ಜಾತಿ-ಧರ್ಮ ಭೇದವಿಲ್ಲದೆ ಹಲವು ಅಪಘಾತ ಗಾಯಾಳುಗಳ ಪ್ರಾಣ ರಕ್ಷಿಸಿದ ಕಣಂತೂರು ಇಸ್ಮಾಯೀಲ್

Update: 2020-03-04 15:14 GMT

ಮಂಗಳೂರು, ಮಾ.4: ಮುಡಿಪು, ಬಾಳೆಪುಣಿ ಪರಿಸರದಲ್ಲಿ ರಸ್ತೆ ಅಪಘಾತದ ಸುದ್ದಿ ತಿಳಿದ ತಕ್ಷಣ ನೆರವಿಗೆ ಧಾವಿಸುವವರು ಕಣಂತೂರು ಇಸ್ಮಾಯೀಲ್. ಅಪಘಾತವಾದ ತಕ್ಷಣ ಗಾಯಾಳು ಬಿದ್ದು ನರಳುತ್ತಿದ್ದರೆ ಯಾವುದೇ ಅಳುಕಿಲ್ಲದೆ ಅವರನ್ನು ಆಸ್ಪತ್ರೆಗೆ ದಾಖಲಿಸುವುದರಲ್ಲೂ ಇವರು ಮೊದಲಿಗರು. ಈ ಪರಿಸರದಲ್ಲಿ ಅಪಘಾತವಾದ ತಕ್ಷಣ ಜನರಿಗೆ ತಟ್ಟನೆ ನೆನಪಿಗೆ ಬರುವುದು ಕೂಡ ಇವರ ಹೆಸರಾಗಿದೆ. ಹೀಗೆ ತನಗರಿವಿಲ್ಲದಂತೆ ಸಮಾಜಸೇವೆ ಯಲ್ಲಿ ತೊಡಗಿಸಿಕೊಂಡ ಕಣಂತೂರು ಇಸ್ಮಾಯೀಲ್ 17ಕ್ಕೂ ಅಧಿಕ ಮಂದಿಯ ಪ್ರಾಣ ರಕ್ಷಿಸಿದ್ದಾರೆ.

ಮುಡಿಪು ಸಮೀಪದ ಹೂಹಾಕುವಕಲ್ಲು ಪ್ರದೇಶದಲ್ಲಿ ಹಣ್ಣಿನ ವ್ಯಾಪಾರಿಯಾಗಿರುವ ಇಸ್ಮಾಯೀಲ್ ಇತ್ತೀಚೆಗೆ ಹಳೆ ಸಾಮಾಗ್ರಿಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಅಂಗಡಿ ತೆರೆದಿದ್ದಾರೆ.

ಈ ಪರಿಸರದ ಎಲ್ಲೇ ರಸ್ತೆ ಅಪಘಾತ ಸಂಭವಿಸಿದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸುವ ಇಸ್ಮಾಯೀಲ್ ಜಾತಿ-ಧರ್ಮ ಭೇದವಿಲ್ಲದೆ ಸ್ಥಳೀಯ ಪರಿಚಯದವರ ವಾಹನವನ್ನು ಕಾಡಿಬೇಡಿ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗುತ್ತಾರೆ. ಅಗತ್ಯಬಿದ್ದಲ್ಲಿ ರಾತ್ರಿ ಹಗಲೆನ್ನದೆ ಆಸ್ಪತ್ರೆಯಲ್ಲೇ ರೋಗಿಗಳನ್ನು ಉಪಚರಿಸುತ್ತಾರೆ. ಹಾಗಾಗಿ ಈ ಪರಿಸರದಲ್ಲಿ ಅಪಘಾತ ಸಂಭವಿಸಿದ ತಕ್ಷಣ ಇಸ್ಮಾಯೀಲ್‌ರಿಗೆ ಸುದ್ದಿ ಮುಟ್ಟಿಸುತ್ತಾರೆ.

ಶಾಲಾ ಮಕ್ಕಳಿಗೆ ತರಕಾರಿ ತೋಟ:

ಅನಕ್ಷರಸ್ಥರಾಗಿರುವ ಇಸ್ಮಾಯೀಲ್ ತನ್ನ ಮನೆ ಸಮೀಪದ ಹೂಹಾಕುವಕಲ್ಲು ಶಾಲೆಯ ಖಾಲಿ ಜಾಗದಲ್ಲಿ ಒಂದೆರಡು ವರ್ಷದಿಂದ ವಿವಿಧ ತರಕಾರಿಗಳನ್ನು ಬೆಳೆದಿದ್ದಾರೆ. ತಮ್ಮ ಮನೆಯಿಂದಲೇ ಬೂದಿ, ಗೊಬ್ಬರವನ್ನು ಆಟೊದಲ್ಲಿ ಸಾಗಿಸಿ ಅವುಗಳನ್ನು ಪೋಷಿಸುತ್ತಾರೆ. ಬೆಳೆದ ತರಕಾರಿಗಳನ್ನು ಶಾಲೆಯ ಮಕ್ಕಳಿಗೆ ಉಚಿತವಾಗಿ ನೀಡುತ್ತಿದ್ದಾರೆ.

