ಮೊದಲ ಏಕದಿನ: ದಕ್ಷಿಣ ಆಫ್ರಿಕಾ ತಂಡಕ್ಕೆ ಭರ್ಜರಿ ಜಯ

Update: 2020-03-02 04:12 GMT

ಪಾರ್ಲ್, ಮಾ.1: ಹೆನ್ರಿಕ್ ಕ್ಲಾಸೆನ್ ಅಜೇಯ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 74 ರನ್‌ಗಳ ಅಂತರದಿಂದ ಗೆದ್ದುಕೊಂಡಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ 126 ರನ್‌ಗೆ 4 ವಿಕೆಟ್ ಕಳೆದುಕೊಂಡಿತು. ಆಗ ಐದನೇ ವಿಕೆಟ್‌ಗೆ 149 ರನ್ ಜೊತೆಯಾಟ ನಡೆಸಿದ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್(64, 70 ಎಸೆತ) ತಂಡ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಳ್ಳಲು ನೆರವಾದರು. ಮಧ್ಯಮ ಸರದಿಯ ಬ್ಯಾಟ್ಸ್‌ಮನ್ ಕ್ಲಾಸೆನ್ ಚೊಚ್ಚಲ ಶತಕ(123 ರನ್, 114 ಎಸೆತ, 7 ಬೌಂಡರಿ,3 ಸಿಕ್ಸರ್) ಹಾಗೂ ಮಿಲ್ಲರ್ ಅರ್ಧಶತಕದ(64, 70 ಎಸೆತ, 4 ಬೌಂಡರಿ,1 ಸಿಕ್ಸರ್)ಸಹಾಯದಿಂದ ದ.ಆಫ್ರಿಕಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 291 ರನ್ ಗಳಿಸಿತು. ಗೆಲ್ಲಲು 292 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ ಪಂದ್ಯದುದ್ದಕ್ಕೂ ರನ್‌ರೇಟ್ ಕಾಯ್ದುಕೊಂಡಿದ್ದರೂ 45.1 ಓವರ್‌ಗಳಲ್ಲಿ 217 ರನ್‌ಗೆ ಆಲೌಟಾಯಿತು. ಆಸೀಸ್ ಪರ ಮಾಜಿ ನಾಯಕ ಸ್ಟೀವನ್ ಸ್ಮಿತ್ ಅರ್ಧಶತಕದ(76, 94 ಎಸೆತ, 3 ಬೌಂಡರಿ)ಕಾಣಿಕೆ ನೀಡಿದರು. ಬೋಲ್ಯಾಂಡ್ ಪಾರ್ಕ್ ನ ನಿಧಾನಗತಿಯ ಪಿಚ್‌ನ ಲಾಭ ಎತ್ತಿದ ದಕ್ಷಿಣ ಆಫ್ರಿಕಾ ಬೌಲರ್‌ಗಳು ಎದುರಾಳಿ ತಂಡವನ್ನು ಕಟ್ಟಿಹಾಕಿದರು. ಆತಿಥೇಯರ ಪರ ಲುಂಗಿ ಗಿಡಿ(3-30)ಯಶಸ್ವಿ ಬೌಲರ್ ಎನಿಸಿಕೊಂಡರು. ನೊರ್ಟ್ಜೆ(2-39) ಹಾಗೂ ಶಂಸಿ(2-45)ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಸರಣಿಯ ಎರಡನೇ ಪಂದ್ಯ ಬುಧವಾರ ಬ್ಲೋಮ್‌ಫೋಂಟೆನ್‌ನಲ್ಲಿ ನಡೆಯಲಿದ್ದು, ಮೂರನೇ ಹಾಗೂ ಅಂತಿಮ ಪಂದ್ಯ ಶನಿವಾರ ಪೋಚೆಫ್‌ಸ್ಟ್ರೂಮ್‌ನಲ್ಲಿ ನಿಗದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News