ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಿಸಿರುವ ಡ್ರಗ್ಸ್ ದಂಧೆ

Update: 2020-03-03 07:10 GMT

ಡ್ರಗ್ಸ್ ಎಂಬ ಮಾದಕ ಜಾಲದ ವಿಷ ವರ್ತುಲ ಬಹುತೇಕವಾಗಿ ನಗರ ಪ್ರದೇಶದ ಯುವಕರನ್ನೇ ಟಾರ್ಗೆಟ್ ಮಾಡಲಾಗುತ್ತದೆ ಎಂಬುದು ನಿಜವಾಗಿದ್ದರೂ, ಈ ಜಾಲದಿಂದ ಗ್ರಾಮಾಂತರ ಪ್ರದೇಶದ ಯುವಕರೂ ಹೊರತಾಗಿಲ್ಲ. ಈ ಮಾದಕ ಜಾಲ ಗ್ರಾಮಾಂತರ ಪ್ರದೇಶದ ಶಾಲಾಕಾಲೇಜುಗಳ ವಿದ್ಯಾರ್ಥಿಗಳನ್ನೂ ತನ್ನ ಆಪೋಷಣಕ್ಕೆ ತೆಗೆದುಕೊಂಡಿದೆ. ಇದಕ್ಕೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ ಪೊಲೀಸರಿಂದ ಮುಂದುವರಿದ ಕಾರ್ಯಾಚರಣೆ, ಜಾಗೃತಿ ಹಾಗೂ ಪತ್ತೆಯಾಗುತ್ತಿರುವ ಪ್ರಕರಣಗಳೇ ಸಾಕ್ಷಿ. ನಿರಂತರ ಜಾಗೃತಿ, ಮಾದಕ ವಸ್ತುಗಳ ಮಾರಾಟಗಾರರ ಬಂಧನದ ಹೊರತಾಗಿಯೂ ಈ ವಿಷ ವರ್ತುಲ ತನ್ನ ಜಾಲವನ್ನು ವಿಸ್ತರಿಸಲು ಪ್ರಮುಖ ಕಾರಣ ಇತ್ತೀಚಿನ ದಿನಗಳಲ್ಲಿನ ಸುಲಭ ಸಂವಹನ, ಸಾಮಾಜಿಕ ಜಾಲತಾಣಗಳ ಬಳಕೆ ಎನ್ನುವುದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್‌ರ ಅಭಿಪ್ರಾಯ. ಮಾದಕ ವ್ಯಸನಕ್ಕೆ ಕಾರಣ ಹಾಗೂ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಕ್ರಮ ಹಾಗೂ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಜತೆ ‘ವಾರ್ತಾಭಾರತಿ’ ನಡೆಸಿದ ವಿವರವಾದ ಸಂದರ್ಶನ ಇಲ್ಲಿದೆ.

ಹಲವಾರು ವರ್ಷಗಳ ನಿರಂತರ ಪ್ರಯತ್ನದ ಹೊರತಾಗಿಯೂ ಡ್ರಗ್ಸ್ ಜಾಲ ನಿಯಂತ್ರಣ ಸಾಧ್ಯವಾಗದಿರಲು ಕಾರಣ?

ಲಕ್ಷ್ಮೀ ಪ್ರಸಾದ್: ಇದಕ್ಕೆ ಮುಖ್ಯವಾಗಿ ಡ್ರಗ್ಸ್ ಖರೀದಿಸುವ ಶಕ್ತಿ ಇತ್ತೀಚೆಗೆ ಜನರಲ್ಲಿ ಹೆಚ್ಚಾಗಿದೆ ಎಂದೇ ಹೇಳಬೇಕಾಗುತ್ತದೆ. ಕಾರಣ, ಸಾಮಾಜಿಕ ಜಾಲತಾಣಗಳು ಡ್ರಗ್ಸ್ ಮಾರಾಟ ಹಾಗೂ ಖರೀದಿ ವ್ಯವಹಾರವನ್ನು ಹೆಚ್ಚಿಸಿದೆ. ಮಾರಾಟ ಮಾಡುವವರನ್ನು ಸಂಪರ್ಕಿಸುವುದು ಬಲು ಸುಲಭ. ಹಿಂದೆಲ್ಲಾ ಮಾದಕದ್ರವ್ಯ ವ್ಯಸನಿಗಳು ಡ್ರಗ್ಸ್‌ಗಾಗಿ ಅದನ್ನು ಪೂರೈಕೆ ಮಾಡುವ ವ್ಯಕ್ತಿಗಳನ್ನು ಸಂಪರ್ಕಿಸಬೇಕಿತ್ತು. ಈಗ ಹಾಗಲ್ಲ, ಸ್ಮಾರ್ಟ್ ಫೋನ್‌ನಲ್ಲಿ ವಾಟ್ಸ್ ಆ್ಯಪ್ ಸಂದೇಶದ ಮೂಲಕವೇ ಸಂವಹನ ನಡೆದು ಡ್ರಗ್ಸ್ ಪ್ಯಾಕೇಟ್‌ಗಳು ಕೊರಿಯರ್ ಮೂಲಕ ಖರೀದಿದಾರನಿಗೆ ತಲುಪುತ್ತವೆ. ಮಧ್ಯವರ್ತಿಗಳ ಅಗತ್ಯವೇ ಇರುವುದಿಲ್ಲ.

ಯಾವೆಲ್ಲಾ ರೂಪದಲ್ಲಿ ಡ್ರಗ್ಸ್‌ಗಳು ಪೂರೈಕೆಯಾಗುತ್ತಿವೆ?

ಲಕ್ಷ್ಮೀಪ್ರಸಾದ್: ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಗಾಂಜಾ ಅತ್ಯಧಿಕ ಪ್ರಚಲಿತದಲ್ಲಿದೆ. ಉಳಿದಂತೆ ಹೆರಾಯಿನ್, ಎಂಬಿಎಂಎ ಕ್ರಿಸ್ಟಲ್‌ನಂತಹ ಮಾದಕ ವಸ್ತುಗಳು ಚಾಲ್ತಿಯಲ್ಲಿವೆ. ಔಷಧಾಲಯಗಳಿಂದಲೂ ಕೆಲವೊಂದು ಮತ್ತು ಬರಿಸುವ ಔಷಧಿಗಳು ಡ್ರಗ್ಸ್ ರೂಪದಲ್ಲಿ ಬಳಕೆಯಾಗುತ್ತವೆ. ಮೆಡಿಕಲ್‌ಗಳಲ್ಲಿ ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಇಲ್ಲದೆ ಔಷಧಿಗಳ ಮಾರಾಟ ನಿಷೇಧವಿದೆ. ಹಾಗಿದ್ದರೂ ಕೆಲವೆಡೆ ಅಮಲು ಬರಿಸುವ ಪದಾರ್ಥಗಳ ಖರೀದಿ ನಡೆಯುತ್ತಿರುವ ಅನುಮಾನ ಇದೆ. ಈ ಬಗ್ಗೆ ಆರೋಗ್ಯ ಇಲಾಖೆ ಜತೆ ಮಾತುಕತೆ ನಡೆಸಿ ಯಾವ ರೀತಿಯಲ್ಲಿ ಕ್ರಮ ವಹಿಸಬಹುದು ಎಂಬ ಚಿಂತನೆ ನಡೆಸಲಾಗುತ್ತಿದೆ.

ಚಾಕಲೇಟ್ ರೂಪದಲ್ಲೂ ಡ್ರಗ್ಸ್ ಮಕ್ಕಳ ಕೈ ಸೇರುತ್ತಿದೆ ಎಂಬ ಆರೋಪ ಇದೆ?

ಲಕ್ಷ್ಮೀಪ್ರಸಾದ್: ಬಂಟ್ವಾಳದ ಕೆಲ ಪ್ರದೇಶಗಳಲ್ಲಿಪಿಲ್ಸ್ ರೂಪದಲ್ಲಿ ಮಾದಕ ವಸ್ತುಗಳು ಸರಬರಾಜಾಗುತ್ತಿವೆ ಎಂಬ ಗುಮಾನಿ ಇದೆ. ಆದರೆ ಅಂತಹ ವಸ್ತುಗಳು ಈವರೆಗೂ ಇಲಾಖೆಗೆ ಸಿಕ್ಕಿಲ್ಲ. ಉಳಿದಂತೆ ಚಾಕಲೇಟ್ ಅಥವಾ ಇತರ ರೂಪದಲ್ಲಿ ಸರಬರಾಜಾಗುತ್ತಿದೆ ಎಂದು ಹೇಳಲಾಗುತ್ತಿರುವ ಮಾದಕ ವಸ್ತುಗಳು ನಮ್ಮ ವ್ಯಾಪ್ತಿಯಲ್ಲಿ ಕಂಡು ಬಂದಿಲ್ಲ.