ಮುಡಿಪು ನವಗ್ರಾಮ ಬಡಾವಣೆ ಬಳಿಯ ಬಾಳೆಪುಣಿ ಗ್ರಾಪಂ ಪರಿಸರದ 8 ಸೆಂಟ್ಸ್ ಜಾಗದಲ್ಲಿ ಇಸ್ಮಾಯೀಲ್ ವಾಸವಾಗಿದ್ದು, ಇಸ್ಮಾಯೀಲ್ ಶಿಕ್ಷಣ ಪ್ರೇಮಿಯಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಇಸ್ಮಾಯೀಲ್ ಪುಸ್ತಕ-ಪೆನ್ನು ಇಲ್ಲ ಎಂದು ಮರುಗುವ ಶಾಲಾ ಮಕ್ಕಳಿಗೆ ಸ್ವತಃ ತಾವೇ ಖರೀದಿಸಿ ಕೊಡುತ್ತಾರೆ. ಇದೀಗ ಅಂತಹ ಮಕ್ಕಳ ಸಂಖ್ಯೆ ಹೆಚ್ಚಾದ ಕಾರಣ ಮುಡಿಪು ಯೂತ್ ಕ್ಲಬ್ ಸಹಯೋಗದಲ್ಲಿ ಪುಸ್ತಕ ಪರಿಕರಗಳನ್ನು ವಿತರಿಸುತ್ತಾರೆ.

ಬಾವಿ ತೋಡಿದರು:

ಬಾಳೆಪುಣಿ ಪರಿಸರದಲ್ಲಿ ಕೆಲವು ವರ್ಷಗಳ ಹಿಂದೆ ಪಂಚಾಯತ್‌ನ ಕೊಳವೆಬಾವಿ ಕೆಟ್ಟು ಹೋಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಅಲ್ಲಿದ್ದ ಜನರಿಗೆ ಕೈಪಂಪ್ ಒಂದೇ ಆಧಾರವಾಗಿತ್ತು. ರಾತ್ರಿ 12 ಗಂಟೆಯವರೆಗೂ ಮಹಿಳೆಯರು ನೀರಿಗಾಗಿ ಸಂಕಷ್ಟ ಪಡುತ್ತಿದ್ದರು. ಇದನ್ನು ಮನಗಂಡ ಇಸ್ಮಾಯೀಲ್ ತನ್ನ ಮನೆ ಮುಂದಿನ ಜಾಗದಲ್ಲಿ ತಾನೇ ಬಾವಿ ತೋಡಲಾರಂಭಿಸಿದರು. ಹಾಗೇ ನೀರು ದೊರೆತ ಬಳಿಕ ಇಸ್ಮಾಯೀಲ್ ರಾಟೆ ಹಗ್ಗವನ್ನು ಸ್ವತಃ ತಂದು ಹಾಕಿ ಪರಿಸರದ ಜನರಿಗೆ ಕುಡಿಯುವ ನೀರು ಸಿಗುವಂತೆ ಮಾಡಿದರು. ಈಗಲೂ ಆಸುಪಾಸಿನವರು ಈ ಬಾವಿಯನ್ನೆೀ ಆಶ್ರಯಿಸುತ್ತಿದ್ದಾರೆ.

ವಿವಿಧ ರೀತಿಯಲ್ಲಿ ನೆರವು:

‘ನಾನು ಬಾಳೆಪು ಣಿಯ ಹೂಹಾಕುವಕಲ್ಲಿನಲ್ಲಿ 20 ವರ್ಷಗಳ ಹಿಂದೆ ಹಣ್ಣಿನ ವ್ಯಾಪಾರ ಆರಂಭಿಸಿದೆ. ಅದು ನನ್ನ ಬದುಕಿನ ಒಂದು ತಿರುವು. ನನ್ನ ಅಂಗಡಿ ಜನ ಸಂಪರ್ಕದ ಕೇಂದ್ರವಾಗಿತ್ತು. ವ್ಯಾಪಾರ ಚೆನ್ನಾಗಿಯೇ ನಡೆದುಕೊಂಡು ಬರುತ್ತಿತ್ತು. ಕೆಲವರು ಹಣ್ಣು ತೆಗೆದುಕೊಂಡು ಹಣ ನಾಳೆ ಕೊಡುತ್ತೇನೆ ಬರೆದಿಡು ಎನ್ನುತ್ತಿದ್ದರು. ಈ ಪಟ್ಟಿ ಬೆಳೆಯುತ್ತಾ ಹೋಯಿತೇ ಹೊರತು ಹಣ ವಾಪಸ್ ಬರಲಿಲ್ಲ. ಬಳಿಕ ಗುಜುರಿ ಸಂಗ್ರಹದ ಅಂಗಡಿ ಆರಂಭಿಸಿದೆ. ಹೀಗೆ ಲಾಭ ನಷ್ಟಕ್ಕಿಂತ ಅಂಗಡಿ ಮೂಲಕ ಜನರ ಸಂಪರ್ಕ ಹೆಚ್ಚುಗುತ್ತಾ ಹೋಯಿತು’ ಎನ್ನುತ್ತಾರೆ ಇಸ್ಮಾಯೀಲ್.

