ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಅಗ್ರಸ್ಥಾನ ಕಾಯ್ದುಕೊಂಡ ಭಾರತ

Update: 2020-03-03 18:27 GMT

ದುಬೈ, ಮಾ.3: ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಹೊರತಾಗಿಯೂ ಭಾರತ ಮಂಗಳವಾರ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದೆ. ನಾಯಕ ವಿರಾಟ್ ಕೊಹ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಭಾರತ 116 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 108 ಅಂಕ ಗಳಿಸಿರುವ ಆಸ್ಟ್ರೇಲಿಯ ಮೂರನೇ ಸ್ಥಾನದಲ್ಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾದ ಬಳಿಕ ನ್ಯೂಝಿಲ್ಯಾಂಡ್ ವಿರುದ್ಧ ಭಾರತ ಮೊದಲ ಬಾರಿ 0-2 ಅಂತರದಿಂದ ಸರಣಿ ಸೋತಿದೆ.

ನ್ಯೂಝಿಲ್ಯಾಂಡ್ ವಿರುದ್ಧ 4 ಇನಿಂಗ್ಸ್ ಗಳಲ್ಲಿ ಕೇವಲ 38 ರನ್ ಗಳಿಸಿ ಕಳಪೆ ಪ್ರದರ್ಶನ ನೀಡಿದ ಹೊರತಾಗಿಯೂ ಕೊಹ್ಲಿ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ನ್ಯೂಝಿಲ್ಯಾಂಡ್ ಓಪನರ್ ಟಾಮ್ ಬ್ಲಂಡೆಲ್ ಹಾಗೂ ಭಾರತದ ಓಪನರ್ ಪೃಥ್ವಿ ಶಾ, ಚೊಚ್ಚಲ ಪಂದ್ಯ ಆಡಿರುವ ವೇಗದ ಬೌಲರ್ ಕೈಲ್ ಜಮೀಸನ್ ರ್ಯಾಂಕಿಂಗ್‌ನಲ್ಲಿ ಭಾರೀ ಪ್ರಗತಿ ಸಾಧಿಸಿದ್ದಾರೆ.

ಭಾರತ ವಿರುದ್ಧ 4 ಇನಿಂಗ್ಸ್‌ಗಳಲ್ಲಿ 117 ರನ್ ಗಳಿಸಿರುವ ಬ್ಲಂಡೆಲ್ ಯಶಸ್ವಿ ಪ್ರದರ್ಶನ ನೀಡಿದ್ದಾರೆ. ಸರಣಿಯಲ್ಲಿ ಎರಡನೇ ಗರಿಷ್ಠ ಸ್ಕೋರ್ ಗಳಿಸಿದ್ದಾರೆ. ಈ ಪ್ರದರ್ಶನದ ಬಲದಿಂದ 27 ಸ್ಥಾನ ಮೇಲಕ್ಕೇರಿರುವ ಬ್ಲಂಡೆಲ್ 46ನೇ ಸ್ಥಾನ ತಲುಪಿದ್ದಾರೆ. 2018ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ ಬಳಿಕ ತಂಡಕ್ಕೆ ವಾಪಸಾಗಿದ್ದ ಶಾ ಕ್ರೈಸ್ಟ್ ಚರ್ಚ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 54 ರನ್ ಗಳಿಸಿದ್ದ ಹಿನ್ನೆಲೆಯಲ್ಲಿ 17 ಸ್ಥಾನ ಭಡ್ತಿ ಪಡೆದು 76ನೇ ಸ್ಥಾನ ತಲುಪಿದ್ದಾರೆ.

ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 2ನೇ ಸ್ಥಾನದಲ್ಲಿರುವ ಕೊಹ್ಲಿಗಿಂತ 25 ಅಂಕ ಮುಂದಿದ್ದಾರೆ. ಸ್ಮಿತ್ ಸಹ ಆಟಗಾರ ಮಾರ್ನಸ್ ಲ್ಯಾಬುಶೆನ್ ಒಂದು ಸ್ಥಾನ ಮೇಲಕ್ಕೇರಿ ಅಗ್ರ-3ರಲ್ಲಿದ್ದಾರೆ. ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ಭಾರತದ ಓಪನರ್ ಮಾಯಾಂಕ್ ಅಗರ್ವಾಲ್ ತಲಾ ಒಂದು ಸ್ಥಾನ ಭಡ್ತಿ ಪಡೆದಿದ್ದಾರೆ. ಬೌಲರ್‌ಗಳ ಪೈಕಿ ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡಿರುವ ಟಿಮ್ ಸೌಥಿ ಎರಡು ಸ್ಥಾನ ಭಡ್ತಿ ಪಡೆದು ಅಗ್ರ-4ರಲ್ಲಿದ್ದಾರೆ. ಜಸ್‌ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೌಲ್ಟ್ ಅಗ್ರ-10ಕ್ಕೆ ವಾಪಸಾಗಿದ್ದು, ತಲಾ ನಾಲ್ಕು ಸ್ಥಾನ ಭಡ್ತಿ ಪಡೆದು ಕ್ರಮವಾಗಿ 7ನೇ ಹಾಗೂ 9ನೇ ಸ್ಥಾನದಲ್ಲಿದ್ದಾರೆ.

ಯುವ ವೇಗದ ಬೌಲರ್ ಜಮೀಸನ್ 80ನೇ ಸ್ಥಾನದಿಂದ 43ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲೂ 26 ಸ್ಥಾನ ಭಡ್ತಿ ಪಡೆದಿರುವ ನೀಳಕಾಯದ ವೇಗದ ಬೌಲರ್ ಜಮೀಸನ್ ಕ್ರೈಸ್ಟ್ ಚರ್ಚ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 49 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News