ಹದಿಹರೆಯದವರೇ ಈ ಮಾದಕ ವಸ್ತುಗಳ ಟಾರ್ಗೆಟ್‌ಗೆ ಕಾರಣ?

ಲಕ್ಷ್ಮೀಪ್ರಸಾದ್: ಡ್ರಗ್ಸ್ ಖರೀದಿಗೆ ದುಡ್ಡು ಮುಖ್ಯ. ಮಕ್ಕಳಲ್ಲಿ ಸಾಮಾನ್ಯವಾಗಿ ಇಂದು ದುಡ್ಡು ಇರುತ್ತದೆ. ಕಾಲೇಜಿಗೆ ಹೋಗಲು, ಹಾಸ್ಟೆಲ್‌ನಲ್ಲಿ ಇರುವವರಿಗೆ ಅವರ ಖರ್ಚಿಗಾಗಿ ಪ್ರತಿ ತಿಂಗಳು ಹಣ ನೀಡಲಾಗುತ್ತದೆ. ಇದರ ಜತೆ ಸಾಮಾಜಿಕ ಜಾಲತಾಣ. ಮುಖ್ಯವಾಗಿ ವಾಟ್ಸ್‌ಆ್ಯಪ್. ಹಿಂದೆಲ್ಲಾ ಈ ಡ್ರಗ್ಸ್ ಬೇಕೆಂದಾಗ ಯಾರನ್ನಾದರೂ ಸಂಪರ್ಕಿಸಬೇಕಿತ್ತು. ಇದು ಸುಲಭದ ಮಾತಾಗಿರಲಿಲ್ಲ. ಆದರೆ ಈಗ ವಾಟ್ಸ್‌ಆ್ಯಪ್, ಫೇಸ್‌ಬುಕ್ ಮೂಲಕ ಸಂಪರ್ಕ, ಸಂವಹನ ಸುಲಭವಾಗಿದೆ. ಇನ್ನೊಂದು ಡಾಟ್ ವೆಬ್‌ನಲ್ಲಿ ಈ ಡ್ರಗ್ಸ್‌ಗಳ ಖರೀದಿಯೂ ನಡೆಯುತ್ತಿದೆ. ಆದರೆ ಜಿಲ್ಲೆಯಲ್ಲಿ ಇಂತಹ ಯಾವುದೇ ಪ್ರಕರಣ ಪತ್ತೆಯಾಗಿಲ್ಲ.

ಏನಿದು ಡಾಟ್ ವೆಬ್?

ಲಕ್ಷ್ಮೀಪ್ರಸಾದ್: ಇಂಟರ್‌ನೆಟ್ ವೆಬ್ ಸೈಟ್‌ನಲ್ಲಿ ಲಾಗಿನ್ ಆಗುತ್ತಾರೆ. ಅಲ್ಲಿ ಇತರರಿಗೆ ಗೊತ್ತಾಗದ ರೀತಿಯಲ್ಲಿ ಡ್ರಗ್ಸ್ ಮಾರಾಟಗಾರರ ಜತೆ ಸಂಪರ್ಕ, ಸಂವಹನ ನಡೆಯುತ್ತದೆ. ಮಾರಾಟಗಾರ ಡ್ರಗ್ಸನ್ನು ಸುವ್ಯವಸ್ಥಿತವಾಗಿ ಪ್ಯಾಕ್ ಮಾಡಿ ಕೊರಿಯರ್ ಮಾಡುತ್ತಾನೆ. ಇದರ ಮೇಲೆ ಯಾರಿಗೂ ಸಂಶಯ ಬರುವುದು ಬಹಳ ಕಷ್ಟ. ಮಾದಕ ವ್ಯಸನಿಗೆ ತನಗೆ ಬೇಕಾದ ಸ್ಥಳಕ್ಕೆ ಕೊರಿಯರ್ ಮೂಲಕ ಈ ಡ್ರಗ್ಸ್ ಪೂರೈಕೆಯಾಗುತ್ತದೆ. ಇದೊಂದು ಹೊಸ ಜಾಲ.

