ಹಣವುಳ್ಳವರು ಮಾತ್ರ ಬದುಕಲು ಸಾಧ್ಯವೆಂದರೆ ಸಂವಿಧಾನಕ್ಕೆ ಅರ್ಥವಿದೆಯೇ ?: ಸಚಿವ ಮಾಧುಸ್ವಾಮಿ
ಬೆಂಗಳೂರು, ಮಾ. 4: ‘ಬಡವರು ಮತ್ತು ಶ್ರಮಜೀವಿಗಳಿಂದು ದುಡಿದು ಬದುಕಲು ಸಾಧ್ಯವಿಲ್ಲ. ಹಣವುಳ್ಳ ಶ್ರೀಮಂತರು ಮಾತ್ರ ಈ ಸಮಾಜದಲ್ಲಿ ಬದುಕಲು ಸಾಧ್ಯವೆಂದರೆ ಸಂವಿಧಾನ ಮತ್ತು ಪ್ರಜಾತಂತ್ರಕ್ಕೆ ಅರ್ಥವಿದೆಯೇ?’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಸಂವಿಧಾನದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಡವರು-ಶ್ರೀಮಂತರ ನಡುವಿನ ಅಂತರ ಹೆಚ್ಚಾಗಿದ್ದು, ಬಡವರು ಬಡವರಾಗಿದ್ದು, ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ. ಹಳ್ಳಿಯ ಜನರು ಇಂದಿಗೂ ಎರಡನೇ ದರ್ಜೆ ಪ್ರಜೆಗಳಾಗಿ ಬದುಕುತ್ತಿದ್ದಾರೆ ಎಂದು ಗಮನ ಸೆಳೆದರು.
ಯಾರ ಹತ್ತಿರ ಅಧಿಕ ಸಂಪತ್ತಿದೆ, ಅವರಿಂದ ಸ್ವಲ್ಪ ಸಂಪತ್ತನ್ನು ಸರಕಾರ ಪಡೆದುಕೊಂಡು ಇಲ್ಲದವರಿಗೆ ಹಂಚಿಕೆ ಮಾಡುವ ಉದ್ದೇಶಕ್ಕಾಗಿಯೇ ತೆರಿಗೆ ವ್ಯವಸ್ಥೆ ರೂಪಿಸಿದ್ದು. ಆದರೆ, ಅದು ಇಂದು ಸಮರ್ಪಕವಾಗಿ ಆಗುತ್ತಿಲ್ಲ. ನಮ್ಮನ್ನು ಹಿಂದುಳಿದ ವರ್ಗಕ್ಕೆ, ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ ಎಂಬ ಬೇಡಿಕೆ ಹೆಚ್ಚಿದ್ದು, ಸೌಲಭ್ಯಗಳು ಸಿಕ್ಕರೆ ಸಾಕು ಎಂಬ ಮನೋಭಾವ ಬೆಳೆಯುತ್ತಿದೆ ಎಂದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ರಂಗ ಒಂದಕ್ಕಿಂತ ಒಂದು ಮೇಲರಿಮೆ ಬೆಳೆಸಿಕೊಂಡಿದ್ದು, ಕಾರ್ಯವ್ಯಾಪ್ತಿ ಮೀರಿ ವರ್ತಿಸುತ್ತಿರುವುದು ಅಪಾಯಕಾರಿ. ನಾವೇ ಶ್ರೇಷ್ಠ ಎಂಬ ಮನಸ್ಥಿತಿ ಹೆಚ್ಚಾಗಿದೆ. ಹೀಗಾಗಿ ಎಲ್ಲರೂ ತಮ್ಮ ಮಿತಿಯನ್ನು ಅರಿತು ಕೆಲಸ ಮಾಡಬೇಕಿದೆ ಎಂದು ಅವರು ಪ್ರತಿಪಾದಿಸಿದರು.
‘ಯಥಾ ರಾಜ ತಥಾ ಪ್ರಜೆ’ ಎಂಬ ಘೋಷ ಬದಲಾಗಿದ್ದು, ಯಥಾ ಪ್ರಜೆ, ತಥಾ ರಾಜ ಎಂಬಂತೆ ಆಗಿದೆ. ಶಾಸಕಾಂಗ ತನ್ನ ಕಾರ್ಯದಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಭವಿಷ್ಯದ ಪರಿಣಾಮದ ಕುರಿತು ಗಂಭೀರವಾಗಿ ಆಲೋಚಿಸಬೇಕು. ಸಂವಿಧಾನದ ಆಶಯಗಳ ಸಂರಕ್ಷಣೆಗಾಗಿ ನಿರ್ಭೀತಿಯಿಂದ ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದರು.