ಶ್ರೀಲಂಕಾ ಕ್ರಿಕೆಟ್ ತಂಡದ ಸದಸ್ಯರ ಕೈಕುಲುಕದಿರಲು ಇಂಗ್ಲೆಂಡ್ ಆಟಗಾರರ ನಿರ್ಧಾರ

Update: 2020-03-03 18:19 GMT

ಲಂಡನ್, ಮಾ.3: ಕೊರೋನ ವೈರಸ್ ಹರಡುವುದನ್ನು ತಡೆಯಲು ಶ್ರೀಲಂಕಾ ಪ್ರವಾಸದ ವೇಳೆ ತನ್ನ ಆಟಗಾರರು ಎದುರಾಳಿ ತಂಡದ ಸದಸ್ಯರ ಕೈಕುಲುಕುವ ಗೋಜಿಗೆ ಹೋಗದಿರಲು ನಿರ್ಧರಿಸಿದ್ದಾರೆ ಎಂದು ಇಂಗ್ಲೆಂಡ್ ನಾಯಕ ಜೋ ರೂಟ್ ಸೋಮವಾರ ತಿಳಿಸಿದ್ದಾರೆ.

ಎರಡು ಟೆಸ್ಟ್ ಸರಣಿಗಾಗಿ ಲಂಕಾ ಪ್ರವಾಸ ಕೈಗೊಳ್ಳಲು ತಯಾರಿ ನಡೆಸುತ್ತಿರುವ ಇಂಗ್ಲೆಂಡ್‌ನ ನಾಯಕ ಕೊರೋನ ವೈರಸ್‌ಗೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಇಂಗ್ಲೆಂಡ್ ಆಟಗಾರರು ಮೊದಲ ಟೆಸ್ಟ್ ಆರಂಭಕ್ಕೆ ಮೊದಲು ವೈರಸ್ ಸಮಸ್ಯೆಗೆ ಒಳಗಾಗಿದ್ದರು.

‘‘ದಕ್ಷಿಣ ಆಫ್ರಿಕಾದಲ್ಲಿ ತಂಡದ ಸದಸ್ಯರಿಗೆ ಅನಾರೋಗ್ಯ ಕಾಡಿದ ಸಂದರ್ಭದಲ್ಲಿ ಆಟಗಾರರೊಂದಿಗೆ ಕಡಿಮೆ ಸಂಪರ್ಕದಲ್ಲಿರಲು ನಿರ್ಧರಿಸಲಾಗಿತ್ತು. ಕ್ರಿಮಿ ಹಾಗೂ ಕೀಟಾಣುಗಳು ಹರಡುವುದನ್ನು ತಡೆಯಲು ನಮ್ಮ ವೈದ್ಯಕೀಯ ತಂಡ ಕೆಲವು ಸೂಕ್ಷ್ಮ ಸಲಹೆ ನೀಡಿತ್ತು. ನಾವು ಪರಸ್ಪರ ಕೈಕುಲುಕದೇ ಇರಲು ನಿರ್ಧರಿಸಿದೆವು. ನಿಯಮಿತವಾಗಿ ಕೈ ಸ್ವಚ್ಛಗೊಳಿಸಿಕೊಳ್ಳುತ್ತಿದ್ದೆವು’’ ಎಂದು ರೂಟ್ ಹೇಳಿದ್ದಾರೆ.

ಇಂಗ್ಲೆಂಡ್ ತಂಡ ಟೆಸ್ಟ್ ಸರಣಿಗೆ ಮೊದಲು ಶ್ರೀಲಂಕಾ ಮಂಡಳಿ ಅಧ್ಯಕ್ಷರ ಇಲೆವೆನ್ ವಿರುದ್ಧ ಶನಿವಾರ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News