ಇಲಾಖೆ ವತಿಯಿಂದ ಡ್ರಗ್ಸ್ ವಿರೋಧಿ ಅಭಿಯಾನ ಹೇಗೆ ನಡೆಯುತ್ತಿದೆ?

ಲಕ್ಷ್ಮೀ ಪ್ರಸಾದ್: ನಾವು ಪ್ರತಿ ಶಿಕ್ಷಣ ಸಂಸ್ಥೆಗಳಲ್ಲಿ ಪೊಲೀಸ್ ಕೋರ್ಡಿನೇಟರ್ ಅಧಿಕಾರಿ (ಪಿಸಿಒ)ಯನ್ನು ನೇಮಕ ಮಾಡಿದ್ದೇವೆ. ಅವರು ಆ ಸಂಸ್ಥೆಯ ಅಧ್ಯಾಪಕರೇ ಆಗಿರುತ್ತಾರೆ. ಅವರನ್ನು ಒಳಗೊಂಡು ಪ್ರತಿ ಠಾಣಾ ಮಟ್ಟದಲ್ಲಿ ಸಭೆ ನಡೆಸಲಾಗುತ್ತದೆ. ಎಲ್ಲಾ ಪಿಸಿಒಗಳನ್ನು ಕರೆಯಲಾಗುತ್ತದೆ. ಜತೆಗೆ ಇತರ ಇಲಾಖೆಗಳವರ ಅಗತ್ಯವಿದ್ದರೆ ಅವರನ್ನೂ ಕರೆಸಲಾಗುತ್ತದೆ. ಸಭೆಯಲ್ಲಿ ಸಂಸ್ಥೆಯಲ್ಲಿ ಅಕ್ರಮ ಪೂರೈಕೆ ಅಥವಾ ಕಾಲೇಜು ಸುತ್ತಮುತ್ತ ಸಂಶಯಾಸ್ಪದ ರೀತಿಯ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಅಥವಾ ದೂರನ್ನು ಸಂಗ್ರಹಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲ್ಲಿ ಯಾವುದೇ ರೀತಿಯ ಸಮಾಜ ಬಾಹಿರ ವರ್ತನೆಗಳ ಕುರಿತಂತೆಯೂ ಪಿಸಿಒ ನಿಗಾ ಇರಿಸುತ್ತಾರೆ. ಶಿಕ್ಷಣ ಸಂಸ್ಥೆಗಳು ಹಾಗೂ ಪೊಲೀಸರ ನಡುವೆ ಈ ಪಿಸಿಒಗಳು ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ.

ನಿರ್ದಿಷ್ಟವಾಗಿ ಡ್ರಗ್ಸ್ ವ್ಯಸನಿಗಳ ಬಗ್ಗೆ ಯಾವ ಕ್ರಮ ವಹಿಸಲಾಗುತ್ತದೆ?

ಲಕ್ಷ್ಮೀ ಪ್ರಸಾದ್: ಡ್ರಗ್ಸ್ ಪ್ರಕರಣಗಳಲ್ಲಿ ಕಾನೂನು ಪ್ರಕಾರವಾಗಿಯೇ ಇಲಾಖೆ ವ್ಯವಹರಿಸುತ್ತದೆ. ಗಾಂಜಾ ಪೂರೈಕೆದಾರರ ವಿರುದ್ಧ ಹಾಗೂ ಗಾಂಜಾ ಸೇವಿಸುವವರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ. ಆದರೆ ಗಾಂಜಾ ವ್ಯಸನಿಗಳು ಸಿಕ್ಕಾಗ ಅವರ ಪೋಷಕರಿಗೆ ಮಾಹಿತಿ ನೀಡಿ, ಪಿಸಿಒ ಮೂಲಕ ಅವರ ಮೇಲೆ ನಿಗಾ ಇರಿಸಲಾಗುತ್ತದೆ. ಅವರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಲಾಗುತ್ತದೆ. ಇಲಾಖೆಯಿಂದ ಹಿಂದಿನಂತೆಯೇ ಡ್ರಗ್ಸ್ ಪತ್ತೆ ದಾಳಿಗಳು ಮುಂದುವರಿದಿದೆ.

