ಮೂರೇ ದಿನಕ್ಕೆ ಮುಗಿದ ಟೆಸ್ಟ್: ಭಾರತಕ್ಕೆ ಮತ್ತೊಂದು ವೈಟ್‌ವಾಶ್

Update: 2020-03-02 03:54 GMT

ಕ್ರೈಸ್ಟ್‌ಚರ್ಚ್, ಮಾ.2: ನ್ಯೂಝಿಲೆಂಡ್ ಪ್ರವಾಸ ಕೈಗೊಂಡಿರುವ ಭಾರತ ಕ್ರಿಕೆಟ್ ತಂಡ ಎರಡು ವಾರಗಳ ಅಂತರದಲ್ಲಿ ಮತ್ತೊಂದು ಮುಖಭಂಗ ಅನುಭವಿಸಿದೆ. ಏಕದಿನ ಸರಣಿಯಲ್ಲಿ ಅತಿಥೇಯರ ಬಳಿ ವೈಟ್‌ವಾಶ್ ಮಾಡಿಸಿಕೊಂಡಿರುವ ಭಾರತೀಯ ತಂಡ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವೇ ಹೀನಾಯ ಸೋಲು ಅನುಭವಿಸುವ ಮೂಲಕ 0-2 ಅಂತರದಿಂದ ಟೆಸ್ಟ್ ಸರಣಿಯನ್ನೂ ಸೋತಿದೆ.

ಏಳು ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದರೂ ಎರಡನೇ ಇನಿಂಗ್ಸ್‌ನಲ್ಲಿ ಅಲ್ಪಮೊತ್ತಕ್ಕೆ ಕುಸಿದ ಭಾರತ ಸುಲಭವಾಗಿ ಸೋಲೊಪ್ಪಿಕೊಂಡಿತು. ಗೆಲುವಿಗೆ 132 ರನ್‌ಗಳ ಗುರಿ ಪಡೆದ ಅತಿಥೇಯ ತಂಡ ಮೊದಲ ವಿಕೆಟ್‌ಗೆ 103 ರನ್ ಕಲೆ ಹಾಕುವ ಮೂಲಕ ಕೇವಲ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಆರಂಭಿಕ ಆಟಗಾರರಾದ ಥಾಮ್ ಲ್ಯಾಥಮ್ ಮತ್ತು ಟಾಮ್ ಬ್ಲಂಡೆಲ್ ಅವರ ಅರ್ಧಶತಕಗಳು ನ್ಯೂಝಿಲೆಂಡ್ ತಂಡಕ್ಕೆ ಸುಲಭ ಜಯ ತಂದುಕೊಟ್ಟವು. ನಾಯಕ ಕೇನ್ ವಿಲಿಯಮ್ಸನ್ (5) ಮತ್ತು ಬ್ಲಂಡೆಲ್ (51) ಅವರ ವಿಕೆಟನ್ನು ಕ್ಷಿಪ್ರ ಅಂತರದಲ್ಲಿ ಕಳೆದುಕೊಂಡರೂ, ಅನುಭವಿ ಆಟಗಾರರಾದ ರಾಸ್ ಟೇಲ್ ಮತ್ತು ಹೆನ್ರಿ ನಿಕೋಲಸ್ ಗೆಲುವಿನ ಔಪಚಾರಿಕತೆ ಪೂರೈಸಿದರು. ಭಾರತದ ಪರ ಬೂಮ್ರಾ 2 ಮತ್ತು ಉಮೇಶ್ ಯಾದವ್ ಒಂದು ವಿಕೆಟ್ ಕಿತ್ತರು.

ಇದಕ್ಕೂ ಮುನ್ನ ಟಿಮ್ ಸೌಥಿ (36ಕ್ಕೆ 3) ಮತ್ತು ಟ್ರೆಂಟ್ ಬೋಲ್ಟ್ (28ಕ್ಕೆ 4) ಅವರ ಮಾರಕ ದಾಳಿಗೆ ತರಗೆಲೆಯಾದ ಭಾರತ ತಂಡ ಕೇವಲ 124 ರನ್‌ಗಳಿಗೆ ಕುಸಿಯಿತು. ಭಾರತದ ಇನಿಂಗ್ಸ್ ಎಷ್ಟು ಕೆಟ್ಟದಾಗಿತ್ತೆಂದರೆ 24 ರನ್ ಗಳಿಸಿದ ಚೇತೇಶ್ವರ ಪೂಜಾರ ಅವರೇ ಭಾರತದ ಪರ ಗರಿಷ್ಠ ಸ್ಕೋರರ್. ಇಡೀ ಇನಿಂಗ್ಸ್‌ನಲ್ಲಿ ನಾಲ್ವರು ಆಟಗಾರರು ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು.
ಎರಡು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಸೋಲು ಅನುಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News