸಿ ಬಂಗಾಳ ಹೀನಾಯ ಸ್ಥಿತಿಯಿಂದ ಪುಟಿದೇಳಲು ನೆರವಾದರು.

ಕೊನೆಯ ಬ್ಯಾಟ್ಸ್‌ಮನ್ ಪೊರೆಲ್(7)ಅವರೊಂದಿಗೆ 45 ನಿಮಿಷಗಳ ಕಾಲ ಬ್ಯಾಟಿಂಗ್ ನಡೆಸಿದ ಮಜುಂದಾರ್ 79 ಎಸೆತಗಳಲ್ಲಿ 54 ರನ್ ಸೇರಿಸಿ ಕರ್ನಾಟಕದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಕರ್ನಾಟಕ ಬ್ಯಾಟಿಂಗ್ ಕುಸಿತ:  

 ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಮೊದಲ ಓವರ್‌ನ 4ನೇ ಎಸೆತದಲ್ಲಿ ಆರ್.ಸಮರ್ಥ್(0)ವಿಕೆಟನ್ನು ಕಳೆದುಕೊಂಡು ಆರಂಭದಲ್ಲೇ ಆಘಾತ ಅನುಭವಿಸಿತು. ಪೊರೆಲ್ ತನ್ನ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ನಾಯಕ ಕರುಣ್ ನಾಯರ್(3)ವಿಕೆಟನ್ನು ಉರುಳಿಸಿದರು. ಕರ್ನಾಟಕದ ನಾಯಕ ನಾಯರ್ ಅವರು ಸ್ಲಿಪ್‌ನಲ್ಲಿ ಮಜುಂದಾರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನ್ಯೂಝಿಲ್ಯಾಂಡ್‌ನಲ್ಲಿ ಸೀಮಿತ ಓವರ್ ಸರಣಿಯಲ್ಲಿ ಒಂದು ಶತಕ ಹಾಗೂ ಮೂರು ಅರ್ಧಶತಕಗಳನ್ನು ಸಿಡಿಸಿರುವ ಕೆ.ಎಲ್. ರಾಹುಲ್ ಮೇಲೆ ಭಾರೀ ನಿರೀಕ್ಷೆ ಇಡಲಾಗಿತ್ತು. ಸುಮಾರು ಎರಡು ವರ್ಷಗಳ ಬಳಿಕ ಮೊದಲ ಬಾರಿ ರಣಜಿ ಪಂದ್ಯವನ್ನು ಆಡಿದ ರಾಹುಲ್ ಒತ್ತಡದಲ್ಲಿದ್ದಂತೆ ಕಂಡುಬಂದರು. ಮೊದಲ ಬೌಂಡರಿ ಗಳಿಸಲು ಸಾಕಷ್ಟು ಸಮಯ ತೆಗೆದುಕೊಂಡರು. ರಾಹುಲ್ ಅವರು ಕೃಷ್ಣಮೂರ್ತಿ ಸಿದ್ದಾರ್ಥ್(14)ಜೊತೆಗೆ ಇನಿಂಗ್ಸ್ ಕಟ್ಟುವ ವಿಶ್ವಾಸದಲ್ಲಿದ್ದರು. ಆಕಾಶ್‌ದೀಪ್(3-30)ಸಿದ್ದಾರ್ಥ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಮನೀಷ್ ಪಾಂಡೆ(12)ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ಮುಕೇಶ್ ಕುಮಾರ್(2-46)ತನ್ನ ವಿಕೆಟ್ ಖಾತೆ ತೆರೆದರು. ರಾಹುಲ್ ವಿಕೆಟ್ ಪಡೆದ ಮುಕೇಶ್ ಬಂಗಾಳ ಪಾಳಯದಲ್ಲಿ ಸಂಭ್ರಮ ಹೆಚ್ಚಿಸಿದರು.

 ಫಾರ್ಮ್‌ನಲ್ಲಿರುವ 19ರ ಹರೆಯದ ಎಡಗೈ ಓಪನಿಂಗ್ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಅಚ್ಚರಿಯ ನಿರ್ಧಾರದಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರು. ಪಡಿಕ್ಕಲ್ 4 ರನ್ ಗಳಿಸಲಷ್ಟೇ ಶಕ್ತರಾಗಿ ಪೊರೆಲ್‌ಗೆ ವಿಕೆಟ್ ಒಪ್ಪಿಸಿದರು. ನಿರ್ಣಾಯಕ ಹಂತದಲ್ಲಿ ಕರ್ನಾಟಕ ರಾಹುಲ್ ಸಹಿತ 3 ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News