ಸದ್ಯ ಡ್ರಗ್ಸ್ ವ್ಯಸನಿಗಳ ಸಂಖ್ಯೆ ಅಥವಾ ಖರೀದಿದಾರರ ಸಂಖ್ಯೆ ಕಡಿಮೆಯಾಗಿದೆಯೇ?

ಲಕ್ಷ್ಮೀ ಪ್ರಸಾದ್: ಕಳೆದ ಮೂರು ವರ್ಷಗಳಲ್ಲಿ ಡ್ರಗ್ಸ್ ಸಂಬಂಧಿ ಅಪರಾಧ ಸೂಚ್ಯಂಕದಲ್ಲಿ ಅಂತಹ ಯಾವುದೇ ಗಮನಾರ್ಹ ಇಳಿಕೆ ಅಥವಾ ಏರಿಕೆ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಕಂಡುಬಂದಿಲ್ಲ ಎನ್ನಬಹುದು.

ಇಲಾಖೆಯ ಗಮನಕ್ಕೆ ಬಾರದ ರೀತಿಯಲ್ಲಿ ಡ್ರಗ್ಸ್ ಜಾಲ ವ್ಯವಹಾರ ನಡೆಸುತ್ತಿದೆಯೇ?

ಲಕ್ಷ್ಮೀ ಪ್ರಸಾದ್: ಖಂಡಿತಾ ಇದ್ದೇ ಇರುತ್ತದೆ. ನಾವು ಎಷ್ಟೇ ಪ್ರಯತ್ನಿಸಿದರೂ ಶೇ. 100ರಷ್ಟು ಪರಿಣಾಮಕಾರಿಯಾಗಿ ಜಾಲವನ್ನು ನಿಯಂತ್ರಿಸುವುದು ಕಷ್ಟಸಾಧ್ಯ ಎಂಬುದು ನನ್ನ ಅನಿಸಿಕೆ.

ಡ್ರಗ್ಸ್ ನಿಯಂತ್ರಣಕ್ಕೆ ಇಲಾಖೆಯಿಂದ ವಿಶೇಷ ಕಾರ್ಯಕ್ರಮ ಏನಾದರೂ ಆಲೋಚನೆಯಲ್ಲಿದೆಯೇ?

ಲಕ್ಷ್ಮೀ ಪ್ರಸಾದ್: ಡ್ರಗ್ಸ್, ಪೋಕ್ಸ್ ಹಾಗೂ ಟ್ರಾಫಿಕ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಬಗ್ಗೆ ನಾವು ಈಗಾಗಲೇ ಸೈಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆ ಜತೆ ಮಾತನಾಡಿದ್ದೇವೆ. ಅವರು ಈಗಾಗಲೇ ಬೀದಿ ನಾಟಕ, ಜನ ಸಹಭಾಗಿತ್ವದ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಮುಖ್ಯವಾಗಿ ನಾಲ್ಕು ತಾಲೂಕುಗಳ ಮುಖ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಇಲಾಖೆ ವತಿಯಿಂದ ಕಾರ್ಯ ನಡೆಯುತ್ತಿದೆ.

ಡ್ರಗ್ಸ್ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರವೇನು?

ಲಕ್ಷ್ಮೀ ಪ್ರಸಾದ್: ಸಾರ್ವಜನಿಕರ ಸಹಕಾರ ಇದ್ದಾಗ ಮಾತ್ರ ಡ್ರಗ್ಸ್ ಸೇರಿದಂತೆ ಎಲ್ಲಾ ರೀತಿಯ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯ. ಮಕ್ಕಳು ಹದಿಹರೆಯದಲ್ಲಿ ಹೆಚ್ಚಾಗಿ ಶಿಕ್ಷಣ ಸಂಸ್ಥೆ ಹಾಗೂ ಮನೆಗಳಲ್ಲಿ ದಿನದ ಹೆಚ್ಚಿನ ಸಮಯ ಕಳೆಯುತ್ತಾರೆ. ಹಾಗಾಗಿ ಸಾರ್ವಜನಿಕರು ಮಾಹಿತಿ ನೀಡಿದಾಗ ಮಾತ್ರವೇ ನಮಗೆ ಕಾನೂನು ರೀತಿಯಲ್ಲಿ ಜಾಗೃತಿ ಮೂಡಿಸುವಂತಹ ಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತದೆ. ಶಿಕ್ಷಣ ಸಂಸ್ಥೆಗಳ ಒಳಗಡೆ ಪೊಲೀಸ್ ಇಲಾಖೆಯಿಂದ ದಾಳಿ ನಡೆಸುವುದಕ್ಕೆ ನನ್ನ ಸಹಮತ ಇಲ್ಲ. ಆದರೆ ಕೆಲವೊಮ್ಮೆ ದೂರುಗಳು ಬಂದಾಗ ನಾವು ಹೋಗಲೇಬೇಕಾಗುತ್ತದೆ. ಹಾಗಾಗಿ ನಾವು ಈ ರೀತಿ ದಾಳಿ ಮಾಡುವ ಬದಲು ಸಾರ್ವಜನಿಕರಿಂದ ನಿರ್ದಿಷ್ಟ ಪ್ರಕರಣದ ಬಗ್ಗೆ ನಮಗೆ ಮಾಹಿತಿ ದೊರೆತಾಗ ಇತರರಿಗೆ ತೊಂದರೆ ಆಗದಂತೆ ನಮಗೆ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ.

