ಭಾರತೀಯ ಸುದ್ದಿಮನೆಗಳಲ್ಲಿ ಮೇಲ್ಜಾತಿಗಳದ್ದೇ ಪಾರಮ್ಯ

Update: 2020-03-04 04:56 GMT

ಭಾರತಿಯ ಮಾಧ್ಯಮಗಳಲ್ಲ್ಲಿ ಶೋಷಿತ ಜಾತಿಗುಂಪುಗಳ ಪ್ರಾತಿನಿಧ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು newslaundry.com ಮತ್ತು ಆಕ್ಸ್‌ಫಾಮ್ ಜಂಟಿಯಾಗಿ ಸಂಶೋಧನಾ ಯೋಜನೆಯೊಂದನ್ನು ಕೈಗೊಂಡಿದ್ದವು. ಯೋಜನೆಯ ವರದಿಯು ಅತ್ಯಂತ ಆಘಾತಕಾರಿಯಾಗಿದೆ.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೇ ಪರಿಗಣಿಸಲ್ಪಟ್ಟಿರುವ ಭಾರತೀಯ ಮಾಧ್ಯಮಗಳಲ್ಲಿ ಈಗಲೂ ಮೇಲ್ಜಾತಿಗಳ ಪ್ರಾಬಲ್ಯವಿದೆ ಎಂದು ಸುದ್ದಿಜಾಲತಾಣ newslaundry.com ನ ಅಧ್ಯಯನ ವರದಿ ಬಹಿರಂಗಪಡಿಸಿದೆ. ಮಾಧ್ಯಮ ಜಗತ್ತಿನಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯ ಅತ್ಯಂತ ನಗಣ್ಯವಾಗಿದೆ. ಇದೇ ರೀತಿ ಒಬಿಸಿಗಳು ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟಿದ್ದರೂ ಮಾಧ್ಯಮ ಕ್ಷೇತ್ರದಲ್ಲಿ ಅವರ ಪ್ರಾತಿನಿಧ್ಯದ ಕೊರತೆಯಿದೆ ಎಂದು ಅದು ಹೇಳಿದೆ. ಅಧ್ಯಯನಕ್ಕೊಳಪಡಿಸಲಾಗಿದ್ದ 121 ಸುದ್ದಿಮನೆಗಳ ಪೈಕಿ 106ರಲ್ಲಿ ಪ್ರಮುಖ ಹುದ್ದೆಗಳಲ್ಲಿ ಮೇಲ್ಜಾತಿಗಳ ಪತ್ರಕರ್ತರೇ ತುಂಬಿದ್ದರು. ಈ ಪೈಕಿ ಯಾರೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಿರಲಿಲ್ಲ ಎಂದು newslaundry.com ವರದಿಯಲ್ಲಿ ತಿಳಿಸಿದೆ.

 1996ರಲ್ಲಿ ಅದೊಂದು ದಿನ ವಿದೇಶಿ ಪತ್ರಕರ್ತರೋರ್ವರು ಭಾರತೀಯ ಪತ್ರಕರ್ತ ಬಿ.ಎನ್.ಉನಿಯಾಲ್ ಅವರಿಗೆ ದೂರವಾಣಿ ಕರೆ ಮಾಡಿ ನಿಮಗೆ ಯಾರಾದರೂ ದಲಿತ ಪತ್ರಕರ್ತರು ಗೊತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದರು. ಹಲವಾರು ದಿನಗಳ ಕಾಲ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಬಳಿ ಈ ಬಗ್ಗೆ ಚರ್ಚೆನಡೆಸಿದ್ದರೂ ಉನಿಯಾಲ್‌ಗೆ ದಲಿತ ಪರ್ತ್ರಕರ್ತರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.