ಒಂದು ದಿನ ರಾತ್ರಿ ನಮ್ಮ ಪರಿಚಯದ ಒಬ್ಬರು ಪೋನ್ ಮಾಡಿ ಹೆಂಡತಿಗೆ ಹುಷಾರಿಲ್ಲ. ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕು, ವಾಹನದ ವ್ಯವಸ್ಥೆ ಮಾಡಿಕೊಡಿ ಎಂದರು. ಅದರಂತೆ ನಾನು ಮುಂಜಾನೆ 3ರ ವೇಳೆಗೆ ವಾಹನದ ವ್ಯವಸ್ಥೆ ಮಾಡಿಕೊಟ್ಟೆ. 5 ಗಂಟೆಗೆ ಆಕೆ ನಿಧನರಾದ ಸುದ್ದಿ ನನಗೆ ಬಂತು. ಅದನ್ನು ಕೇಳಿ ನಾನು ತುಂಬಾ ವ್ಯಥೆಪಟ್ಟೆ. ಆದರೂ ನಾನು ಮಾಡಿದ ಆ ಸಣ್ಣ ನೆರವನ್ನು ಆ ಮನೆಯವರು ಇಂದೂ ಮರೆತಿಲ್ಲ. ಅವರ ಮನೆಯ ಪೂಜೆಗೆ ನನ್ನನ್ನು ಕರೆದು ಈಗಲೂ ಊಟ ಹಾಕುತ್ತಾರೆ. ಇಂತಹ ಪ್ರಕರಣಗಳು ಮಾನವರೆಲ್ಲಾ ಒಂದೆ ಎನ್ನುವುದನ್ನು ಆ ಘಟನೆ ನನಗೆ ಕಲಿಸಿತು ಎನ್ನುವ ಇಸ್ಮಾಯೀಲ್ ಕೆಲವೊಂದು ಘಟನೆಗಳನ್ನು ಬಿಚ್ಚಿಡುತ್ತಾರೆ.

ಮಾದರಿ ಗ್ರಾಮದ ಕನಸುಗಾರ

ಮುಡಿಪು ಪರಿಸದರಲ್ಲಿ ಜನ ಶಿಕ್ಷಣ ಟ್ರಸ್ಟ್‌ನ ಶೀನ ಶೆಟ್ಟಿ ಹಾಗೂ ಕೃಷ್ಣ ಮೂಲ್ಯ ಎಂಬವರು ನನಗೆ ಧೈರ್ಯ ಕೊಟ್ಟಿದ್ದಾರೆ. ನನ್ನನ್ನು ಪ್ರೋತ್ಸಾಹಿಸಿದ್ದಾರೆ. ನಮ್ಮೂರಿನಲ್ಲಿ ಎಲ್ಲರೂ ಸೇವಾ ನಿರತರಾಗಬೇಕು. ಗ್ರಾಮವು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮವಾಗಬೇಕು. ನನ್ನ ಮನೆಯ ಸುತ್ತ, ಸ್ವಚ್ಛತೆ, ಹಸಿರು ಪರಿಸರ ತೋಟ ಹಾಗೂ ಮನೆಗೆ ಸೋಲಾರ್ ದೀಪ ಅಳವಡಿಸಿದೆ. ನನ್ನ ಸಂಬಂಧಿಕರ ಮನೆಗೂ ಸೋಲಾರ್ ದೀಪ ಅಳವಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ನಾವೆಲ್ಲಾ ಅಣ್ಣ ತಮ್ಮಂದಿರಂತೆ ಬದುಕಬೇಕು, ಮಾದರಿ ಗ್ರಾಮ ಕಟ್ಟಬೇಕು ಎಂಬ ಕನಸು ಕಂಡಿದ್ದೇನೆ ಎಂದು ಇಸ್ಮಾಯೀಲ್ ಹೇಳುತ್ತಾರೆ.

Writer - ಪುಷ್ಪರಾಜ್ ಬಿ.ಎನ್.

contributor

Editor - ಪುಷ್ಪರಾಜ್ ಬಿ.ಎನ್.

contributor

Similar News