ಡ್ರಗ್ಸ್‌ಗೆ ಹದಿಹರೆಯವೇ ಟಾರ್ಗೆಟ್, ಪೋಷಕರಿಗೆ ನಿಮ್ಮ ಸಲಹೆ?

ಲಕ್ಷ್ಮೀ ಪ್ರಸಾದ್: ಡ್ರಗ್ಸ್ ಖರೀದಿಗೆ ಹಣ ಬೇಕು. ಪೋಷಕರು ಮಕ್ಕಳಿಗೆ ಹಣ ನೀಡುವಾಗ ಅವರು ಅದನ್ನು ಯಾಕಾಗಿ ಖರ್ಚು ಮಾಡುತ್ತಾರೆ? ಎಷ್ಟು ಪ್ರಮಾಣದಲ್ಲಿ ಖರ್ಚು ಮಾಡುತ್ತಾರೆ? ಎಂಬ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ. ಮಕ್ಕಳ ಮೇಲಿನ ಅತಿಯಾದ ಪ್ರೀತಿ ಅವರ ಭವಿಷ್ಯಕ್ಕೆ ತೊಂದರೆಯಾಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕು. ಮಕ್ಕಳ ಜತೆ ಸ್ನೇಹಿತರಾಗಿದ್ದುಕೊಂಡು ಅವರ ಚಲನವಲನಗಳ ಬಗ್ಗೆ ನಿಗಾ ಇರಿಸಬೇಕು. ಅಗತ್ಯಕ್ಕಿಂತ ಹೆಚ್ಚು ಹಣ ನೀಡಲೇಬಾರದು. ಅದರ ಜತೆಗೆ ಸ್ಮಾರ್ಟ್‌ಫೋನ್‌ಗಳ ಬಳಕೆ. ವಾಟ್ಸ್‌ಆ್ಯಪ್ ಅಥವಾ ಫೇಸ್‌ಬುಕ್‌ನಲ್ಲಿ ಮಕ್ಕಳು ಅಪರಿಚಿತರ ಜತೆ ಸಂಪರ್ಕ ಮಾಡುತ್ತಾರೆ. ಅದು ಶಿಕ್ಷಕರಿಗಾಗಲಿ, ಮಕ್ಕಳ ಪೋಷಕರಿಗಾಗಲಿ ಗಮನಕ್ಕೆ ಬರುವುದಿಲ್ಲ. ಹಾಗಾಗಿ ಮಕ್ಕಳು ಸ್ಮಾರ್ಟ್ ಫೋನ್ ಹೇಗೆ ಬಳಕೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಗಮನ ಇರಲಿ. ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗದಿರುವಂತೆ ಎಚ್ಚರಿಕೆ ವಹಿಸಬೇಕು. ಶಾಲಾ ಕಾಲೇಜು ಆಡಳಿತದ ಜತೆಗೆ ನಾವು ನಿರಂತರ ಸಂಪರ್ಕದಲ್ಲಿರುತ್ತೇವೆ. ಮಕ್ಕಳು ಮನೆ ಬಿಟ್ಟು ಹೆಚ್ಚು ಕಾಲ ಕಳೆಯುವುದು ಶಾಲಾ ಕಾಲೇಜುಗಳಲ್ಲಿ. ಉತ್ತಮವಾಗಿ ಕಲಿಯುತ್ತಿದ್ದ ಮಗುವಿನ ವರ್ತನೆಯಲ್ಲಿ ಬದಲಾವಣೆ ಕಂಡಾಗ ಶಿಕ್ಷಕರು ಈ ಬಗ್ಗೆ ಗಮನ ಹರಿಸಬೇಕು. ಮಕ್ಕಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಂದ ವಿಮುಖರಾಗುವುದು, ಸ್ನೇಹಿತರಿಂದ ದೂರವಿರುವುದು, ವೌನವಾಗಿರುವುದು, ಪದೇ ಪದೇ ಗೈರುಹಾಜರಾಗುವಂತಹ ವರ್ತನೆ ಬಗ್ಗೆ ಶಿಕ್ಷಕರು ನಿಗಾ ಇರಿಸಬೇಕು. ಈ ಸಂದರ್ಭ ಅವರು ಪೋಷಕರಿಗೆ ಮಾಹಿತಿ ನೀಡುವುದು ಅಥವಾ ಪಿಸಿಒಗಳ ಮೂಲಕ ನಮ್ಮ ಗಮನಕ್ಕೂ ತರಬಹುದು. ನಾವು ಮಕ್ಕಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ಹಾಗಾಗಿ ಶಾಲಾ ಆಡಳಿತದಿಂದ ಉತ್ತಮ ರೀತಿಯ ಮಕ್ಕಳ ಮೇಲ್ವಿಚಾರಣೆ ಅತೀ ಅಗತ್ಯ.