ಈಗಲೂ ಈ ಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಹತ್ತು ವರ್ಷಗಳ ಕಾಲ ದೇಶಾದ್ಯಂತ ಇಂತಹುದೇ ಹುಡುಕಾಟ ನಡೆಸಿದ್ದ ಪತ್ರಕರ್ತ ಸುದಿಪ್ತಾ ಮಂಡಲ್ ಅವರಿಗೆ ಕೊನೆಗೂ 2017ರಲ್ಲಿ ಆಂಗ್ಲ ಮಾಧ್ಯಮಗಳೊಂದಿಗೆ ಗುರುತಿಸಿಕೊಂಡಿದ್ದ ಎಂಟು ದಲಿತ ಪತ್ರಕರ್ತರನ್ನು ಪತ್ತೆ ಹಚ್ಚಲು ಸಾಧ್ಯವಾಗಿತ್ತು.

ಟಿವಿ ಸುದ್ದಿವಾಹಿನಿಗಳಲ್ಲಿ ಮುಂಚೂಣಿ ಚರ್ಚಾ ಕಾರ್ಯಕ್ರಮಗಳ ಪ್ರತಿ ನಾಲ್ವರು ನಿರೂಪಕರಲ್ಲಿ ಮೂವರು ಮೇಲ್ಜಾತಿಗಳಿಗೆ ಸೇರಿದವರಾಗಿದ್ದರು,ದಲಿತ ಅಥವಾ ಆದಿವಾಸಿ ಅಥವಾ ಒಬಿಸಿ ಗುಂಪಿಗೆ ಸೇರಿದ ಒಬ್ಬನೇ ಒಬ್ಬ ನಿರೂಪಕನಿರಲಿಲ್ಲ. ಸಮೀಕ್ಷೆಗೊಳಪಡಿಸಲಾಗಿದ್ದ 12 ಮ್ಯಾಗಝಿನ್‌ಗಳ ಕವರ್ ಪೇಜ್‌ಗಳಲ್ಲಿ ಕಾಣಿಸಿಕೊಂಡಿದ್ದ 972 ಲೇಖನಗಳ ಪೈಕಿ ಕೇವಲ 10 ಮಾತ್ರ ಜಾತಿ ಸಂಬಂಧಿತ ವಿಷಯಗಳ ಕುರಿತಾಗಿದ್ದವು.

ಇಂಗ್ಲಿಷ್ ದೈನಿಕಗಳ ಎಲ್ಲ ಲೇಖನಗಳ ಪೈಕಿ ದಲಿತರು ಅಥವಾ ಆದಿವಾಸಿಗಳು ಬರೆದ ಲೇಖನಗಳ ಸಂಖ್ಯೆ ಶೇ.5ನ್ನು ದಾಟಿರಲಿಲ್ಲ.

ಭಾರತೀಯ ಮಾಧ್ಯಮಗಳಲ್ಲಿ ಈಗಲೂ ಮೇಲ್ಜಾತಿಗಳ ಪ್ರಾಬಲ್ಯವಿದೆ ಎಂದು ಈ ಅಧ್ಯಯನವು ಸೂಚಿಸಿದೆ. ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯ ಇಲ್ಲವೇ ಇಲ್ಲ ಮತ್ತು ಪರಿಶಿಷ್ಟ ಜಾತಿಗಳು ಹೆಚ್ಚಾಗಿ ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕಾರಣಿಗಳಿಂದ ಪ್ರತಿನಿಧಿಲ್ಪಟ್ಟಿವೆಯೇ ಹೊರತು ಪತ್ರಕರ್ತರಿಂದಲ್ಲ. ಇದೇ ರೀತಿ ಒಬಿಸಿಗಳು ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟಿದ್ದರೂ ಮಾಧ್ಯಮ ಕ್ಷೇತ್ರದಲ್ಲಿ ಅವರ ಪ್ರಾತಿನಿಧ್ಯದ ಕೊರತೆಯಿದೆ.

ಮಾಧ್ಯಮಗಳಲ್ಲಿ ತಾರತಮ್ಯ ಮತ್ತು ಸಾಮಾಜಿಕ ಹೊರಗಿಡುವಿಕೆಯ ಕುರಿತು ಸಾರ್ವಜನಿಕ ಚರ್ಚೆಯೊಂದನ್ನು ಹುಟ್ಟು ಹಾಕುವುದುಈ ಯೋಜನೆಯ ಉದ್ದೇಶವಾಗಿತ್ತು. ಈಗಲೂ ವ್ಯಾಪಕವಾಗಿರುವ ಜಾತಿ ವ್ಯವಸ್ಥೆ ಈಗಲೂ ನಮ್ಮ ಸುದ್ದಿಮನೆಗಳಲ್ಲಿ ಅಸ್ತಿತ್ವದಲ್ಲಿರುವುದನ್ನು ಈ ವರದಿ ಬಯಲಿಗೆಳೆದಿದೆ.

ಇಂಗ್ಲಿಷ್ ಸುದ್ದಿವಾಹಿನಿಗಳ ಪ್ಯಾನಲಿಸ್ಟ್‌ಗಳ ಪೈಕಿ ಕೇವಲ ಶೇ.5.6ರಷ್ಟು ಪರಿಶಿಷ್ಟ ಜಾತಿಗಳಿಗೆ ಸೇರಿದ್ದು,ಪರಿಶಿಷ್ಟ ಪಂಗಡಗಳ ಪಾಲು ಶೇ.1ರಷ್ಟೂ ಇಲ್ಲ. ಅತ್ಯಂತ ವಿಲಕ್ಷಣವೆಂದರೆ ಜಾತಿ ವಿಷಯಗಳ ಕುರಿತು ಚರ್ಚೆಗಳ ಸಂದರ್ಭದಲ್ಲಿ ಶೇ.62ರಷ್ಟು ನಿರೂಪಕರು ಸಾಮಾನ್ಯ ವರ್ಗಗಳಿಗೆ ಸೇರಿದವರಾಗಿದ್ದಾರೆ. ಇಂಗ್ಲಿಷ್ ಟಿವಿ ವಾಹಿನಿಗಳಲ್ಲಿ ಶೇ.89ರಷ್ಟು ನಾಯಕತ್ವ ಹುದ್ದೆಗಳಲ್ಲಿ ಸಾಮಾನ್ಯ ವರ್ಗಗಳಿಗೆ ಸೇರಿದವರಿದ್ದು,ಮುಂಚೂಣಿಯ ಕಾರ್ಯಕ್ರಮಗಳಲ್ಲಿ ಇಂತಹ ನಿರೂಪಕರ ಪ್ರಮಾಣ ಶೇ.76ರಷ್ಟಿದೆ ಎಂದು ಸಂಶೋಧನಾ ವರದಿಯು ತಿಳಿಸಿದೆ. ಹಿಂದಿ ಸುದ್ದಿವಾಹಿಗಳ ನಾಯಕತ್ವ ಹುದ್ದೆಗಳಲ್ಲಿ ಶೇ.100ರಷ್ಟು ಮೇಲ್ಜಾತಿಗಳಿಗೆ ಸೇರಿದವರೇ ಇದ್ದಾರೆ. ಪ್ರೈಮ್ ಟೈಮ್ ಕಾರ್ಯಕ್ರಮಗಳಲ್ಲಿ ಶೇ.80ರಷ್ಟು ನಿರೂಪಕರೂ ಸಾಮಾನ್ಯ ವರ್ಗಗಳಿಗೆ ಸೇರಿದವರೇ ಆಗಿದ್ದಾರೆ.

ವೃತ್ತಪತ್ರಿಕೆಗಳ ಕಥೆಯೂ ಭಿನ್ನವಾಗಿಲ್ಲ. ಸಮೀಕ್ಷೆಗೊಳಪಡಿಸಲಾದ ಆರು ಇಂಗ್ಲಿಷ್ ಮತ್ತು ಏಳು ಹಿಂದಿ ವೃತ್ತಪತ್ರಿಕೆಗಳಲ್ಲಿ ಶೋಷಿತ ಜಾತಿ ಗುಂಪುಗಳಿಗೆ ಸೇರಿದ ಒಬ್ಬನೇ ಒಬ್ಬ ಪತ್ರಕರ್ತನೂ ನಾಯಕತ್ವದ ಹುದ್ದೆಯಲ್ಲಿಲ್ಲ. ಇಂಗ್ಲಿಷ್ ಪತ್ರಿಕೆಗಳಲ್ಲಿಯ ಸಮೀಕ್ಷೆಗೊಳಗಾದ 16,000 ಲೇಖನಗಳ ಪೈಕಿ ಶೇ.60ರಷ್ಟು ಮೇಲ್ಜಾತಿಗಳವರ ಲೇಖನಿ ಗಳಿಂದ ಮೂಡಿ ಬಂದಿದ್ದರೆ, ಹಿಂದಿ ವೃತ್ತಪತ್ರಿಕೆಗಳಲ್ಲಿ ಶೇ.56ರಷ್ಟು ಲೇಖನಗಳನ್ನು ಬರೆದವರು ಸಾಮಾನ್ಯ ವರ್ಗಗಳಿಗೆ ಸೇರಿದವರಾಗಿದ್ದಾರೆ. ಇದ್ದುದರಲ್ಲಿ ಆಶಾಕಿರಣವನ್ನು ಮೂಡಿಸಿದ್ದು ಹಿಂದಿಯ ಅಮರ ಉಜಾಲಾ ದೈನಿಕ. ಅಲ್ಲಿ ಜಾತಿ ವಿಷಯಗಳ ಮೇಲೆ ಪ್ರಕಟಿತ ಶೇ.100ರಷ್ಟು ಲೇಖನಗಳನ್ನು ದಲಿತ ಸಮುದಾಯಗಳಿಗೆ ಸೇರಿದವರೇ ಬರೆದಿದ್ದಾರೆ.

ಇಂಡಿಯಾ ಟುಡೇ, ಇಂಡಿಯಾ ಟುಡೇ ಹಿಂದಿ, ಕಾರವಾನ್ ಮತ್ತು ಸರಿತಾ ಮಾತ್ರ ತಮ್ಮ ಕವರ್ ಪೇಜ್‌ಗಳಲ್ಲಿ ಜಾತಿ ವಿಷಯಗಳಿಗೆ ಜಾಗ ನೀಡಿವೆ, ಆದರೆ ಈ ಮ್ಯಾಗಝಿನ್‌ಗಳಲ್ಲಿ ಪ್ರಕಟಿತ ಜಾತಿ ಸಂಬಂಧಿ ಲೇಖನಗಳಲ್ಲಿ ಬಹಳಷ್ಟನ್ನು ಬರೆದಿರುವುದು ಸಾಮಾನ್ಯ ವರ್ಗಗಳಿಗೆ ಸೇರಿದ ಲೇಖಕರೇ. ಸಮಾನ ಮತ್ತು ಅಭಿವೃದ್ಧಿ ಸಮಾಜಕ್ಕಾಗಿ ಎಲ್ಲರ ಪ್ರಾತಿನಿಧ್ಯ ಅತ್ಯಗತ್ಯ ಮತ್ತು ಇದಕ್ಕಾಗಿ ಭಾರತೀಯ ಸುದ್ದಿಮನೆಗಳಲ್ಲಿ ಶೋಷಿತ ಸಮುದಾಯಗಳಿಗೂ ಉನ್ನತ ಸ್ಥಾನ ದೊರಕಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಮತ್ತು ಇತರ ಕ್ಷೇತ್ರಗಳಿಗಿಂತ ಇದು ಹೆಚ್ಚಾಗಿ ಮಾಧ್ಯಮ ಕ್ಷೇತ್ರಕ್ಕೆ ಅನ್ವಯಿಸುತ್ತದೆ ಎನ್ನುವುದನ್ನು ಸಂಶೋಧನಾ ವರದಿಯು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News