ಯುವ ಪೀಳಿಗೆಗೆ ಡ್ರಗ್ಸ್ ವಿರುದ್ಧ ನಿಮ್ಮ ಸಂದೇಶ?

ಲಕ್ಷ್ಮೀ ಪ್ರಸಾದ್:  ನಮ್ಮ ಶಿಕ್ಷಣ ಅಡಿಪಾಯ ಗಟ್ಟಿಯಾಗಿರಬೇಕು. ಡ್ರಗ್ಸ್ ಎಂಬ ಮಾದಕ ವಸ್ತುಗಳಿಂದ ನಾವು ಮುಖ್ಯವಾಗಿ ಶಿಕ್ಷಣದಿಂದ ವಿಮುಖರಾಗುತ್ತೇವೆ, ನಮ್ಮ ಶೈಕ್ಷಣಿಕ ಸಾಮರ್ಥ್ಯಗಳು ಕುಸಿಯುತ್ತವೆ ಎಂಬುದನ್ನು ಯುವಜನರು ಅರ್ಥ ಮಾಡಿಕೊಳ್ಳಬೇಕು. ನಾವು ಕಲಿತು ನಮ್ಮ ಉತ್ತಮ ಭವಿಷ್ಯ ರೂಪಿಸಲು ಶಿಕ್ಷಣ ಅತೀ ಅಗತ್ಯ. ಅದರ ಜತೆಗೆ ನಮ್ಮ ವ್ಯಕ್ತಿತ್ವ ವಿಕಸನ ಉತ್ತಮವಾಗಬೇಕಾದರೆ ಇಂತಹ ಮಾದಕ ವಸ್ತುಗಳಿಂದ ನಾವು ಯಾವತ್ತೂ ದೂರವಿರಬೇಕು. ಇಂತಹ ಚಟಗಳಿಂದ ನಾವು ನಮ್ಮವರಿಂದ ಸಮಾಜದಿಂದ ದೂರವಾಗುತ್ತೇವೆ ಎಂಬ ವಾಸ್ತವವನ್ನು ಯುವಕರು ಅರಿತಿರಬೇಕು. ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಸಾಕಷ್ಟು ಕನಸುಗಳನ್ನು ಹೊಂದಿರುತ್ತಾರೆ. ಪೋಷಕರು ತಮ್ಮ ಮಕ್ಕಳ ಜತೆ ಹಾಗೂ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಜತೆ ಹೊಂದಿರುವ ವಿಶ್ವಾಸವನ್ನು ಯುವಕರು ಕಾಪಾಡಬೇಕು.

Writer - ಸಂದರ್ಶನ: ಸತ್ಯಾ ಕೆ.

contributor

Editor - ಸಂದರ್ಶನ: ಸತ್ಯಾ ಕೆ.

contributor

Similar News